ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಪದವಿ ಪ್ರದಾನ

Update: 2021-02-22 15:14 GMT

ಮಂಗಳೂರು, ಫೆ.22: ಎ.ಜೆ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸೆಸ್‌ನ 14ನೇ ಘಟಿಕೋತ್ಸವವು ನಗರದ ಕುಂಟಿಕಾನದಲ್ಲಿರುವ ಎ.ಜೆ ಇನ್‌ಸ್ಟಿಟ್ಯೂಟ್‌ನ ಐದನೇ ಮಹಡಿಯ ಅಡಿಟೋರಿಯಂನಲ್ಲಿ ಸೋಮವಾರ ಪದವಿ ಪ್ರದಾನ ಸಮಾರಂಭ ನಡೆಯಿತು.

ವೈದ್ಯ ಪದವೀಧರರಿಗೆ ಪದವಿ ಪ್ರದಾನ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ‘ಮಾಹೆ’ ಮಂಗಳೂರು ಕ್ಯಾಂಪಸ್ ಸಹ ಕುಲಪತಿ ಡಾ.ದಿಲೀಪ್ ಜಿ. ನಾಯ್ಕಾ, ರೋಗಿಗಳೊಂದಿಗಿನ ಉತ್ತಮ ಒಡನಾಟ, ನಡವಳಿಕೆ, ಆತ್ಮೀಯತೆ ಮೊದಲಾದ ಗುಣಗಳನ್ನು ಯುವ ವೈದ್ಯರು ತಾವಾಗಿಯೇ ಬೆಳೆಸಿಕೊಂಡರೆ ವೃತ್ತಿಯಲ್ಲಿ ಯಶಸ್ಸು ಸಾಧ್ಯ ಎಂದರು.

ಚಿಕಿತ್ಸೆ ವೇಳೆ ವೈದ್ಯರು ಮತ್ತು ರೋಗಿಗಳ ನಡುವೆ ಆತ್ಮೀಯ ಸಂವಹನ ಅಗತ್ಯ. ಜ್ಞಾನ, ಕಠಿಣ ಶ್ರಮ, ಬದ್ಧತೆ, ಶ್ರದ್ಧೆಯ ಜತೆಗೆ ರೋಗಿಗಳೊಂದಿಗೆ ಅನುಭೂತಿ ಕೂಡ ಇರಬೇಕು. ಜ್ಞಾನ, ಕೌಶಲ್ಯವನ್ನು ಶಿಕ್ಷಣ ಸಂಸ್ಥೆಗಳು ಕಲಿಸಿಕೊಡುತ್ತವೆ ಎಂದು ಹೇಳಿದರು.

ಆಧುನಿಕ ದಿನಗಳಲ್ಲಿ ನಡೆಯುತ್ತಿರುವ ಬದಲಾವಣೆ, ದೊರೆಯುತ್ತಿರುವ ಜ್ಞಾನವನ್ನು ಬಳಸಿಕೊಂಡು ಉತ್ತಮ ಸೇವೆ ನೀಡಬೇಕು. ಅಂತೆಯೇ ತಾವು ಕಲಿತ ಶಿಕ್ಷಣ ಸಂಸ್ಥೆ, ತಮ್ಮ ಹೆತ್ತವರ ಬಗ್ಗೆಯೂ ಕಾಳಜಿ ವಹಿಸುವುದು ಅಗತ್ಯ. ಇಂದು ದಂತವೈದ್ಯರಿಗೆ ಉತ್ತಮ ಬೇಡಿಕೆ ಇದೆ. ಕೇವಲ ಉದ್ಯೋಗ ಮಾಡದೆ ಇತರರಿಗೂ ಉದ್ಯೋಗ ದೊರಕಿಸಿಕೊಡುವ ಮಟ್ಟಕ್ಕೆ ಬೆಳೆಯಬೇಕು. ಕಲಿಕೆ ನಿರಂತರವಾಗಿರಬೇಕು ಎಂದು ಅವರು ಹೇಳಿದರು.

86 ಪದವೀಧರರು ಮತ್ತು 25 ಸ್ನಾತಕೋತ್ತರ ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು. ಎ.ಜೆ ಇನ್‌ಸ್ಟಿಟ್ಯೂಟ್ ಆ್ ಡೆಂಟಲ್ ಸೈನ್ಸೆಸ್‌ನ ಪ್ರಾಂಶುಪಾಲ ಡಾ. ಕೆ.ನಿಲ್ಲನ್ ಶೆಟ್ಟಿ ಸ್ವಾಗತಿಸಿದರು. ಪಿಜಿ ಕೋ-ಆರ್ಡಿನೇಟರ್ ಡಾ.ನಂದೇಶ್ ಶೆಟ್ಟಿ, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News