ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದವರಿಗೆ 56 ಇಂಚಿನ ಎದೆಯಿಂದೇನು ಪ್ರಯೋಜನ: ಸಿದ್ದರಾಮಯ್ಯ ಪ್ರಶ್ನೆ

Update: 2021-02-22 15:41 GMT

ಪಡುಬಿದ್ರಿ, ಫೆ.22: ಮೂಲಭೂತವಾಗಿ ಪ್ರಜಾಪ್ರಭುತ್ವ ಹಾಗೂ ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆಯೇ ಇಲ್ಲದಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ 56 ಇಂಚಿನ ಎದೆ ಇದ್ದೂ ಏನು ಪ್ರಯೋಜನ? ಆ 56 ಇಂಚಿನ ಎದೆಯಲ್ಲಿ ರೈತರು, ಬಡವರು, ದಲಿತರು, ಹಿಂದುಳಿದವರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರಿಗೆ ಮಿಡಿಯುವ ಹೃದಯವಿಲ್ಲವಲ್ಲ. ಇದ್ದಿದ್ದರೆ ಕಳೆದ ಮೂರು ತಿಂಗಳಿನಿಂದ ಗಾಳಿ, ಮಳೆ, ಚಳಿಯ ನಡುವೆ ಲಕ್ಷಾಂತರ ರೈತರು ಬೀದಿಯಲ್ಲಿ ಕುಳಿತಿರುತ್ತಿದ್ದರೇ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನಿಲುವಿನ ವಿರುದ್ಧ ಜನಜಾಗೃತಿಗಾಗಿ ಉಡುಪಿ ಜಿಲ್ಲಾ ಕಾಂಗ್ರಸ್ ಸಮಿತಿ ಇಂದಿನಿಂದ ಫೆಬ್ರವರಿ 27ರವರೆಗೆ ಆಯೋಜಿಸಿರುವ ಹೆಜಮಾಡಿಯಿಂದ ಬೈಂದೂರುವರೆಗಿನ ಒಟ್ಟು 108 ಕಿಮೀ ಉದ್ದದ ‘ಜನಧ್ವನಿ’ ಪಾದಯಾತ್ರೆಗೆ ಪಡುಬಿದ್ರಿಯಲ್ಲಿ ಅಧಿಕೃತ ಚಾಲನೆ ನೀಡಿ ಅವರು ಮಾತನಾಡುತಿದ್ದರು.

ದೇಶಾದ್ಯಂತ ಕೋಟ್ಯಾಂತರ ರೈತರ ಆಕ್ರೋಶಕ್ಕೆ ಕಾರಣವಾಗಿರುವ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಕೊರೋನ ಲಾಕ್‌ಡೌನ್ ಸಮಯದಲ್ಲಿ ಯಾವುದೇ ಚರ್ಚೆಗೂ ಅವಕಾಶ ಸಿಗದಂತೆ ಮಂಜೂರಾಗುವಂತೆ ನೋಡಿಕೊಂಡ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಮಾತನಾಡಿದ ಸಿದ್ದರಾಮಯ್ಯ, ಕನಿಷ್ಠ ಅದನ್ನು ಸಂಸದೀಯ ಜಂಟಿ ಸಮಿತಿಗಾದರೂ ಒಪ್ಪಿಸಬೇಕಿತ್ತು. ರೈತರ ಮೇಲೆ ಬರೆ ಎಳೆಯುವಂತೆ ಅದನ್ನು ಅಷ್ಟೊಂದು ತರಾತುರಿಯಿಂದ ಜಾರಿಗೊಳಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.

