ಕೊರೋನಾದಿಂದ ಶೇ.40ರಷ್ಟು ರಕ್ತದಾನಿಗಳ ಸಂಖ್ಯೆ ಇಳಿಕೆ: ಡಾ. ಶಮೀ ಶಾಸ್ತ್ರೀ

Update: 2021-02-23 11:34 GMT

ಉಡುಪಿ, ಫೆ.23: ಕೊರೋನ ಭೀತಿಯಿಂದ ಉಡುಪಿ ಜಿಲ್ಲೆಯಲ್ಲಿ ಶೇ.40ರಷ್ಟು ರಕ್ತದಾನಿಗಳ ಸಂಖ್ಯೆ ಕಡಿಮೆಯಾಗಿದೆ. ಇದಕ್ಕೆ ಕೊರೋನ ಕುರಿತ ತಪ್ಪು ಕಲ್ಪನೆಯೇ ಕಾರಣವಾಗಿದೆ ಎಂದು ಮಣಿಪಾಲ ಕೆಎಂಸಿ ಬ್ಲಡ್‌ಬ್ಯಾಂಕ್‌ನ ಅಸೋಸಿಯೇಟ್ ಪ್ರೊ. ಡಾ.ಶಮೀ ಶಾಸ್ತ್ರೀ ಹೇಳಿದ್ದಾರೆ.

ಉಡುಪಿ ಮುಸ್ಲಿಮ್ ವೆಲ್‌ಫೇರ್ ಅಸೋಸಿಯೇಶನ್ ಮತ್ತು ಮಣಿಪಾಲ ಕೆಎಂಸಿ ಬ್ಲಡ್‌ಬ್ಯಾಂಕ್ ಸಹಯೋಗದಲ್ಲಿ ಉಡುಪಿ ಜಾಮಿಯಾ ಮಸೀದಿ ವಠಾರದಲ್ಲಿ ಮಂಗಳವಾರ ಆಯೋಜಿಸಲಾದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡುತಿದ್ದರು.

ಕೊರೋನ ಹಿನ್ನೆಲೆಯಲ್ಲಿ ರಕ್ತದಾನಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ದಾನಿಗಳು ಯಾವುದೇ ಭಯ ಪಡದೆ ರಕ್ತದಾನ ಮಾಡಲು ಮುಂದಾಗಬೇಕು. ಈ ಮೂಲಕ ಜಿಲ್ಲೆಯಲ್ಲಿನ ರಕ್ತದ ಕೊರತೆಯನ್ನು ನೀಗಿಸ ಬೇಕು ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಉಡುಪಿ ಕರಾವಳಿ ಶಾಖೆಯ ಉಪಾಧ್ಯಕ್ಷ ಡಾ.ವಿನಾಯಕ ಶೆಣೈ ಮಾತನಾಡಿ, ರಕ್ತದಾನ ಎಂಬುದು ದೇವರು ಮೆಚ್ಚುವ ಕೆಲಸ. ದಾನದಿಂದ ರಕ್ತ ಸಂಬಂಧದ ಜೊತೆ ಬಾಂಧವ್ಯ ಬೆಳೆಯುತ್ತದೆ. ಇತರರ ಜೀವಗಳನ್ನು ಉಳಿಸಲು ನೀಡುವ ರಕ್ತದಾನವೇ ಶ್ರೇಷ್ಠವಾದ ದಾನ ಎಂದರು.ಅಸೋಸಿಯೇಶನ್ ಅಧ್ಯಕ್ಷ ಕಲ್ಯಾಣಪುರ ಅಬ್ದುಲ್ ಗಫೂರ್, ಮಣಿಪಾಲ ಮಸೀದಿ ಅಧ್ಯಕ್ಷ ಹಾಜಿ ಕೆ.ಅಬ್ದುಲ್ಲಾ ಪರ್ಕಳ, ಉಡುಪಿ ಜಾಮೀಯ ಮಸೀದಿ ಅಧ್ಯಕ್ಷ ಮುಹಮ್ಮದ್ ಅರ್ಶಾದ್, ಉಡುಪಿ ಪಿಎಫ್‌ಐ ಕಮ್ಯುನಿಟಿ ಡೆವಲಪ್ ಮೆಂಟ್ ವಿಭಾಗದ ಶಮ್ಸ್ ತಬ್ರೇಝ್ ಉಪಸ್ಥಿತರಿದ್ದರು.

ನಿಕಟಪೂರ್ವ ಅಧ್ಯಕ್ಷ ವಿ.ಎಸ್.ಉಮರ್ ಸ್ವಾಗತಿಸಿದರು. ಮಸೀದಿಯ ಮುಹಮ್ಮದ್ ಯೂನೂಸ್ ಕುರಾನ್ ಪಠಿಸಿದರು. ರಿಯಾಝ್ ಅಹ್ಮದ್ ವಂದಿಸಿದರು. ಸಾಮಾಜಿಕ ಕಾರ್ಯಕರ್ತ ಇಕ್ಬಾಲ್ ಮನ್ನಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News