ಅಡಿಕೆ ಹಳದಿ ರೋಗದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ: ಸಚಿವ ಅಂಗಾರ

Update: 2021-02-22 17:35 GMT

ತೊಡಿಕಾನ: ಸುಳ್ಯ ತಾಲೂಕು ಸೇರಿ ಜಿಲ್ಲೆಯಲ್ಲಿ ಕಂಡು ಬಂದಿರುವ ಅಡಿಕೆ ಹಳದಿ ರೋಗದ ಸಮಸ್ಯೆ ಮತ್ತು ಅದರ ಪರಿಹಾರದ ಬಗ್ಗೆ  ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಅದರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೃಷಿ ಸಚಿವರ ಉಪಸ್ಥಿತಿಯಲ್ಲಿ ಶೀರ್ಘಸಭೆ ನಡೆಸಲಾಗುವುದು ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ‌ಸಾರಿಗೆ ಸಚಿವ ಎಸ್.ಅಂಗಾರ ಹೇಳಿದ್ದಾರೆ.

ಸುಳ್ಯ ತಾಲೂಕು ಅಡಿಕೆ ಬೆಳೆಗಾರರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಕ್ಯಾಂಪ್ಕೋ ಮಂಗಳೂರು ಸಹಕಾರದಲ್ಲಿ ಅಡಿಕೆ ಹಳದಿ ರೋಗ ಪರಿಹಾರ ಬಗ್ಗೆ ಅಡಿಕೆ ಬೆಳೆಗಾರರೊಂದಿಗೆ ತೊಡಿಕಾನ ಗ್ರಾಮದ ಅಡ್ಯಡ್ಕ ಉಮಾಶಂಕರ ಅವರ ತೋಟದಲ್ಲಿ  ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೃಷಿ ಸಚಿವರ ಉಪಸ್ಥಿತಿಯಲ್ಲಿ ನಡೆಯುವ ಸಭೆಗೆ ಕ್ಯಾಂಪ್ಕೋ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು, ಅಡಕೆ ಬೆಳೆಗಾರರ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳನ್ನು, ಸಿಪಿಸಿಆರ್ ಐ ಮತ್ತಿತರ ಸಂಶೋಧನಾ ಕೇಂದ್ರದ ವಿಜ್ಞಾನಿಗಳನ್ನು, ವಿವಿಧ ಇಲಾಖಾ ಅಧಿಕಾರಿಗಳನ್ನು ಕರೆಯಲಾಗುವುದು. ಕೃಷಿಕರ ಬೇಡಿಕೆಯ ಪರಿಹಾರದ ರೂಪುರೇಷೆಗಳನ್ನುಅಲ್ಲಿ ತಯಾರಿಸಲಾಗುವುದು. ಅಡಿಕೆಗೆ ಪರ್ಯಾಯ ಕೃಷಿ, ಸಾಲ ಮನ್ನಾ ಮತ್ತಿತರ ಬೇಡಿಕೆಗಳನ್ನು ಸಂವಾದದಲ್ಲಿ ಕೃಷಿಕರು ಮುಂದಿರಿಸಿದ್ದಾರೆ. ಇದನ್ನು ಈಡೇರಿಸುವುದಕ್ಕೆ ಎಲ್ಲಾ ಪ್ರಯತ್ನ ನಡೆಸಲಾಗುವುದು. ಜನರಿಗೆ ಆಶಾಭಾವನೆ ಮತ್ತು ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುವುದು ಎಂದು ಅವರು ಹೇಳಿದರು. 