ಕೇಂದ್ರ ಸರಕಾರದ ಧೋರಣೆಯನ್ನು ಪ್ರಶ್ನಿಸುವವರನ್ನೆಲ್ಲಾ ದೇಶದ್ರೋಹಿಗಳೆಂದು ಕರೆಯುವ ಆಡಳಿತ ಪಕ್ಷದ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದ ಅವರು, ಸ್ವಾತಂತ್ರ ಪೂರ್ವದಲ್ಲೇ ಪ್ರಾರಂಭಗೊಂಡ ಸಂಘಪರಿವಾರ, ನಂತರ ಬಂದ ಜನಸಂಘ ಹಾಗೂ ಅದರ ಈಗಿನ ರೂಪ ಬಿಜೆಪಿಯಲ್ಲಿ ಯಾರಾದರೂ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ್ದಾರಾ? ಯಾರಾದರೂ ಒಬ್ಬರು ದೇಶಕ್ಕಾಗಿ ಸತ್ತಿದ್ದಾರಾ. ಸ್ವಾತಂತ್ರ ಹೋರಾಟದಲ್ಲಿ ನಿಮ್ಮ ಗುರೂಜಿ, ಹೆಡಗೆವಾರ್ ಇವರ ಪಾತ್ರವೇನಿದೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಆದರೆ ಮಹಾತ್ಮಗಾಂಧಿಯವರನ್ನು ಕೊಂದವರು ಮಾತ್ರ ಸಂಘಪರಿವಾರದವರು ಎಂದರು. ಇವರಿಂದ ದೇಶ ‘ದೇಶಭಕ್ತಿ’ಯ ಪಾಠವನ್ನು ಕಲಿಯಬೇಕೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನಾದರೂ ಸ್ವಾತಂತ್ರ ಸಿಗುವುದಕ್ಕೆ ಎರಡು ವಾರ ಮೊದಲು ಹುಟ್ಟಿದೆ. ಸ್ವಾತಂತ್ರಾ ನಂತರ ಹುಟ್ಟಿದ ನರೇಂದ್ರ ಮೋದಿ ದೇಶಭಕ್ತಿ ಬಗ್ಗೆ, 56 ಇಂಚಿನ ಎದೆಯ ಬಗ್ಗೆ ಮಾತನಾಡುತ್ತಾರೆ. ಇದರಿಂದ ಏನು ಪ್ರಯೋಜನ ಎಂದವರು ಪ್ರಶ್ನಿಸಿದರು. ಎಲ್ಲಾ ಮಗು ಹುಟ್ಟುವಾಗ ವಿಶ್ವಮಾನವನಾಗಿರುತ್ತೆ. ಬೆಳೆದಂತೆ ಅಲ್ಪಮಾನವನಾಗುತ್ತೆ ಎಂದು ಕುವೆಂಪು ಹೇಳಿದ್ದಾರೆ. ಬಿಜೆಪಿಯವರು ಮಾತ್ರ ಅಲ್ಪಮಾನವರೇ. ಮನುಷ್ಯನನ್ನು ಧ್ವೇಷಿಸುವವರು. ಕರಾವಳಿ ಪ್ರದೇಶ ಸರ್ವಧರ್ಮ ಸಮನ್ವಯದಿಂದ, ಕೋಮು ಸೌಹಾರ್ದತೆಯಿಂದ ಇತ್ತು. ಬಿಜೆಪಿಯವರು ಕರಾವಳಿಯನ್ನು ತಮ್ಮ ‘ಕೋಮುವಾದದ ಪ್ರಯೋಗಶಾಲೆ’ಯಾಗಿಸಿ ಇಲ್ಲಿ ಪರಸ್ಪರ ಅಪನಂಬಿಕೆ, ಒಡಕು ಮೂಡುವ ವಾತಾವರಣ ನಿರ್ಮಿಸಿದರು ಎಂದು ದೂರಿದರು.

'ಬಿಜೆಪಿಯನ್ನು ಕಿತ್ತೊಗೆಯಿರಿ': ರಾಜ್ಯದಲ್ಲಿ ದಲಿತ, ಕೂಲಿಕಾರ್ಮಿಕರು, ಅಲ್ಪಸಂಖ್ಯಾತರು, ಮಹಿಳೆಯರಿಗೆ ಸಿಗುವ ವಿದ್ಯಾರ್ಥಿ ವೇತನ ಸೇರಿದ ಯಾವುದೇ ಸೌಲಭ್ಯ ಈಗ ಸಿಗುತ್ತಿಲ್ಲ. ಇಂದಿರಾ ಕ್ಯಾಂಟಿನನ್ನು ಮುಚ್ಚುತಿದ್ದಾರೆ. ಬಿಪಿಎಲ್ ಕಾರ್ಡಿನ ನನ್ನ ಅವಧಿಯಲ್ಲಿ ನೀಡುತಿದ್ದ 7 ಕೆ.ಜಿ.ಅಕ್ಕಿಯನ್ನು ಮೂರು ಕೆ.ಜಿ.ಗೆ ಇಳಿಸಿದ್ದಾರೆ. ಬಡವರ ವಿರೋಧಿಯಾದ ಇಂಥ ಪಕ್ಷದ ಸರಕಾರ ನಮಗೆ ಬೇಕಾ ಎಂದು ಪ್ರಶ್ನಿಸಿದ ಅವರು, ಈ ಸರಕಾರವನ್ನು ಕಿತ್ತೊಗೆಯಿರಿ ಎಂದು ಕರೆ ನೀಡಿದರು.

ನಮ್ಮ ಸರಕಾರ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಅನ್ನಭಾಗ್ಯದಲ್ಲಿ ಏಳು ಕೆ.ಜಿ. ಅಕ್ಕಿಯನ್ನು 10ಕೆ.ಜಿ.ಗೆ ಏರಿಸುತ್ತೇನೆ. 2.30 ಲಕ್ಷ ಕೋಟಿ ರೂ.ಬಜೆಟ್ ಇರುವ ನಮ್ಮ ಸರಕಾರದ ಬಳಿ ಯಾವುದಕ್ಕೂ ದುಡ್ಡಿಲ್ಲವಂತೆ. ಆದರೆ ಭ್ರಷ್ಟಾಚಾರ ಮಿತಿಮೀರಿದೆ. ಯಡಿಯೂರಪ್ಪ ಚೆಕ್ ಮೂಲಕ ಲಂಚದ ಹಣ ಪಡೆದರೆ, ಇಂದು ಅವರ ಮಗ ವಿಜಯೇಂದ್ರ ಆರ್‌ಟಿಜಿಎಸ್ ಮೂಲಕ ಲಂಚ ತೆಗೆದುಕೊಳ್ಳುತ್ತಿದ್ದಾನೆ ಎಂದರು.

