ದಿಲ್ಲಿ ಹಿಂಸಾಚಾರ: ಭಾಷಣದ ಬಗ್ಗೆ ವಿಷಾದವಿಲ್ಲ, ಅಗತ್ಯ ಬಿದ್ದರೆ ಮತ್ತೆ ಹಾಗೆಯೇ ಮಾಡುತ್ತೇನೆಂದ ಕಪಿಲ್ ಮಿಶ್ರಾ

Update: 2021-02-23 07:27 GMT

ಹೊಸದಿಲ್ಲಿ: ಕಳೆದ ವರ್ಷ ಈಶಾನ್ಯ ದಿಲ್ಲಿಯಲ್ಲಿ ಭುಗಿಲೆದ್ದ ಕೋಮು ದಳ್ಳುರಿಗಿಂತ ಮುಂಚೆ ತಾವು ಮಾಡಿದ್ದ ಭಾಷಣದ ಕುರಿತಂತೆ ತಮಗೆ ಯಾವುದೇ ವಿಷಾದವಿಲ್ಲ ಎಂದು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಹೇಳಿದ್ದಾರಲ್ಲದೆ ಅಗತ್ಯ ಬಿದ್ದರೆ ಮತ್ತೊಮ್ಮೆ ಹಾಗೆ ಮಾಡುತ್ತೇನೆಂದೂ ಹೇಳಿದ್ದಾರೆಂದು ಪಿಟಿಐ ವರದಿ ಮಾಡಿದೆ.

"ನಾನು ಮಾಡಿದ್ದನ್ನು ಮತ್ತೆ ಮಾಡುತ್ತೇನೆ" ಎಂದು 'ಡೆಲ್ಲಿ ರಯಟ್ಸ್ 2020: ದಿ ಅನ್‍ಟೋಲ್ಡ್ ಸ್ಟೋರಿ' ಕೃತಿ ಬಿಡುಗಡೆ ವೇಳೆ ಅವರು ಹೇಳಿದರು. "ದಿನೇಶ್ ಖತಿಕ್, ಅಂಕಿತ್ ಶರ್ಮ (ಐಬಿ ಸಿಬ್ಬಂದಿ) ಮತ್ತಿತರ ಹಲವರ ಜೀವ ಉಳಿಸಲಾಗಲಿಲ್ಲ ಎಂಬುದರ ಹೊರತಾಗಿ ನನಗೆ ಬೇರೆ ಯಾವುದೇ ವಿಷಾದವಿಲ್ಲ" ಎಂದೂ ಅವರು ಹೇಳಿದ್ದಾರೆ.

"ರಸ್ತೆಗಳನ್ನು ಬ್ಲಾಕ್ ಮಾಡಿದಾಗ, ಜನರು ತಮ್ಮ ಕೆಲಸಕ್ಕೆ ಹೋಗುವುದನ್ನು ಅಥವಾ ಮಕ್ಕಳು ಶಾಲೆಗೆ ಹೋಗುವಾಗ ಅಡ್ಡಿಯಾದಾಗ ಅಂತಹವುಗಳನ್ನು ತಡೆಯಲು ಕಪಿಲ್ ಮಿಶ್ರಾ ಯಾವತ್ತೂ ಇರುತ್ತಾರೆ" ಎಂದು ಅವರು ಹೇಳಿಕೊಂಡರು.

ಈಶಾನ್ಯ ದಿಲ್ಲಿಯಲ್ಲಿ ಫೆಬ್ರವರಿ 23ರಿಂದ 26ರ ತನಕ ಸಿಎಎ ಬೆಂಬಲಿಗರು ಹಾಗೂ ವಿರೋಧಿಗಳ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದಿದ್ದು, ಫೆಬ್ರವರಿ 23ರಂದು ಮಿಶ್ರಾ ಅವರು ಜನರ ದೊಡ್ಡ ಗುಂಪೊಂದನ್ನುದ್ದೇಶಿಸಿ ಮಾತನಾಡಿ ದಿಲ್ಲಿಯ ಜಾಫ್ರಾಬಾದ್‍ನಲ್ಲಿ  ಸಿಎಎ ವಿರೋಧಿ ಪ್ರತಿಭಟನೆ ನಡೆಸುತ್ತಿರುವ ಸ್ಥಳವನ್ನು ತೆರವುಗೊಳಿಸುವಂತೆ  ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಸಮ್ಮುಖದಲ್ಲಿಯೇ ಹೇಳಿದ್ದರು. ಮೂರು ದಿನಗಳೊಳಗೆ ಕ್ರಮ ಕೈಗೊಳ್ಳದೇ ಇದ್ದರೆ ಹಿಂಸೆಯ ಬೆದರಿಕೆಯನ್ನೂ ಒಡ್ಡಿದ್ದರು. ಅವರ ಈ ಭಾಷಣ ಉದ್ವಿಗ್ನತೆಗೆ ಕಾರಣವಾಗಿ ಅದೇ ಅಪರಾಹ್ನ ಹಲವಾರು ಹಿಂಸಾತ್ಮಕ ಘಟನೆಗಳು ನಡೆಯುವಂತಾಗಿತ್ತು.

ಸೋಮವಾರ ನಡೆದ ಕೃತಿ ಬಿಡುಗಡೆ ಸಮಾರಂಭದಲ್ಲಿ ತಮ್ಮ ಈ ಭಾಷಣವನ್ನು ಸಮರ್ಥಿಸಿಕೊಂಡ ಅವರು "ಪ್ರಜಾಪ್ರಭುತ್ವದಲ್ಲಿ ಗಡುವನ್ನು ವಿಧಿಸಲು ಬೇರೆ ಯಾವ ದಾರಿಯಿದೆ? ನಾನು ಅದನ್ನು ಪೊಲೀಸ್ ಅಧಿಕಾರಿಯೊಬ್ಬರ ಸಮ್ಮುಖ ಮಾಡಿದ್ದೆ. ಹಿಂಸೆ ಪ್ರಚೋದಿಸಲು ಯತ್ನಿಸುವವರು ಪೊಲೀಸರ ಸಮ್ಮುಖದಲ್ಲಿ ಇಂತಹ ಗಡುವು ನೀಡುತ್ತಾರೆಯೇ?" ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News