ರಾಷ್ಟ್ರೀಯ ಹೆದ್ದಾರಿ ಭೂ ಸಂತ್ರಸ್ತರಿಂದ ಸಭೆ: ಹೈಕೋರ್ಟ್ ಮೊರೆ ಹೋಗಲು ನಿರ್ಧಾರ

Update: 2021-02-22 13:24 GMT

ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ 169 ಭೂ ಸಂತ್ರಸ್ತರ ಸಮಿತಿಯ ಅಧ್ಯಕ್ಷೆ ಮರಿಯಮ್ಮ ಥಾಮಸ್ ಅಧ್ಯಕ್ಷತೆಯಲ್ಲಿ ಇಲ್ಲಿನ ಸಮಾಜಮಂದಿರದಲ್ಲಿ ಸೋಮವಾರ ಸಭೆ ನಡೆಯಿತು. 

ರಾಷ್ಟ್ರೀಯ ಹೆದ್ದಾರಿ 169ರ ಮಂಗಳೂರು ಕುಲಶೇಖರದಿಂದ ಕಾರ್ಕಳದವರೆಗೆ ಚತುಷ್ಪಥಗೊಳ್ಳುತ್ತಿದ್ದು ಇದಕ್ಕಾಗಿ ಭೂಮಿ ಕಳೆದುಕೊಳ್ಳುವವರಿಗೆ ನ್ಯಾಯಯುತವಾಗಿ ಸಿಗಬೇಕಾದ ಮೌಲ್ಯಗಳನ್ನು ದೊರಕಿಸಿಕೊಡಲು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಅಡ್ಡಿಯಾಗುತ್ತಿದ್ದು ಅಧಿಕಾರಿಗಳ ನಡೆಯ ವಿರುದ್ಧ ಹೈಕೋರ್ಟ್ ಮೊರೆ ಹೋಗಲು ಭೂ ಸಂತ್ರಸ್ತರು ಸಭೆಯಲ್ಲಿ ನಿರ್ಧರಿಸಿದ್ದಾರೆ.

ಸಮಿತಿ ಅಧ್ಯಕ್ಷೆ ಮರಿಯಮ್ಮ ಥಾಮಸ್ ಇವರು ಮಾತನಾಡಿ, ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಇಲಾಖೆಯು 20 ಗ್ರಾಮಗಳ ಭೂ ಸ್ವಾಧೀನಕ್ಕಾಗಿ 1300ಕೋಟಿ ರೂ. ಮೀಸಲಿರಿಸಿದ್ದು ಅಧಿಕಾರಿಗಳು ಅದನ್ನು ಸಂತ್ರಸ್ತರಿಗೆ ಒದಗಿಸುವ ಬದಲು ಅದನ್ನು 700 ಕೋಟಿಗೆ ಇಳಿಸಲು ಹುನ್ನಾರ ನಡೆಸುತ್ತಿದ್ದಾರೆ. ಇದರಿಂದ ಕರಾವಳಿಯ ಜನತೆಗೆ ಸುಮಾರು 600 ಕೋಟಿಯಷ್ಟು ನಷ್ಟವಾಗಲಿದೆ. 2016ರಿಂದ ಇಲ್ಲಿ ಕೃಷಿ ಭೂಮಿ ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆಯಾಗುತ್ತಿಲ್ಲ. ವಾಣಿಜ್ಯ ಭೂ ಮಾಲಿಕರಿಗೂ ಕೃಷಿ ಭೂಮಿ ಮಾಲಕರಿಗೂ ಸಿಗುವ ಮೊತ್ತದಲ್ಲಿ ಭಾರೀ ವ್ಯತ್ಯಾಸವಿದೆ. ಇದರ ವಿರುದ್ಧ ಹೋರಾಟ ಅನಿವಾರ್ಯ. ಇಲಾಖೆಯ ಯಾವುದೇ ನೊಟೀಸ್‌ಗಳಿಗೆ ಸ್ಪಂದಿಸಬೇಡಿ. ಅಧಿಕಾರಿಗಳು ಪರಿಹಾರ ಮೊತ್ತವನ್ನು ನೀಡಲು ಮುಂದೆ ಬಂದರೆ ಅದನ್ನು ಪಡೆಯಬೇಡಿ ಎಂದರು. 

ಸಾಣೂರಿನ ಉದ್ಯಮಿ ನರಸಿಂಹ ಕಾಮತ್ ಮಾತನಾಡಿ ಈ ಹೋರಾಟಕ್ಕೆ ಜನಪ್ರತಿನಿಧಿಗಳ ಬೆಂಬಲ ಪಡೆಯಬೇಕು. ಅದಕ್ಕಾಗಿ ಆಯಾ ವ್ಯಾಪ್ತಿಯ ಶಾಸಕರು, ಸಂಸದರ ಮೇಲೆ ಭೂಸಂತ್ರಸ್ತರು ಒತ್ತಡ ಹೇರಬೇಕು ಎಂದರು. 

ಬೆಳುವಾಯಿ ವಲಯದ ಹೋರಾಟ ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ, ವಂದನಾ ಪ್ರಭು ಹೋರಾಟದ ಹಿನ್ನೆಲೆಯನ್ನು ವಿವರಿಸಿದರು. ಪುರಸಭಾ ಸದಸ್ಯ ಪಿ.ಕೆ.ಥೋಮಸ್ ಹಾಗೂ ಇತರರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. 

ಸಂತ್ರಸ್ತ ಭೂ ಮಾಲಕರ ಹೋರಾಟ ಸಮಿತಿಯ ಸಂಚಾಲಕ ಪ್ರಕಾಶ್‌ಚಂದ್ರ, ಕೋಶಾಧಿಕಾರಿ ವಿಶ್ವಜಿತ್, ಉದ್ಯಮಿ ಬ್ರಿಜೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ವಕೀಲ ರಾಜೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News