×
Ad

ವಿಕಲಚೇತನರ ಅಭ್ಯುದಯಕ್ಕೆ ಶ್ರಮಿಸುವ ಕೇರಳದ ಅತ್ಯುತ್ತಮ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ 'ಅಕ್ಕರ ಫೌಂಡೇಶನ್'

Update: 2021-02-22 15:29 IST

ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯ ಮುಳಿಯಾರ್ ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಕರ ಫೌಂಡೇಶನ್ ಸೆಂಟರ್ ಫಾರ್ ಚೈಲ್ಡ್ ಡೆವಲೆಪ್‍ಮೆಂಟ್ ವಿಕಲಚೇತನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಅತ್ಯುತ್ತಮ  ಸಂಸ್ಥೆ ಎಂದು ಗುರುತಿಸಲ್ಪಟ್ಟಿದೆ. ಕೋಝಿಕ್ಕೋಡ್‍ನಲ್ಲಿ ಸಾಮಾಜಿಕ ನ್ಯಾಯ ಖಾತೆಯ ವಿವಿಧ ಯೋಜನೆಗಳ ಉದ್ಘಾಟನಾ  ಸಮಾರಂಭದಲ್ಲಿ ಈ  ವಿಚಾರವನ್ನು ರಾಜ್ಯ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸಚಿವೆ ಶ್ರೀಮತಿ ಶೈಲಜಾ ಟೀಚರ್ ಘೋಷಿಸಿದರು.

ಸೆರೆಬ್ರಲ್ ಪಾಲ್ಸಿ, ಡೌನ್ ಸಿಂಡ್ರೋಮ್, ಆಟಿಸಂ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳು ಹಾಗೂ ಇತರ ಭಿನ್ನ ಸಾಮಥ್ರ್ಯದ ಮಕ್ಕಳು ಚಿಕಿತ್ಸೆಗಾಗಿ ಅಕ್ಕರ ಫೌಂಡೇಶನ್‍ಗೆ ಆಗಮಿಸುತ್ತಾರೆ. ಇಲ್ಲಿ ತಜ್ಞರ ವೈದ್ಯರ ಕನ್ಸಲ್ಟೇಶನ್, ಫಿಸಿಯೋಥೆರಪಿ, ಸ್ಪೀಚ್ ಥೆರಪಿ, ಆಕ್ಯುಪೇಶನಲ್ ಥೆರಪಿ, ಬಿಹೇವಿಯರಲ್ ಥೆರಪಿ, ವಿಶೇಷ ಶಿಕ್ಷಣ ಹಾಗೂ ಸಂಗಿತ ಥೆರಪಿ ಕೂಡ ಒದಗಿಸಲಾಗುತ್ತಿದೆ.

ಇವುಗಳ ಹೊರತಾಗಿ ಅಕ್ಕರ ಫೌಂಡೇಶನ್ ಭಿನ್ನ ಸಾಮರ್ಥ್ಯದವರ ಅಭಿವೃದ್ಧಿಗಾಗಿ ವಿವಿಧ ರೀತಿಯಲ್ಲಿ ಸಕ್ರಿಯವಾಗಿ ಶ್ರಮಿಸಿ ಎಲ್ಲರ ಶ್ಲಾಘನೆಯನ್ನು ಪಡೆಯುವುದರ ಜತೆಗೆ ಈಗ ಅತ್ಯುತ್ತಮ ಸಂಸ್ಥೆಯೆಂದೂ ಗುರುತಿಸಲ್ಪಟ್ಟಿದೆ.

ವಿಶೇಷ ಮಕ್ಕಳ ಪ್ರಥಮ ಮ್ಯೂಸಿಕ್ ಬ್ಯಾಂಡ್ ಎಂದು ಗುರುತಿಸಲ್ಪಟ್ಟಿರುವ ಅಕ್ಕರ ಮ್ಯೂಸಿಕ್ ಬ್ಯಾಂಡ್  ಬಿಡುಗಡೆಗೊಳಿಸಿರುವ ಮಕ್ಕಳ ಆಲ್ಬಂಗಳು ಈಗಾಗಲೇ  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ ಹಾಗೂ ಹಲವಾರು ಸೆಲೆಬ್ರಿಟಿಗಳೂ ಇವುಗಳನ್ನು ಶೇರ್ ಮಾಡಿದ್ದಾರೆ.

ಆರ್ಥಿಕ ವರ್ಷ 2019-20ರಲ್ಲಿ ಫೌಂಡೇಶನ್ ಕಾಸರಗೋಡು ವಿಕಲಚೇತನರ ಸಮೀಕ್ಷೆ, ಫಿಸಿಯೋಥೆರಪಿ ಶಿಬಿರ, ವೈದ್ಯಕೀಯ ಶಿಬಿರ, ವಿಶೇಷ ಸಹಾಯವಾಣಿ, ಅಂಗವಿಕಲತೆಯ ಕುರಿತ ವಿಚಾರಸಂಕಿರಣ, ಮಕ್ಕಳ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಕಂಡು ಬರುವ ನ್ಯೂನತೆಗಳನ್ನು ಆರಂಭದಲ್ಲಿಯೇ ಗುರುತಿಸಲು ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ಕಾರ್ಯಕ್ರಮ ಸಹಿತ ಹಲವಾರು ಚಟುವಟಿಕೆಗಳನ್ನು  ನಡೆಸಿದೆ.

ಸಂಗಮ್, ವಿಕಲಚೇತನ ಮಕ್ಕಳಿಗೆ ಹೌಸ್ ಬೋಟ್ ಅಸೋಸಿಯೇಶನ್, ಜಾಗೃತಿ ಕಾರ್ಯಕ್ರಮ, ಜಿಲ್ಲಾ ಅಂಗವಿಕಲ ಮಕ್ಕಳ ಕ್ರಿಕೆಟ್ ಟೀಮ್ ಸ್ಪಾನ್ಸರ್‍ಶಿಪ್ ಸಹಿತ ಹಲವಾರು ಇತರ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ತನ್ನನ್ನು ಫೌಂಡೇಶನ್ ತೊಡಗಿಸಿಕೊಂಡಿದೆ.

ಪ್ರಸ್ತುತ ಅಕ್ಕರ ಫೌಂಡೇಶನ್‍ನಲ್ಲಿ ರಾಜ್ಯದ ವಿವಿಧೆಡೆಗಳ ಸುಮಾರು 130 ಕುಟುಂಬಗಳ ಸದಸ್ಯರುಗಳಿಗೆ  ಸೂಕ್ತ ಚಿಕಿತ್ಸೆ ದೊರಕುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News