'ಅಲ್ಪ ಹಾಗೂ ಹುರುಳಿಲ್ಲದ ಸಾಕ್ಷ್ಯ': ದಿಶಾ ರವಿಗೆ ಜಾಮೀನು ಮಂಜೂರುಗೊಳಿಸುವ ವೇಳೆ ಹೇಳಿದ ನ್ಯಾಯಾಧೀಶ

Update: 2021-02-23 11:53 GMT

ಹೊಸದಿಲ್ಲಿ: "ಒದಗಿಸಲಾದ ಅಲ್ಪ ಹಾಗೂ ಹುರುಳಿಲ್ಲದ ಸಾಕ್ಷ್ಯವನ್ನು ಪರಿಗಣಿಸಿ ಹಾಗೂ ಯಾವುದೇ ಕ್ರಿಮಿನಲ್ ಹಿನ್ನೆಲೆಯಿರದ 22 ವರ್ಷದ ಹುಡುಗಿಗೆ ಜಾಮೀನು ಒದಗಿಸುವ ಕುರಿತಾದ ನಿಯಮಗಳನ್ನು ಪಾಲಿಸದೇ ಇರಲು ನನಗೆ ಯಾವುದೇ ಕಾರಣ ಕಂಡು ಬರುತ್ತಿಲ್ಲ," ಎಂದು ಟೂಲ್ ಕಿಟ್ ಪ್ರಕರಣದಲ್ಲಿ ಬೆಂಗಳೂರು ಮೂಲದ ಪರಿಸರ ಹೋರಾಟಗಾರ್ತಿ ದಿಶಾ ರವಿಗೆ ಇಂದು ಜಾಮೀನು ಮಂಜೂರುಗೊಳಿಸುವ ವೇಳೆ  ಹೆಚ್ಚುವರಿ  ಸೆಶನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಹೇಳಿದರು.

ರೈತರ ಪ್ರತಿಭಟನೆ ಕುರಿತಾದ ಟೂಲ್ ಕಿಟ್ ಎಡಿಟ್ ಮಾಡಿದ್ದಾರೆಂಬ ಆರೋಪದ ಮೇಲೆ ಫೆಬ್ರವರಿ 13ರಂದು  ದಿಲ್ಲಿ ಪೊಲೀಸರು ದಿಶಾರನ್ನು ಬೆಂಗಳೂರಿನಲ್ಲಿ ಬಂಧಿಸಿದ್ದರೆ ನಂತರ ಐದು ದಿನಗಳ ಪೊಲೀಸ್ ಕಸ್ಟಡಿಗೆ ಆಕೆಯನ್ನು ವಹಿಸಲಾಗಿತ್ತು. ನಂತರ ನ್ಯಾಯಾಂಗ ಬಂಧನದಲ್ಲಿದ್ದ ಆಕೆಯನ್ನು ಮತ್ತೆ ಒಂದು ದಿನದ ಪೊಲೀಸ್ ಕಸ್ಟಡಿಗೆ ವಹಿಸಲಾಗಿತ್ತು.

ಇಂದು ಆಕೆಯ ಪೊಲೀಸ್ ಕಸ್ಟಡಿ ಅವಧಿ ಮುಗಿಯಲಿದ್ದುದರಿಂದ  ಆಕೆಯ ಜಾಮೀನು ಅರ್ಜಿ ವಿಚಾರಣೆ  ನಡೆಸುತ್ತಿದ್ದ ನ್ಯಾಯಾಲಯದಲ್ಲಿಯೇ ಆಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಲಾಗಿತ್ತು.  ಆಕೆಗೆ ಜಾಮೀನು ದೊರಕಿದೆ ಎಂದು ತಿಳಿಯುತ್ತಲೇ  ಕಸ್ಟಡಿ ಕುರಿತಾದ  ವಿಚಾರಣೆಯನ್ನು ಕೈಬಿಡಲಾಯಿತು ಎಂದು ಮ್ಯಾಜಿಸ್ಟ್ರೇಟ್ ಹೇಳಿದರು.