'ಕೃಷಿಕರ ಜೊತೆ ಕ್ಯಾಂಪ್ಕೋ ಇದೆ'
ಕ್ಯಾಂಪ್ಕೋ  ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮಾತನಾಡಿ, ಹಳದಿ ರೋಗ ಬಾದೆಯಿಂದ ಕೃಷಿ ನಾಶವಾದ ಅಡಕೆ ಕೃಷಿಕರಲ್ಲಿ ನಾವು ಇನ್ನು ಬದುಕುವುದು ಹೇಗೆ ಎಂಬ ನೋವು ಇದೆ. ಮೂರು ದಶಕಗಳಿಂದ ಅಡಿಕೆ ಹಳದಿ ರೋಗ ಸಮಸ್ಯೆ ಇದ್ದರೂ ಅದಕ್ಕೆ ಸೂಕ್ತವಾದ ಸಂಶೋಧನೆ ಮಾಡಿ ಪರಿಹಾರ ಹುಡುಕಲು ಸಾಧ್ಯವಾಗಿಲ್ಲ. ಪ್ರಾಮಾಣಿಕ ಪ್ರಯತ್ನ ನಡೆಯದ‌ ಕಾರಣ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಈ ಕುರಿತು ಸಂಶೋಧನೆ ನಡೆಸಲು ಬೇರೆ ಸಂಶೋಧನಾಯಗಳಿಗೆ ಸೂಚಿಸಬೇಕಾಗಿದೆ. ಈ ಸಮಸ್ಯೆ ಪರಿಹಾರಕ್ಕೆ  ರೈತರ ಜೊತೆ ಎಲ್ಲಿಯ ತನಕ ಹೋಗಬೇಕೋ ಅಲ್ಲಿಯ ತನಕ ಹೋಗಲು ಕ್ಯಾಂಪ್ಕೋ ಸಿದ್ಧವಿದೆ ಎಂದು ಅವರು ಹೇಳಿದರು.

ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಕುಮಾರ್, ಪುತ್ತೂರು ಸಹಾಯಕ ಕಮೀಷನರ್ ಡಾ.ಯತೀಶ್ ಉಳ್ಳಾಳ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಟಿ.ಜೆ.ರಮೇಶ್, ಸಿಪಿಸಿಆರ್ ಐ ನ ಪ್ರಧಾನ ವಿಜ್ಞಾನಿ ವಿನಾಯಕ ಹೆಗಡೆ, ಸುಳ್ಯ ಎಪಿಎಂಸಿ ಅಧ್ಯಕ್ಷ ವಿನಯಕುಮಾರ್ ಮುಳುಗಾಡು, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಹಾನ ಉಪಸ್ಥಿತರಿದ್ದರು. 

ಸಂವಾದದಲ್ಲಿ ಕೃಷಿಕರಾದ ಭವಾನಿಶಂಕರ ಅಡ್ತಲೆ, ಆರ್ ಕೆ ಭಟ್ ಕುರುಂಬಡೇಲು, ಲೋಕನಾಥ ಅಮೆಚೂರು, ಪಿ.ಬಿ.ಪ್ರಭಾಕರ ರೈ, ಎನ್.ಎ.ಜಿತೇಂದ್ರ ನಿಡ್ಯಮಲೆ, ಶ್ರೀನಿವಾಸ ನಿಡಿಂಜಿ, ಉಮಾಶಂಕರ ತೊಡಿಕಾನ, ನಾಗೇಶ್ ಕುಂದಲ್ಪಾಡಿ, ಹೇಮಂತ್ ಕುಮಾರ್ ಕಂದಡ್ಕ,ವಿಜೇತ್ ಮರುವಳ ಮಾತನಾಡಿದರು.

ಅಡಕೆ ಬೆಳೆಗಾರರ ಹಿತರಕ್ಷಣಾ ವೇದಿಕೆಯ ಸಂಚಾಲಕ ಶಿವಾನಂದ ಕುಕ್ಕುಂಬಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉದಯಶಂಕರ ಅಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ನ.ಸೀತಾರಾಮ ವಿಷಯ ಮಂಡಿಸಿದರು. ಕರುಣಾಕರ ಅಡ್ಯಡ್ಕ ವಂದಿಸಿದರು.

ಅಡಿಕೆ ಹಳದಿ ರೋಗದ ಸಮಸ್ಯೆಯ ಪರಿಹಾರಕ್ಕಾಗಿ ಸಚಿವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಅನೂಪ್ ಬಿಳಿಮಲೆ ಮನವಿ ವಾಚಿಸಿಸರು. ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಕೆ, ನಿರ್ದೇಶಕರಾದ ಎಸ್.ಆರ್.ಸತೀಶ್ಚಂದ್ರ, ಕೃಷ್ಣಪ್ರಸಾದ್ ಮಡ್ತಿಲ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News