ಉಡುಪಿ: ವಸತಿ ಶಾಲೆಗಳ ಪ್ರವೇಶಕ್ಕೆ ಫೆ.24ರಂದು ಪರೀಕ್ಷೆ

Update: 2021-02-23 11:57 GMT

ಉಡುಪಿ, ಫೆ.23: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಕ್ಕಾಗಿ ಪ್ರವೇಶ ಪರೀಕ್ಷೆಯನ್ನು ಫೆ.24ರಂದು ಅಪರಾಹ್ನ 2:30ರಿಂದ 4:30ರವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಸಲಾಗುತ್ತದೆ.

ಜಿಲ್ಲೆಯ ಎರಡು ಪರೀಕ್ಷಾ ಕೇಂದ್ರಗಳಲ್ಲಿ 100 ಅಂಕಗಳಿಗೆ ಈ ಪರೀಕ್ಷೆ ನಡೆಯಲಿದೆ. ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವ ಪರೀಕ್ಷೆಗೆ 192 ವಿದ್ಯಾರ್ಥಿಗಳು ಹಾಗೂ ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜು (ಬೋರ್ಡ್) ನಲ್ಲಿ ನಡೆಯುವ ಪರೀಕ್ಷೆಯಲ್ಲಿ 144 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಕೋವಿಡ್ -19 ವೈರಾಣು ಹರಡದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ಈ ಹಿಂದೆ ಸಿಇಟಿ ಪರೀಕ್ಷೆಯಲ್ಲಿ ಅನುಸರಿಸಿದ ಮುನ್ನೆಚ್ಚರಿಕೆಯ ಕ್ರಮಗಳನ್ನೇ ಈ ಪ್ರವೇಶ ಪರೀಕ್ಷೆಗೂ ಅಳವಡಿಸಿಕೊಳ್ಳಲು ಸೂಚಿಸಲಾಗಿದೆ.

ಪರೀಕ್ಷಾ ಕೇಂದ್ರದಲ್ಲಿ ಜ್ವರ, ಕೆಮ್ಮ್ಮು, ನೆಗಡಿ ಮುಂತಾದ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಎರಡು ಪ್ರತ್ಯೇಕ ಕೊಠಡಿಗಳನ್ನು ಸಿದ್ಧಪಡಿಸಲಾಗಿದ್ದು, ಪ್ರತೀ ಕೊಠಡಿಗೆ 24 ವಿದ್ಯಾರ್ಥಿಗಳನ್ನು ಹಂಚಿಕೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯ ಒಳಗೆ ಕೈ ಗಡಿ ಯಾರ, ಮೊಬೈಲ್ ಕ್ಯಾಲ್ಕ್ಯೂಲೇಟರ್, ಲಾಗ್ ಟೇಬಲ್ ಆಧುನಿಕ ಎಲೆಕ್ಟ್ರಾನಿಕ್ ಉಪಕರಣ ಇತ್ಯಾದಿಗಳನ್ನು ತರುವುದನ್ನು ನಿಷೇಧಿಸಲಾಗಿದೆ.

ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆ ಪ್ರಾರಂಭಗೊಳ್ಳುವ 2 ಗಂಟೆಯ ಮೊದಲು ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕೆಂದು ಪ್ರವೇಶ ಪತ್ರದಲ್ಲಿ ಸೂಚಿಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸುವ ಮುನ್ನ ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷಿಸಿ ಪರೀಕ್ಷಾ ಕೇಂದ್ರದ ಒಳಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಪರೀಕ್ಷಾ ಕೇಂದ್ರ ವನ್ನು ಸ್ಯಾನಟೈಸ್ ಮಾಡಲು ಜಿಲ್ಲಾಧಿಕಾರಿಗಳು ಉಡುಪಿ ನಗರಸಭೆ ಮತ್ತು ಕುಂದಾಪುರ ಪುರಸಭೆಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ನಿಷೇಧಾಜ್ಞೆ ಜಾರಿ: ಪರೀಕ್ಷೆ ನಡೆಯುವ ದಿನವಾದ ಫೆ.24ರಂದು ಪರೀಕ್ಷಾ ಕೇಂದ್ರಗಳ ಸುತ್ತ 200ಮೀ.ನ್ನು ನಿಷೇಧಿತ ಪ್ರದೇಶವೆಂದು ಜಿಲ್ಲಾಧಿಕಾರಿಗಳು ಸೆಕ್ಷನ್ 144(1) ರಂತೆ ಘೋಷಿಸಿದ್ದಾರೆ. ಅಲ್ಲದೇ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷಾ ಅವಧಿ ಮುಗಿಯುವವರೆಗೆ ಮುಚ್ಚಲು ಸೂಚಿಸಲಾಗಿದೆ.

ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ನಡೆಸಲು ಪ್ರತೀ ಪರೀಕ್ಷಾ ಕೇಂದ್ರಕ್ಕೆ ಒಬ್ಬರು ವೀಕ್ಷಕರನ್ನು ಹಾಗೂ ಪ್ರತೀ ಪರೀಕ್ಷಾ ಕೇಂದ್ರಕ್ಕೆ ಇಬ್ಬರು ವಿಶೇಷ ಜಾಗೃತದಳದ ಸದಸ್ಯರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಭಗವಂತ ಕಟ್ಟಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News