ಟೂಲ್ ಕಿಟ್ ಪ್ರಕರಣದಲ್ಲಿ ಸರಕಾರದ ಪರ ವಾದ ಮಂಡಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು, "ಟೂಲ್ ಕಿಟ್ ಯಾವುದೇ ಹಿಂಸೆ ಪ್ರಚೋದಿಸದೇ ಇದ್ದರೂ ಅದು ಒಂದು ಅಶಾಂತಿ ಸೃಷ್ಟಿಸಲು ಅದೊಂದು ಮುಖವಾಡದಂತಿತ್ತು" ಎಂದಿದ್ದರು. "ದಿಶಾ ತಮ್ಮ ಸ್ವಂತ ಫೋನ್ ಸಂಖ್ಯೆ ಬಳಸಿ ವಾಟ್ಸ್ಯಾಪ್ ಗ್ರೂಪ್ ರಚಿಸಿದ್ದರು. ಇದೇ ಫೋನ್ ಬಳಸಿ ಆಕೆ ಗ್ರೆಟ್ಟಾಗೆ ಟ್ವೀಟ್ ಮಾಡಿದ್ದರು ಹಾಗೂ ಫೆಬ್ರವರಿ 3ರಂದು ಗ್ರೆಟ್ಟಾ ಮಾಡಿದ ಟ್ವೀಟ್‍ನಿಂದ ಸಂಚು ಬಯಲಾಗಿತ್ತು. ಟೂಲ್ ಕಿಟ್ ಡಾಕ್ಯುಮೆಂಟ್ ಡಿಲೀಟ್ ಮಾಡುವಂತೆ ದಿಶಾ ಗ್ರೆಟ್ಟಾಗೆ ಹೇಳಿದ್ದರು. ಅದರಲ್ಲೇನೂ ಇರದೇ ಇದ್ದರೆ ಏಕೆ ಡಿಲೀಟ್ ಮಾಡಲು ಹೇಳಿದರು ಇದರ ಹಿಂದೆ ಕೆಟ್ಟ ಉದ್ದೇಶವಿತ್ತು ಎಂದು ತಿಳಿಯುತ್ತದೆ" ಎಂದು ರಾಜು ವಾದಿಸಿದ್ದರು.

ದಿಶಾ ಹಾಗೂ ಆಕೆಯ ಸಹವರ್ತಿಗಳಾದ ನಿಕಿತಾ ಜೇಕಬ್ ಹಾಗೂ ಶಂತನು ಮುಕುಲ್ ಅವರು ಖಲಿಸ್ತಾನಿ ಶಕ್ತಿಗಳ ಜತೆ ಸಂಪರ್ಕ ಹೊಂದಿದ್ದರು ಹಾಗೂ ಅವರೊಂದಿಗೆ ಟೂಲ್ ಕಿಟ್ ಶೇರ್ ಮಾಡಿದ್ದರು ಎಂದೂ ಆರೋಪಿಸಲಾಗಿತ್ತು.

ನಾವು ಕೇವಲ ಸಾಧ್ಯತೆಗಳ ಆಧಾರದಲ್ಲಿಯೇ ಕ್ರಮ ಕೈಗೊಳ್ಳಬೇಕೇ ಅಥವಾ ಸಾಕ್ಷ್ಯವಿದೆಯೇ ಎಂದು ನ್ಯಾಯಾಧೀಶ ರಾಣಾ ಕೇಳಿದಾಗ ದಾಖಲೆಯನ್ನು ಹ್ಯಾಶ್ ಟ್ಯಾಗ್ ಮತ್ತು ಲಿಂಕ್‍ಗಳ ಜತೆಗೆ ಪರಿಗಣಿಸಬೇಕೆಂದು ರಾಜು ಹೇಳಿದ್ದರು.

ದಿಶಾಗೂ ನಿಷೇಧಿತ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್‍ಗೂ ನಂಟು ಇದೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ, ಮೇಲಾಗಿ ಕೆಂಪು ಕೋಟೆ ಪ್ರಕರಣದಲ್ಲಿ ಬಂಧಿತ ಯಾರು ಕೂಡಾ ತಾವು ಟೂಲ್ ಕಿಟ್‍ನಿಂದ ಪ್ರೇರಣೆ ಪಡೆದಿದ್ದಾಗಿ ಹೇಳಿಲ್ಲ ಎಂದು ದಿಶಾ ಪರ ವಕೀಲ ಅಗರ್ವಾಲ್ ವಾದಿಸಿದ್ದರಲ್ಲದೆ ದಿಶಾ ಪೊಲೀಸ್ ಕಸ್ಟಡಿಯಲ್ಲಿದ್ದ ವೇಳೆ ಒಮ್ಮೆಯೂ ಪೊಲೀಸರು ಸಾಕ್ಷ್ಯ ಸಂಗ್ರಹಕ್ಕೆ ಆಕೆಯನ್ನು ಬೆಂಗಳುರಿಗೆ ಕರೆದುಕೊಂಡು ಹೋಗಿಲ್ಲ ಎಂದು ವಿವರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News