ಕಾರಿನಲ್ಲಿ ಕಾಡುಕೋಣ ಮಾಂಸ ಪತ್ತೆ: ಅರಣ್ಯ ಇಲಾಖೆಯಿಂದ ತನಿಖೆ

Update: 2021-02-22 15:03 GMT

ಭಟ್ಕಳ: ಇಲ್ಲಿನ ಮದೀನಾ ಕಾಲನಿಯ ಮುಹ್ಯುದ್ದೀನ್ ಸ್ಟ್ರೀಟ್ ಎಂಬಲ್ಲಿ ಮಹಾರಾಷ್ಟ್ರ ನೋಂದಣಿಯಿದ್ದ ಕಾರಿನಲ್ಲಿ ಸುಮಾರು 100ಕೆ.ಜಿ.ಗೂ ಹೆಚ್ಚು ಕಾಡುಕೋಣದ ಮಾಂಸ ವಶಪಡಿಸಿಕೊಳ್ಳಲಾಗಿದ್ದು, ಕಾರಿನ ವಾರಿಸುದಾರರ ಕುರಿತಂತೆ ತನಿಖೆ ನಡೆಯುತ್ತಿದ್ದೆ. 

ಕಾರನ್ನು ನಿಲ್ಲಿಸಿದ್ದ ಸ್ಥಳದ ಹಿಂಭಾಗದ ಮನೆಯ ಮೂವರು ಸದಸ್ಯರನ್ನು ವಿಚಾರಣೆಗೊಳಪಡಿಸಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. 

ಭಟ್ಕಳ ವಲಯ ಅರಣ್ಯಾಧಿಕಾರಿ ಸವಿತಾ ದೇವಾಡಿಗ ನೀಡಿದ ಮಾಹಿತಿಯಂತೆ, ಹೊನ್ನಾವರ ಗೇರುಸೊಪ್ಪ ಅರಣ್ಯ ಪ್ರದೇಶದಲ್ಲಿ ಕಾಡುಕೋಣ ಬೇಟೆ ನಡೆದಿದೆ ಎಂದು ಹೇಳಲಾಗಿದೆ. ಕೋಣದ ಮಾಂಸ ಹೊತ್ತ ಕಾರನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಹಿಂಬಾಲಿಸಿಕೊಂಡು ಬಂದಿದ್ದು ಹೊನ್ನಾವರ ಮೂಲಕ ಬ್ಯಾರಿಕೇಡ್ ಮುರಿದು, ಮುರುಡೇಶ್ವರ ಶಿರಾಲಿ ಚೆಕ್ ಪೋಸ್ಟ್‌ ಗಳಲ್ಲೂ ಕಾರು ನಿಲ್ಲಿಸದೇ ಪರಾರಿಯಾಗಿದ್ದು ಸೋಮವಾರ ಮದೀನ ಕಾಲೋನಿಯ ಮನೆಯ ಮುಂದೆ ನಿಂತುಕೊಂಡಿದೆ ಎಂದು ತಿಳಿದು ಬಂದಿದೆ. 

ಅದನ್ನು ಕ್ರೇನ್ ಮೂಲಕ ಎಳೆದುಕೊಂಡು ಹೋಗಿ ಪರಿಶೀಲಿದಾಗ ಸುಮಾರು 100ಕ್ಕೂ ಹೆಚ್ಚು ಕೆಜಿ ಕಾಡುಕೋಣದ ಮಾಂಸ ದೊರೆತಿದೆ ಎಂದು ಮಾಹಿತಿ ನೀಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು ಈ ಕುರಿತು ತನಿಖೆ ಚುರುಕುಗೊಳಿಸಲಾಗಿದೆ ಎಂದೂ ಹೇಳಿದ್ದಾರೆ. 

ಮನೆಯವರಿಗೆ ತೊಂದರೆ ನೀಡಬೇಡಿ: ಕಾರು ನಿಂತುಕೊಂಡಿದ್ದ ಮನೆಯ ಕುಟುಂಬದ ಸದಸ್ಯರಿಗೆ ಪೊಲೀಸರು ವಿಚಾರಣೆಯ ನೆಪದಲ್ಲಿ ಯಾವುದೇ ಕಿರುಕುಳ ನೀಡಬಾರದೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಕಾರು ಚಾಲಕ ತಾನು ಸಿಕ್ಕಿಬೀಳುತ್ತೇನೆ ಎಂಬ ಭಯದಿಂದ ಅಡ್ಡಾದಿಡ್ಡಿಯಾಗಿ ಕಾರು ಓಡಿಸಿಕೊಂಡು ಬಂದಿದ್ದು ಮುಂದೆ ಹೋಗಲು ಉಪಾಯ ಕಾಣದೆ ಯಾರದೋ ಮನೆಯ ಮುಂದೆ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ. ಆದ್ದರಿಂದ ವಿನಾಕಾರಣ ಮನೆಯವರಿಗೆ ಕಿರುಕುಳ ನೀಡಕೂಡದೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಘಟನಾ ಸ್ಥಳದಲ್ಲಿ ನಗರಠಾಣೆಯ ಪಿ.ಎಸ್.ಐ ಭರತ್ ಉಪಸ್ಥಿತರಿದ್ದು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News