ನೆಡ್ಚಿಲು: ರೈತರ ಸಾಮರ್ಥ್ಯವೃದ್ಧಿ ತರಬೇತಿ ಕಾರ್ಯಕ್ರಮ
ಉಪ್ಪಿನಂಗಡಿ: ದ.ಕ. ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಉಪ್ಪಿನಂಗಡಿ ಹೋಬಳಿಯ ರೈತ ಸಂಪರ್ಕ ಕೇಂದ್ರದ ಜಂಟಿ ಆಶ್ರಯದಲ್ಲಿ ಮಣ್ಣು ಆರೋಗ್ಯ ಚೀಟಿ ಕಾರ್ಯಕ್ರಮದಡಿಯಲ್ಲಿ ರೈತರ ಸಾಮರ್ಥ್ಯವೃದ್ಧಿ ತರಬೇತಿ ಕಾರ್ಯಕ್ರಮ ಇಲ್ಲಿನ ನೆಡ್ಚಿಲ್‌ನ ಲಕ್ಷ್ಮಣ ಗೌಡರ ಮನೆಯಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾಚಂದ್ರ ಮುಳಿಯ, ಸರಕಾರದಿಂದ ಕೃಷಿಕರಿಗಾಗಿ ಹಲವು ಯೋಜನೆಗಳು ಇದ್ದು, ಆದರೆ ಮಾಹಿತಿಯ ಕೊರತೆಯಿಂದ ಅವುಗಳು ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಆದ್ದರಿಂದ ಇಂತಹ ತರಬೇತಿ ಕಾರ್ಯಕ್ರಮಗಳನ್ನು ಕೃಷಿಕರು ಸದುಪಯೋಗಪಡಿಸಿಕೊಳ್ಳಬೇಕು. ಗ್ರಾ.ಪಂ. ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ದಿನವೇ ಮೊದಲನೆಯದಾಗಿ ರೈತರ ಕಾರ್ಯಕ್ರಮವನ್ನೊಂದನ್ನು ಉದ್ಘಾಟಿಸಲು ಸಿಕ್ಕಿರುವುದು ನನ್ನ ಸುಯೋಗ ಎಂದರು.
ಉಪ್ಪಿನಂಗಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಲ್ಫೆçಡ್ ಲಾರೆನ್ಸ್ ರೊಡ್ರಿಗಸ್ ಮಾತನಾಡಿ, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಮಾಹಿತಿ ನೀಡಿದರಲ್ಲದೆ, ರೈತ ಇಂದು ತೀರಾ ಕಷ್ಟದಲ್ಲಿದ್ದಾನೆ. ರೈತರಿಗಾಗಿ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಆದರೆ ರೈತರ ನಿರಾಸಕ್ತಿಯಿಂದಾಗಿ ಅವುಗಳಿಗೆ ಹಿನ್ನಡೆಯಾಗುತ್ತಿದೆ. ಸರಕಾರದ ಯೋಜನೆಯ ಬಗ್ಗೆ ಮಾಹಿತಿ ತಿಳಿಯಲು ಗ್ರಾಮಸ್ಥರು ಗ್ರಾಮ ಸಭೆ, ವಾರ್ಡ್ ಸಭೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದು ಅಗತ್ಯ. ಸರಕಾರದ ಯೋಜನೆಗಳು ಸರಿಯಾಗಿ ಅನುಷ್ಠಾನವಾಗಬೇಕಿದ್ದರೆ ಜನರ ಸಹಕಾರವೂ ಅಗತ್ಯ ಎಂದರು.
ಪುತ್ತೂರು ತಾಲೂಕು ಕೃಷಿ ಮೋರ್ಚಾದ ಅಧ್ಯಕ್ಷ ರಾಮಚಂದ್ರ ಮಣಿಯಾಣಿ ಮಾತನಾಡಿ, ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಅದರಲ್ಲಿ ತೊಡಗಿದಾಗ ಮಾತ್ರ ಲಾಭಗಳಿಸಲು ಸಾಧ್ಯ ಎಂದರು.
ಬಳಿಕ ಸಂಪನ್ಮೂಲ ವ್ಯಕ್ತಿಗಳಾದ ವಿಠಲ ರೈ ಅವರು ಮಣ್ಣು ಆರೋಗ್ಯ ಚೀಟಿ ಹಾಗೂ ರೈತರ ಸಾಮರ್ಥ್ಯವೃದ್ಧಿ ಬಗ್ಗೆ, ಸುಲೈಮಾನ್ ಅವರು ಅಣಬೆ ಬೆಳೆಯುವ ಬಗ್ಗೆ ಮತ್ತು ಧರ್ನಪ್ಪ ಗೌಡ ಅವರು ಮಲ್ಲಿಗೆ ಕೃಷಿಯ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಉಪ್ಪಿನಂಗಡಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ತಿರುಪತಿ ಎನ್. ಭರಮಣ್ಣನವರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಾಬು ಗೌಡ ನೆಡ್ಚಿಲ್, ಲಕ್ಷ್ಮಣ ಗೌಡ ನೆಡ್ಚಿಲ್, ರಾಮಚಂದ್ರ ನೆಡ್ಚಿಲ್, ಪರಮೇಶ್ವರ ಕಂಪ, ವಾಸುದೇವ ಟಿ., ಸದಾನಂದ ಕಿಂಡೋವು, ರಾಮಣ್ಣ ಶೆಟ್ಟಿ, ಧರ್ನಪ್ಪ ನಾಯ್ಕ, ಸೇಸಪ್ಪ ಗೌಡ ಬೊಳ್ಳಾವು, ಶೀನಪ್ಪ ಗೌಡ ಬೊಳ್ಳಾವು, ರಮೇಶ್ ಭಂಡಾರಿ, ರಕ್ಷಿತ್ ಉಪ್ಪಿನಂಗಡಿ, ತಿಮ್ಮಪ್ಪ ಶಾಂತಿ ದಡ್ಡು, ಪದ್ಮನಾಭ ಬಲ್ಯಾರಬೆಟ್ಟು, ದೇವಕಿ ನೆಡ್ಚಿಲ್, ಲೀಲಾವತಿ ಕೊನೆತೋಟ, ಯಶೋಧಾ ನೆಡ್ಚಿಲ್ ಮತ್ತಿತರರು ಉಪಸ್ಥಿತರಿದ್ದರು.
ರೈತ ಸಂಪರ್ಕ ಕೇಂದ್ರದ ಸಹಾಯಕ ಸಾಯಿನಾಥ್ ವಂದಿಸಿದರು. ಅಕೌಂಟೆಂಟ್ ಅಶ್ವಿನಿ ಸಹಕರಿಸಿದರು.