'ಯಡಿಯೂರಪ್ಪ ಡೋಂಗಿ ರೈತನ ಮಗ': ಯಡಿಯೂರಪ್ಪ ಹಸಿರು ಶಾಲು ಹಾಕಿಕೊಂಡು ತಾನು ರೈತನ ಮಗ ಅನ್ನುತ್ತಾರೆ. ಆದರೆ ಅವರು ಢೋಂಗಿ ರೈತನ ಮಗ. ರೈತರ ಮೇಲೆ ಗೋಲಿಬಾರ್ ಮಾಡಿ ಇಬ್ಬರನ್ನು ಕೊಂದಾತ ಇವರು. ರೈತರ ಸಾಲಮನ್ನಾ ಮಾಡುವ ನೈತಿಕತೆಯೂ ಈತನಿಗಿಲ್ಲ. ಇಂಥ ಲಂಚಕೋರ, ಕೆಟ್ಟ ಆಡಳಿತ ಸರಕಾರ ರಾಜ್ಯದಲ್ಲಿ ಯಾವತ್ತೂ ಬಂದಿರಲಿಲ್ಲ. ಬಿಜೆಪಿ ಸರಕಾರವನ್ನು ರಾಜ್ಯದ ಜನತೆ ಕಿತ್ತೊಗೆಯಬೇಕು ಎಂದು ಹೇಳಿದರು.

'ಇತಿಹಾಸದ ಅತಿದೊಡ್ಡ ಸುಳ್ಳುಗಾರ': ಸ್ವತಂತ್ರ ಭಾರತ ಇತಿಹಾಸದಲ್ಲಿ ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿ ಇದ್ದರೆ ಅದು ನರೇಂದ್ರ ಮೋದಿ. ಜನರಿಗೆ ಉದ್ಯೋಗ ಕೊಡಲಿಲ್ಲ. ದೇಶದ ಆರ್ಥಿಕತೆಯನ್ನು ಪಾತಾಳಕ್ಕೊಯ್ದಿದ್ದಾರೆ. ಸಾಲದ ಮೇಲೆ ಇಡೀ ದೇಶ ನಡೀತಾ ಇದೆ. ದೇಶದ ಬಜೆಟ್ 34 ಲಕ್ಷ ಕೋಟಿ ರೂ.ಗಳಾದರೆ, ಇದರಲ್ಲಿ 15 ಲಕ್ಷ ಕೋಟಿ ರೂ. ಸಾಲ. ಅದೇ ರೀತಿ ಕರ್ನಾಟಕ ಸರಕಾರದ ಸಾಲ 63000 ಕೋಟಿ ರೂ.ಇದ್ದು, ವರ್ಷದ ಕೊನೆಗೆ ಅದು 90ಸಾವಿರ ಕೋಟಿಗೇರಲಿದೆ. ಇಂಥ ಒಂದು ದರಿದ್ರ ಸರಕಾರ ನಮಗೆ ಬೇಕೆ ಎಂದವರು ಪ್ರಶ್ನಿಸಿದರು.

ಮಾಜಿ ಸಚಿವ ವಿನಯ್‌ಕುಮಾರ್ ಸೊರಕೆ, ವಕೀಲರಾದ ಸುಧೀರ್‌ಕುಮಾರ್ ಮರೋಳಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು ಅತಿಥಿಗಳನ್ನು ಸ್ವಾಗತಿಸಿದರು.

ಸಭೆಯಲ್ಲಿ ಮಾಜಿ ಸಭಾಪತಿ, ಶಾಸಕ ಪ್ರತಾಪ್‌ಚಂದ್ರ ಶೆಟ್ಟಿ, ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್, ಮಾಜಿ ಸಚಿವರಾದ ರಮಾನಾಥ ರೈ, ಯು.ಟಿ.ಖಾದರ್, ಪ್ರಮೋದ್ ಮಧ್ವರಾಜ್, ಬಿ.ಎ.ಬಾವಾ, ಅಭಯಚಂದ್ರ ಜೈನ್, ಕಾಂಗ್ರೆಸ್ ನಾಯಕರಾದ ಮಂಜುನಾಥ ಭಂಡಾರಿ, ಮಿಥುನ್ ರೈ, ಡಾ.ಪುಷ್ಪಾ ಅಮರನಾಥ, ಎಂ.ಎ. ಗಫೂರ್ ಹಾಗೂ ಜಿಲ್ಲಾ ಮಟ್ಟದ ನಾಯಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News