ಕೋವಿಡ್: ತಲಪಾಡಿ ಗಡಿಯಲ್ಲಿ ನಿರ್ಬಂಧಕ್ಕೆ ಮುಂದುವರಿದ ಕೇರಳಿಗರ ಆಕ್ರೋಶ

Update: 2021-02-23 09:54 GMT

ಉಳ್ಳಾಲ, ಫೆ.23: ದ.ಕ. ಜಿಲ್ಲಾಡಳಿತದ ಆದೇಶದಂತೆ ಕೇರಳ-ಕರ್ನಾಟಕ ರಾಜ್ಯಗಳ ಗಡಿಭಾಗವಾದ ತಲಪಾಡಿಯಲ್ಲಿ  ಸೋಮವಾರ ಆರಂಭಗೊಂಡ ಆರೋಗ್ಯ ಅಧಿಕಾರಿಗಳ ಪರಿಶೀಲನಾ ಕೇಂದ್ರದ ವಿರುದ್ಧ ಮಂಗಳವಾರವೂ ಗಡಿ ಪ್ರದೇಶದ ಕೇರಳಿಗರಿಂದ ಆಕ್ಷೇಪ ಮುಂದುವರಿದಿದ್ದು, ಮಂಗಳವಾರ ಮುಂಜಾನೆಯೇ ಪ್ರತಿಭಟನೆಗೆ ಸಜ್ಜಾಗಿದ್ದರು. ಆದರೆ ಜಿಲ್ಲಾಡಳಿತವು ಎರಡು ದಿನಗಳ ಕಾಲ ವಿನಾಯಿತಿ ನೀಡಿರುವುದರಿಂದ ಆರ್.ಟಿ-ಪಿಸಿಆರ್ ವರದಿ ಪರಿಶೀಲನೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಟ್ಟರು.

ಸಿಬ್ಬಂದಿ ತರಾಟೆಗೆ: ಗಡಿಯಲ್ಲಿ ನಿರ್ಬಂಧವನ್ನು ವಿರೋಧಿಸಿ ಮಂಗಳವಾರ ತಲಪಾಡಿಗೆ ಬಂದ ಗಡಿ ಪ್ರದೇಶದ ಕೇರಳಿಗರು ಕಾರ್ಯ ನಿಮಿತ್ತ ಅಲ್ಲಿಗೆ ಆಗಮಿಸಿದ್ದ ತಾಲೂಕಿನ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಒಂದು ವೇಳೆ ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಪ್ರವೇಶ ನೀಡದಿದ್ದರೆ ಕನ್ನಡಿಗರ ವಾಹನಗಳನ್ನು ತಡೆಗಟ್ಟುವುದಾಗಿ ಎಚ್ಚರಿಸಿದರು.

ತಲಪಾಡಿ ಆರೋಗ್ಯ ಪರಿಶೀಲನೆ ಕೇಂದ್ರಕ್ಕೆ ಅಧಿಕಾರಿಗಳು ಬರುವಾಗ ಎಂಟು ಗಂಟೆ ಆಗುತ್ತದೆ. ಅದಕ್ಕೂ ಮೊದಲು ಬಹುತೇಕ ಮಂದಿ ಯಾವುದೇ ವರದಿ ಇಲ್ಲದೆ ಗಡಿ ದಾಟಿ ಮಂಗಳೂರು ತಲುಪಿರುತ್ತಾರೆ. ಅದೇರೀತಿ ಬಸ್ಸಿನಲ್ಲಿ, ರೈಲಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಕೊರೊನ ಪರೀಕ್ಷೆ ಎಲ್ಲಿದೆ ಎಂದು ಪ್ರಶ್ನಿಸಿದರು. ಅಂತರ್ ರಾಜ್ಯ ಬಂದ್ ಮಾಡಬಾರದು ಎಂದು ಕೇಂದ್ರ ಸರ್ಕಾರ ದ ನಿಯಮ ಇದೆ. ಇದನ್ನು ಮೀರಿ ದ.ಕ. ಜಿಲ್ಲಾಡಳಿತ ಹೊಸ ನಿಯಮ ಜಾರಿ ಮಾಡಿದೆ. ಇದನ್ನು ಪ್ರಶ್ನಿಸಿ ಕೇರಳದ ಹಿರಿಯ ವಕೀಲ ರೊಬ್ಬರ ಮೂಲಕ ಕರ್ನಾಟಕ ಹೈಕೋರ್ಟ್ ನ ಮೊರೆ ಹೋಗಿದ್ದೆವೆ ಎಂದರು.

ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಜಿಲ್ಲಾ ಆರೋಗ್ಯ ಅಧಿಕಾರಿ ರಾಮಚಂದ್ರ ಬಾಯರಿ, ಕಾನೂನು ಪಾಲಿಸುವುದು ನಮ್ಮ ಕರ್ತವ್ಯ. ವಿದ್ಯಾರ್ಥಿಗಳಿಗೆ, ರೋಗಿಗಳಿಗೆ, ಉದ್ಯೋಗಿಗಳಿಗೆ ಯಾವ ತೊಂದರೆ ಕೊಡುವುದಿಲ್ಲ. ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿ ಅದರ ವರದಿ ನೀಡಿದರೆ ಸಾಕಾಗುತ್ತದೆ. ತಲಪಾಡಿಯಲ್ಲಿ ಪರಿಶೀಲನೆ ಮಾಡುವ ಹೊಣೆಗಾರಿಕೆ ನಮ್ಮದು. ರೈಲಿನಲ್ಲಿ ಆರೋಗ್ಯ ಅಧಿಕಾರಿಗಳು ಇದ್ದಾರೆ. ಎರಡು ದಿನಗಳ ಬಳಿಕ ಕೇರಳದಿಂದ ಬರುವವರು ಕಡ್ಡಾಯವಾಗಿ ವರದಿ ನೀಡಬೇಕು. ವರದಿ ಇಲ್ಲದವರಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಸುಜಯ್ ಮಾತನಾಡಿ, ಆರೋಗ್ಯ ಕಾಪಾಡಿ ಕೊಳ್ಳುವುದು ನಮ್ಮ ಹೊಣೆಗಾರಿಕೆ.ಜತೆಗೆ ಕಾನೂನು ಕೂಡ ಪಾಲನೆ ಮಾಡಬೇಕು. ಸೋಮವಾರ ಕೇರಳಿಗರ ಪ್ರತಿಭಟನೆ ಒಂದೆಡೆ ನಡೆದರೂ 350 ಮಂದಿಯ ರ್ಯಾಂಡಂ ಪರೀಕ್ಷೆ ಮಾಡಿಸಲಾಗಿದೆ. ಪರೀಕ್ಷೆ ಎಲ್ಲೆಡೆ ಉಚಿತ ಇದೆ. 15 ದಿನಗಳಿಗೊಮ್ಮೆ ಈ ರಸ್ತೆಯಾಗಿ ಬರುವ ಕೇರಳಿಗರು ವರದಿ ನೀಡಲೇಬೇಕು.  ವಿದ್ಯಾರ್ಥಿಗಳಲ್ಲಿ ಪಾಸ್ ಇದ್ದರೆ ಸಾಕು. ಸಂಚಾರಕ್ಕೆ ನಾವು ಅಡ್ಡಿ ಮಾಡುವುದಿಲ್ಲ. ಕೇರಳಿಗರು ಬರಬಾರದು ಎಂದು ಕೂಡಾ ಹೇಳುವುದಿಲ್ಲ. ಸರಕಾರದ ಆದೇಶ ಏನಿದೆಯೋ ಅದನ್ನು ನಾವು ಪಾಲಿಸಬೇಕಾಗುತ್ತದೆ ಎಂದು ಹೇಳಿದರು.

ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಕ್ ತಲಪಾಡಿ ಮಾತನಾಡಿ, ಆರೋಗ್ಯ ಅಧಿಕಾರಿ ಗಳ ಕಾರ್ಯ ನಿರ್ವಹಣೆ ನ್ಯಾಯ ಯುತವಾದುದೇ. ಆದರೆ ಒಮ್ಮೆಲೇ ನಿಯಮ ಜಾರಿ ಮಾಡಬಾರದು. ಈ ವಿಚಾರದಲ್ಲಿ ಸ್ವಲ್ಪ ಸಡಿಲಿಕೆ ಅಗತ್ಯ ಇದೆ.ಈಗ ಎರಡು ದಿನಗಳ ವಿನಾಯಿತಿ ನೀಡಿರುವುದರಿಂದ ಕೇರಳಿಗರಿಗೆ ಪರೀಕ್ಷೆ ವರದಿ ತರಲು ಅನುಕೂಲ ಆಗುತ್ತದೆ ಎಂದರು.

 ಜಿಲ್ಲಾಡಳಿತ ಎರಡು ದಿನಗಳ ವಿನಾಯಿತಿ ಸಾಕಾಗುವುದಿಲ್ಲ.ಕೇರಳಿಗರಿಗೆ ಅನ್ಯಾಯ ತೊಂದರೆ ಆಗಬಾರದು.ಮಂಗಳೂರಿನ ವಿವಿಧ ಕಂಪನಿಗಳಲ್ಲಿ ದುಡಿಯುವವರ ಪೈಕಿ ಹೆಚ್ಚಿನವರು ಕೇರಳಿಗರು. ಕೇರಳಿಗರ ವಿವಿಧ ಉದ್ಯಮ ಕೂಡ ಮಂಗಳೂರಿನಲ್ಲಿ ಇದೆ. ಒಂದು ಬಾರಿ ಕೊರೊನ ಬಂದ್ ಆಗಿ ಉದ್ಯಮ ಬೀದಿಪಾಲಾಗಿತ್ತು. ಇದೀಗ ಹೇಗೋ ಸುಧಾರಿಸಿಕೊಂಡು ಒಂದು ಹಂತಕ್ಕೆ ಬರುವಾಗ ಮತ್ತೆ ಬಂದ್ ಮಾಡಿ ತೊಂದರೆ ನೀಡಬೇಡಿ ಎಂದು ಈ ವೇಳೆ ಕೇರಳಿಗರು ಅಧಿಕಾರಿ ಗಳಲ್ಲಿ ವಿನಂತಿಸಿದರು.

ಜಿಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿ ಜಗದೀಶ್, ಅಶೋಕ್, ತಾಪಂ ಸದಸ್ಯ ಸಿದ್ದೀಕ್ ತಲಪಾಡಿ, ಕಿನ್ಯ ಗ್ರಾಮಕರಣಿಕ ಪ್ರಸಾದ್  ಮೊದಲಾದವರು ಉಪಸ್ಥಿತರಿದ್ದರು.

ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News