ಫೆ.24: ಮಂಗಳೂರಿನಲ್ಲಿ ಕಿಯೋನಿಕ್ಸ್ ನಿಂದ ವಿಜ್ಞಾನ, ತಂತ್ರಜ್ಞಾನ ಸಮಾವೇಶ

Update: 2021-02-22 09:41 GMT

ಮಂಗಳೂರು, ಫೆ.22: ಮಂಗಳೂರಿನಲ್ಲಿ ಸುಸಜ್ಜಿತ ವಿಜ್ಞಾನ ತಂತ್ರಜ್ಞಾನ ಕೇಂದ್ರವನ್ನು ಆರಂಭಿಸುವ ಚಿಂತನೆ ಹೊಂದಿದ್ದು ಇದಕ್ಕೆ ಪೂರಕವಾಗಿ ಫೆ.24ರಂದು ಕಿಯೋನಿಕ್ಸ್ ನಿಂದ ಒಂದು ದಿನದ ವಿಜ್ಞಾನ ತಂತ್ರಜ್ಞಾನ ದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ಅಕಾಡೆಮಿ, ಕೈಗಾರಿಕೆ ಮತ್ತು ಸರ್ಕಾರದ ಅಧಿಕಾರಿಗಳು,ಪ್ರತಿನಿಧಿಗಳು ಒಳಗೊಂಡಂತೆ ಒಂದು ದಿನದ ಸಮಾವೇಶ ನಡೆಯಲಿದೆ.

ಈ ಸಮಾವೇಶದಲ್ಲಿ ಗುಂಪು ಚರ್ಚೆಗಳು ಮತ್ತು ಸಂವಾದಾತ್ಮಕ ಅಧಿವೇಶ ನಗಳನ್ನು ಒಳಗೊಂಡಿರುತ್ತದೆ. ಮಂಗಳೂರನ್ನು ಜಾಗತಿಕ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರವನ್ನಾಗಿ ಮಾಡಲು ಇದು ಸ್ಪಷ್ಟವಾದ ಕ್ರಿಯಾತ್ಮಕ ಸಮಯಸೂಚಿಗೆ ಆಧಾರವಾಗಲಿದೆ. ಈ ಯೋಜನೆಯ ಮೂಲಕ ಸಾಕಷ್ಟು ಯುವಕರಿಗೆ ಉದ್ಯೋಗ ಸೃಷ್ಟಿಯ ಉದ್ದೇಶ ಹೊಂದಲಾಗಿದೆ. ನಾಗರಿಕರು ಮತ್ತು ಎಲ್ಲಾ ಪಾಲುದಾರರ ಸಕ್ರಿಯ ಭಾಗವಹಿಸುವಿಕೆಗೆ ಮಹತ್ವ ನೀಡಲಾಗಿದೆ. ಮಂಗಳೂರಿನ ಎಲ್ಲಾ ಸಂಪನ್ಮೂಲಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ವಿಶ್ವ ತಾಣವನ್ನಾಗಿ ಮಾಡಲು, ವಿಶ್ವ ನಾವೀನ್ಯತೆ ಕೇಂದ್ರವಾಗಿ ಬೆಳೆಸುವ ಉದ್ದೇಶವನ್ನು ಈ ಸಮಾವೇಶ ಹೊಂದಿದೆ. ರಾಜ್ಯದ ಉನ್ನತ ಶಿಕ್ಷಣ, ಮಾಹಿತಿಯ ಖಾತೆಗಳನ್ನು ಹೊಂದಿರುವ ಉಪಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ್ ಸಿ.ಎನ್ ಅವರು ಈ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ,ಸಂಪನ್ಮೂಲ ವ್ಯಕ್ತಿ ಸ್ಟೀವನ್ ಡೆನಿಸ್ ಮೊದಲಾದ ವರು ಭಾಗವಹಿಸಲಿದ್ದರೆ.

1976 ರಲ್ಲಿ ದ.ಕ ಜಿಲ್ಲೆಯ ರಾಮಕೃಷ್ಣ ಬಾಳಿಗ ಅವರ ಅಧ್ಯಕ್ಷತೆಯಲ್ಲಿ ಆರಂಭಗೊಂಡು ರಾಜ್ಯದ  ಪ್ರಮುಖ ಐ‌.ಟಿ ತಂತ್ರಜ್ಞಾನ ಕೇಂದ್ರವಾಗಿ ಬೆಳೆದಿದೆ ಎಂದು ಹರಿಕ್ರಷ್ಣ ಬಂಟ್ವಾಳ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಮಾವೇಶದ ಸಂಪನ್ಮೂಲ ವ್ಯಕ್ತಿ ಸ್ಟೀವನ್ ಡೆನಿಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News