ಕೇರಳ, ಮುಂಬೈಯಿಂದ ಬರುವವರಲ್ಲಿ ಕೋವಿಡ್ ಪರೀಕ್ಷೆ ವರದಿ ಕಡ್ಡಾಯ: ಸಂಸದೆ ಶೋಭಾ

Update: 2021-02-22 15:28 GMT

ಉಡುಪಿ, ಫೆ.22: ಜಿಲ್ಲೆಯಲ್ಲಿ ಕೋವಿಡ್ ರೂಪಾಂತರ ವೈರಸ್ ಹರಡ ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೇರಳ ಮತ್ತು ಮುಂಬೈಯಿಂದ ಆಗಮಿಸುವವರು ಕೊರೋನ ಪರೀಕ್ಷೆ ಮಾಡಿ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಹೊರಗಿನಿಂದ ಬಂದವರು ವರದಿ ಬರುವವರಿಗೆ ಹೋಮ್ ಕ್ವಾರಂಟೈನ್‌ನಲ್ಲಿ ಇರುವಂತೆ ಮಾಡಬೇಕು ಎಂದು ಉಡುಪಿ ಚಿಕ್ಕಮಗಳೂರು ಸಂಸೆ ಶೋಭಾ ಕರಂದ್ಲಾಜೆ ಸೂಚಿಸಿದ್ದಾರೆ.

ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಉಡುಪಿ ಜಿಲ್ಲಾಧಿಕಾರಿ ಮಾತನಾಡಿ, ಮುಂಬೈಯಿಂದ ಉಡುಪಿಗೆ ಬರುವ ಬಸ್‌ಗಳ ಮಾಲಕರ ಸಭೆ ಕರೆದು, ಪ್ರತಿಯೊಬ್ಬ ಪ್ರಯಾಣಿಕರಿಂದ ವರದಿ ಪಡೆದುಕೊಳ್ಳುವಂತೆ ಸೂಚಿಸಲಾಗುವುದು. ವರದಿ ಇಲ್ಲದವರು ಉಡುಪಿಯಲ್ಲಿ ಪರೀಕ್ಷೆಗೆ ನಡೆಸಿ ವರದಿ ಬರುವವರೆಗೆ ಹೋಮ್ ಕ್ವಾರಂಟೈನ್‌ನಲ್ಲಿ ಇರಬೇಕು ಎಂದು ತಿಳಿಸಿದರು.

ಈ ರೂಪಾಂತರಿ ಕೋವಿಡ್ ವೈರಸ್ ಹರಡುವುದನ್ನು ತಡೆಯಲು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿ ಗಣಿಸಿ ಸಾರ್ವಜನಿಕರು ಮಾಸ್ಕ್, ಸುರಕ್ಷಿತ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಲು ಆದೇಶ ನೀಡಲಾಗುವುದು ಎಂದು ಅವರು ಹೇಳಿದರು.

189 ಮಂದಿ ಮೃತ್ಯು: ಜಿಲ್ಲೆಯಲ್ಲಿ ಇದುವರೆಗೆ 359039 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಿದ್ದು, 335501 ನೆಗೆಟಿವ್ ವರದಿ ಬಂದಿದೆ. 23538 ಮಂದಿ ಪಾಸಿಟಿವ್ ಬಂದಿದ್ದು, 189 ಮಂದಿ ಮೃತಪಟ್ಟಿದ್ದಾರೆ. ಇಷ್ಟೊಂದು ಪ್ರಮಾಣದ ಪಾಸಿಟಿವ್ ಇದ್ದರೂ ಸಹ ಜಿಲ್ಲೆಯಲ್ಲಿನ ಮರಣ ಪ್ರಮಾಣ ರಾಜ್ಯದಲ್ಲೇ ಅತ್ಯಂತ ಕಡಿಮೆ ಇದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ನರೇಗಾ ಯೋಜನೆಯಲ್ಲಿ 51000 ಮಾನವ ದಿನಗಳ ಸೃಜನೆಯ ಗುರಿಗೆ 51200 ಸಾಧನೆ ಮಾಡಿರುವುದನ್ನು ಅಭಿನಂದಿಸಿದ ಸಂಸದರು, ಜಿಲ್ಲೆಯಲ್ಲಿ ಹೊಸದಾಗಿ ಆಯ್ಕೆಯದ ಗ್ರಾಪಂ ಸದಸ್ಯರಿಗೆ ನರೇಗಾದಲ್ಲಿ ಕೈಗೊಳ್ಳ ಬಹುದಾದ ಕಾರ್ಯಗಳ ಕುರಿತು ವಿವರವಾದ ಮಾಹಿತಿ ನೀಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಕೆರೆ ಮತುತಿ ತೋಡುಗಳ ಹೊಳೆತ್ತಲು ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸ್ವಸಹಾಯ ಸಂಘಗಳಿಗೆ ಸಾಲ ನೀಡುತ್ತಿಲ್ಲ ಹಾಗೂ ಸಾಲ ನೀಡಲು ಅನಗತ್ಯ ವಿಳಂಬ ಮಾಡುತ್ತಿರುವ ಬಗ್ಗೆ ದೂರು ಬರುತ್ತಿವೆ. ಆದ್ದರಿಂದ ಬ್ಯಾಂಕ್‌ಗಳಲ್ಲಿ ಸರಕಾರಿ ಯೋಜನೆಯ ಫಲಾ ನುಭವಿಗಳಿಗೆ ನೀಡಿರುವ ಸಾಲದ ವಿವರಗಳನ್ನು ನೀಡಬೇಕು ಎಂದು ಸಂಸದರು ಲೀಢ್ ಬ್ಯಾಂಕ್ ಮೆನೆಜರ್‌ಗೆ ಸೂಚಿಸಿದರು.

ಸಭೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಜಿಪಂ ಅಧ್ಯಕ್ಷ ದಿನಕರ ಬಾಬು, ಸಿಇಓ ಡಾ.ನವೀನ್ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News