ಹಿಂದುಳಿದ ವರ್ಗಗಳ ಶೋಷಣೆಗೆ ಮುಂದಾದರೆ ಸುಮ್ಮನಿರಲ್ಲ: ಸರಕಾರಕ್ಕೆ ಎಚ್ಚರಿಕೆ ನೀಡಿದ ಬ್ರಹ್ಮಾನಂದ ಸ್ವಾಮೀಜಿ

Update: 2021-02-22 17:13 GMT

ಭಟ್ಕಳ, ಫೆ.22: ಪಂಚಮಸಾಲಿಗಳ ಪ್ರತಿರೋಧಕ್ಕೆ ಮಣಿದು ಒಂದು ವೇಳೆ ಸರಕಾರ ಹಿಂದುಳಿದವರ ಶೋಷಣೆಗೆ ಮುಂದಾದರೆ ನಾವು ಸುಮ್ಮನೆ ಕೂಡುವುದಿಲ್ಲ ಸ್ವತಃ ನಾನೇ ಸುಪ್ರೀಂ ಕೋರ್ಟ್ ನಲ್ಲಿ ಸರಕಾರದ ವಿರುದ್ಧ ಹೋರಾಡುವುದಾಗಿ ಉಜಿರೆಯ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಸರಕಾರಕ್ಕೆ ಬಹಿರಂಗವಾಗಿ ಎಚ್ಚರಿಕೆ ನೀಡಿದರು.

ಸೋಮವಾರ ಸಾಗರ ರಸ್ತೆಯ ಪೊಲೀಸ್ ಮೈದಾನದಲ್ಲಿ ನಡೆದ ಹಿಂದುಳಿದ ವರ್ಗ 2ಎ ಹಿತರಕ್ಷಣಾ ವೇದಿಕೆಯ ಬೃಹತ್ ಪ್ರತಿಭಟನಾ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

ಹಿಂದುಳಿದವರ ಹಕ್ಕನ್ನು ಯಾವುದೇ ರೀತಿಯಲ್ಲಿ ಕಸಿದುಕೊಳ್ಳಬಾರದು. ನಮ್ಮ ಅನ್ನದ ಬಟ್ಟಲನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಯಾರೂ ಮಾಡಬಾರದು ಎಂದ ಸ್ವಾಮಿಜಿ, ಸಂವಿಧಾನ ಎಂಬುದು ಭಗವಂತ ಇದ್ದ ಹಾಗೆ. ಸೃಷ್ಟಿ, ಸ್ಥಿತಿ, ಲಯ ಕಾಯ್ದುಕೊಳ್ಳುತ್ತದೆ. ಅದಕ್ಕೆ ಪೂರಕವಾಗಿ ಅಂಬೇಡ್ಕರರ ಸಂವಿಧಾನದ ಕಲಂ 14, 15 ತಾರತಮ್ಯ ಮಾಡಬಾರದು ಎಂದಿದೆ. ಕಲಂ 16ರಲ್ಲಿ ಬಡವರ, ಅತಿ ಹಿಂದುಳಿದವರು, ಅತಿ ಹಿಂದುಳಿದ ಪ್ರದೇಶದಲ್ಲಿರುವವರಿಗೆ ಅವರ ಹಕ್ಕನ್ನು ಕಾಯ್ದಿರಿಸಿಕೊಳ್ಳುವ ಅವಕಾಶ ನೀಡಿದೆ. ಅಲ್ಲದೆ, ಆ ಹಕ್ಕನ್ನು ಸಂವಿಧಾನ ಕಾಯ್ದುಕೊಂಡು ಬಂದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಸರಕಾರಗಳು, ನಾಯಕರು, ಸ್ವಾಮೀಜಿಗಳು ಅವರವರ ಜನರನ್ನು ಓಲೈಸಲು, ಸಂವಿಧಾನದ ಸಿದ್ಧಾಂತವನ್ನು, ಇತಿಮಿತಿಯನ್ನು ಗಾಳಿಗೆ ತೂರುವಂಥದ್ದಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾವೇಶದ ಮೂಲಕ ಸರಕಾರಕ್ಕೊಂದು ಸಂದೇಶ ನೀಡಲಿದ್ದೇವೆ. ಈಗ ಶಾಂತ ರೀತಿಯ ಪ್ರತಿಭಟನೆ ಹಮ್ಮಿಕೊಂಡಿದ್ದು, ಇದಕ್ಕೆ ಪ್ರತಿಫಲ ಸಿಗದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ತೀವ್ರತರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಿವೃತ್ತ ಪ್ರಾಧ್ಯಾಪಕ ಹೊನ್ನಾವರದ ಡಾ.ಶ್ರೀಪಾದ್ ಶೆಟ್ಟಿ ಮಾತನಾಡಿ, ಈ ಹೋರಾಟ ನಮ್ಮ ಅಸ್ಮಿತೆ ಮತ್ತು ಬದುಕಿನ ಹೋರಾಟವಾಗಿದ್ದು, ಸಮುದ್ರದಲ್ಲಿನ ದೊಡ್ಡ ತಿಮಿಂಗಿಲಗಳು ಚಿಕ್ಕಪುಟ್ಟ ಮೀನುಗಳನ್ನು ನುಂಗುವ ರೀತಿಯಲ್ಲಿ ರಾಜ್ಯದ ದೊಡ್ಡ ಸಮುದಾಯವೊಂದು ಹಿಂದುಳಿದ ವರ್ಗಗಳಿಗೆ ಸೇರಿದ ಚಿಕ್ಕಪುಟ್ಟ ಸಮುದಾಯಗಳನ್ನು ನುಂಗಲು ಹೊಂಚು ಹಾಕುತ್ತಿದೆ. ಇದರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನಾ ಹೋರಾಟಗಳು ನಡೆಯಲಿವೆ ಎಂದರು.

