ಟೂಲ್‌ ಕಿಟ್‌ ಪ್ರಕರಣ: ಪರಿಸರ ಕಾರ್ಯಕರ್ತೆ ದಿಶಾ ರವಿಗೆ ಜಾಮೀನು ಮಂಜೂರು

Update: 2021-02-23 14:34 GMT

ಹೊಸದಿಲ್ಲಿ,ಫೆ.23: ಟೂಲ್‌ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.13ರಂದು ಬೆಂಗಳೂರಿನಲ್ಲಿ ದಿಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರಿಗೆ ಇಲ್ಲಿಯ ಸೆಷನ್ಸ್ ನ್ಯಾಯಾಲಯವು ಮಂಗಳವಾರ ಜಾಮೀನು ಮಂಜೂರು ಮಾಡಿದೆ. ತಲಾ ಒಂದು ಲಕ್ಷ ರೂ.ಗಳ ಎರಡು ಭದ್ರತೆಗಳನ್ನು ಒದಗಿಸುವಂತೆ ನ್ಯಾಯಾಲಯವು ಅವರಿಗೆ ಸೂಚಿಸಿದೆ.

ಸಾಕ್ಷಾಧಾರಗಳ ಕೊರತೆಯನ್ನು ಪರಿಗಣಿಸಿದರೆ ಯಾವುದೇ ಕ್ರಿಮಿನಲ್ ಪೂರ್ವೇತಿಹಾಸವನ್ನು ಹೊಂದಿರದ 22ರ ಹರೆಯದ ಯುವತಿಗೆ ಜಾಮೀನು ನಿರಾಕರಿಸಲು ಯಾವುದೇ ಸ್ಥೂಲ ಕಾರಣ ಕಂಡು ಬರುತ್ತಿಲ್ಲ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧಮೇಂದ್ರ ರಾಣಾ ಅವರು ತನ್ನ ಆದೇಶದಲ್ಲಿ ಹೇಳಿದ್ದಾರೆ.

 ಈ ತೀರ್ಪಿನ ಬೆನ್ನಲ್ಲೇ ಪಟಿಯಾಳ ಹೌಸ್ ನ್ಯಾಯಾಲಯದ ನ್ಯಾಯಾಧೀಶ ಪಂಕಜ್ ಶರ್ಮಾ ಅವರು ದಿಶಾ ಅವರ ಪೊಲೀಸ್ ಕಸ್ಟಡಿಯನ್ನು ನಾಲ್ಕು ದಿನ ವಿಸ್ತರಿಸುವಂತೆ ಕೋರಿ ದಿಲ್ಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿದರು.

ದಿಶಾ ಈಗಾಗಲೇ ಆರು ದಿನಗಳನ್ನು ಪೊಲೀಸ್ ಕಸ್ಟಡಿಯಲ್ಲಿ ಮತ್ತು ಎರಡು ದಿನಗಳನ್ನು ಜೈಲಿನಲ್ಲಿ ಕಳೆದಿದ್ದಾರೆ.

ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಿದ್ದ ನ್ಯಾಯಾಲಯವು ಶನಿವಾರ ತೀರ್ಪು ಕಾಯ್ದಿರಿಸಿತ್ತು.

ಮಂಗಳವಾರದ ಸಂಕ್ಷಿಪ್ತ ವಿಚಾರಣೆ ವೇಳೆ ದಿಶಾ ಪರ ವಕೀಲರು ತನ್ನ ಕಕ್ಷಿದಾರರಿಗೆ ಖಾಲಿಸ್ತಾನ್ ಆಂದೋಲನದೊಂದಿಗೆ ಯಾವುದೇ ಸಂಬಂಧವಿಲ್ಲ ಮತ್ತು ಅವರ ವಿರುದ್ಧದ ದೇಶದ್ರೋಹದ ಆರೋಪಕ್ಕೆ ಯಾವುದೇ ಸಮರ್ಥನೆಯಿಲ್ಲ ಎಂದು ಒತ್ತಿ ಹೇಳಿದರು.

ಜಾಮೀನು ನೀಡಿಕೆಯನ್ನು ವಿರೋಧಿಸಿದ ದಿಲ್ಲಿ ಪೊಲೀಸರು,ದಿಶಾರನ್ನು ಬಿಡುಗಡೆಗೊಳಿಸಿದರೆ ಆಕೆ ಸಾಕ್ಷಾಧಾರಗಳನ್ನು ಹಾಳುಗೆಡವಬಹುದು ಎಂದು ವಾದಿಸಿದರು.

ಕಳೆದ ವಾರ ವಿಚಾರಣೆ ಸಂದರ್ಭದಲ್ಲಿ ನ್ಯಾ.ರಾಣಾ ಅವರು ದಿಶಾ,ಸಾಮಾಜಿಕ ಕಾರ್ಯಕರ್ತ ಶಂತನು ಮುಲುಕ್ ಮತ್ತು ನ್ಯಾಯವಾದಿ ನಿಕಿತಾ ಜಾಕೋಬ್ ಪ್ರತ್ಯೇಕತಾವಾದಿಗಳೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ರೈತರ ಗಣತಂತ್ರ ದಿನದ ಟ್ರಾಕ್ಟರ್ ಪರೇಡ್ ಸಂದರ್ಭದಲ್ಲಿ ಹಿಂಸಾಚಾರವನ್ನು ಭುಗಿಲೆಬ್ಬಿಸಲು ಸಂಚು ನಡೆಸಿದ್ದರು ಎಂಬ ಪೊಲೀಸರ ವಾದದಲ್ಲಿ ಲೋಪಗಳನ್ನು ಬೆಟ್ಟು ಮಾಡಿದ್ದರು. ದಿಲ್ಲಿ ಪೊಲೀಸರು ನೀಡಿರುವ ಕಾರಣಗಳು ಊಹೆಗಳಾಗಿವೆ ಎಂದು ಅವರು ಬಣ್ಣಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News