ಕೊಂಕಣಿ ಸಾಹಿತಿ ಹೆರೊಲ್ಪಿಯುಸ್ ನಿಧನ

Update: 2021-02-23 07:37 GMT

ಮಂಗಳೂರು, ಫೆ.23: ಕೊಂಕಣಿಯ ಜನಪ್ರಿಯ ಸಾಹಿತಿ, ‘ಹೆರೊಲ್ಪಿಯುಸ್‌’ ಎಂದೇ ಚಿರಪರಿಚಿತರಾಗಿದ್ದ ಗ್ರೇಶನ್ ಪಿಯುಸ್ ಡಿಸಿಲ್ವಾ (67) ಫೆ.22ರಂದು ನಿಧನರಾಗಿದ್ದಾರೆ.

 1954ರಲ್ಲಿ ಮಂಗಳೂರಿನ ಕೊರ್ಡೆಲ್‌ನಲ್ಲಿ ಜನಿಸಿದ್ದ ಅವರ ಮೊದಲ ಸಣ್ಣಕಥೆ 1970ರಲ್ಲಿ ಝೆಲೊ ಮಾಸಿಕದಲ್ಲಿ ಪ್ರಕಟವಾಗಿತ್ತು. ಸಂತ ಅಲೋಸಿಯಸ್ ಕಾಲೇಜಿನಲ್ಲಿ ಬಿ.ಕಾಂ. ಓದುತ್ತಿದ್ದಾಗಲೇ ಅವರ ಸಾಹಿತ್ಯ ಪಯಣ ಆರಂಭವಾಗಿ, 10 ಕಾದಂಬರಿ, 170 ಸಣ್ಣ ಕಥೆ, 200ರಷ್ಟು ಕವಿತೆಗಳನ್ನು ರಚಿಸಿದ್ದಾರೆ. 300ರಷ್ಟು ಲೇಖನ ಮತ್ತು 1200 ಹಾಸ್ಯ ಲೇಖನಗಳನ್ನು ಬರೆದಿದ್ದಾರೆ.

  ಅವರು ಬರೆದ ಕಾದಂಬರಿಗಳ ಪೈಕಿ ದೋನ್ ಥೆಂಬೆ ದುಖಾಂ, ರಗತ್ ಅನಿ ಉದಕ್, ಏಕ್ ಅಧುರೆಂ ಪಿಂತುರ್, ಮ್ಹಜ್ಯಾ ಸಪ್ಣಾಚಿ ರಾಣಿ, ಸಿಸ್ಟರ್ ಶೋಭಾ, ಮೋಗ್ ಆನಿ ತ್ಯಾಗ್, ತುಂ ಮ್ಹಜೆಂಚ್ ಬಾ, ಲಗ್ನಾಚಿ ಪಯ್ಲಿ ರಾತ್, ಪುಸುನ್ ಘಾಲ್ಲೊ ಪೊಳೊಮತ್ತು ಶಿಮ್ಟಿ ಪಳೆ ವಾಂಕ್ಡಿ ಪ್ರಮುಖವಾಗಿವೆ. ಕೊಂಕಣಿಯಲ್ಲಿ 40 ವರ್ಷಗಳ ಸುದೀರ್ಘ ಸಾಹಿತ್ಯ ಸೇವೆಯನ್ನು ಅವರು ಸಲ್ಲಿಸಿದ್ದಾರೆ.

ಪದವಿ ಮುಗಿಸಿ ದಿಲ್ಲಿಯಲ್ಲಿ ಲೈಬ್ರೆರಿ ಸೈನ್ಸ್ ಶಿಕ್ಷಣ ಪಡೆದ ಅವರು ಕೇಂದ್ರೀಯ ಗುಪ್ತಚರ ದಳದಲ್ಲಿ ಉದ್ಯೋಗಕ್ಕೆ ಸೇರಿದರು. ಕರ್ತವ್ಯ ನಿಮಿತ್ತ ದಿಲ್ಲಿ, ಮಧ್ಯ ಪ್ರದೇಶ, ಗುಜರಾತ್, ಸಿಕ್ಕಿಂ, ಕರ್ನಾಟಕ, ಜಮ್ಮು ಕಾಶ್ಮೀರ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸಿರುವ ಹೆರೊಲ್ಪಿಯುಸ್, ವಿಶ್ವಸಂಸ್ಥೆಯ ಮಿಶನ್‌ನಡಿ ವಿದೇಶದಲ್ಲಿಯೂ ಕೆಲಸ ಮಾಡಿದ್ದಾರೆ. ಕಛ್ ಪ್ರದೇಶ ಮತ್ತು ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಅವರ ವಿಶೇಷ ಪರಿಗಣಿಸಿ ಎರಡು ಬಾರಿ ಭಾರತ ಸರಕಾರದಿಂದ ಪ್ರಶಸ್ತಿ ಲಭಿಸಿದೆ. ನಿವೃತ್ತಿಗೆ ಮುನ್ನ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಶನ್ ವಿಭಾಗದ ಅಧಿಕಾರಿಯಾಗಿದ್ದರು.

ಅವರ ಸಾಹಿತ್ಯ ಸೇವೆಗಾಗಿ ಗೋವಾ ಭಾಷಾ ಮಂಡಲ, ದಾಯ್ಜಿ ದುಬೈ, ಕೊಂಕಣಿ ಕುಟಮ್ ಬಹರೈನ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News