ಹಿಂದುಳಿದ ವರ್ಗ 2ಎ ಹಿತರಕ್ಷಣಾ ಹೋರಾಟ ವೇದಿಕೆಯ ಅಧ್ಯಕ್ಷ ಶಾಸಕ ಜೆ.ಡಿ.ನಾಯ್ಕ ಪ್ರಸ್ತಾವಿಕ ಮಾತನಾಡಿ, ಸಮಾವೇಶ ತೆಗೆದುಕೊಂಡ ನಿರ್ಣಯಗಳನ್ನು ಮಂಡಿಸಿದರು.

ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಸೂರಜ್ ಸೋನಿ, ಸುಭದ್ರ ದೇವಾಡಿಗ, ಸುಭಾಶ್ ಶೇಟ್ಟಿ ಸೇರಿದಂತೆ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿದ ವಿವಿಧ ಮುಖಂಡರು ವೇದಿಕೆಯಲ್ಲಿದ್ದರು. ಗಂಗಾಧರ್ ನಾಯ್ಕ ನಿರೂಪಿಸಿ, ವಂದಿಸಿದರು.

ನಾನು ಹಿಂದುಳಿದ ವರ್ಗದ ಓರ್ವ ಸದಸ್ಯನಾಗಿ ಈ ಸಮಾವೇಶದಲ್ಲಿ ಭಾಗವಹಿಸಿದ್ದೇನೆ. ನಾನು ಬಿಜೆಪಿ ಪಕ್ಷದ ಶಾಸಕನಾಗಿ ಭಾಗವಹಿಸಿಲ್ಲ. ಈ ಭಾಗದ ಎಲ್ಲ ಹಿಂದುಳಿದ ವರ್ಗಕ್ಕೆ ಸೇರಿದ ಶಾಸಕರಿಗೆ ಕಿವಿ ಮಾತು ಹೇಳುವುದೆಂದರೆ ನೀವೆಲ್ಲರೂ ಕೂಡ ಈ ಹೋರಾಟಕ್ಕೆ ಬೆನ್ನೆಲುಬಾಗಿ ನಿಲ್ಲಬೇಕು. ಇದು ನಮ್ಮ ಮುಂದಿನ ಪೀಳಿಗೆಯ ಅಳಿವು ಉಳಿವಿನ ಪ್ರಶ್ನೆಯಾಗಿದೆ.
ಸುನಿಲ್ ನಾಯ್ಕ, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News