ಉದ್ಯೋಗಕ್ಕೆ ತಕ್ಕಂತಹ ಕೌಶಲ್ಯ ಅಗತ್ಯ: ಡಾ. ಅಪ್ಪಾಜಿ ಗೌಡ

Update: 2021-02-23 11:59 GMT

ಉಡುಪಿ, ಫೆ.23: ಉದ್ಯೋಗ ಆಕಾಂಕ್ಷಿಗಳು ತಮ್ಮ ಸಾಮರ್ಥ್ಯ, ಕೌಶಲ್ಯಗಳನ್ನು ಬೆಳೆಸಿಕೊಂಡು ಅಗತ್ಯವಾದ ಉದ್ಯೋಗಗಳನ್ನು ಪಡೆದು ಕೊಳ್ಳಬೇಕು. ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಸ್ವ-ವಿಮರ್ಶೆ ಮಾಡಿಕೊಂಡು ಉದ್ಯೋಗಗಳಿಗೆ ತಕ್ಕಂತಹ ಕೌಶಲ್ಯಗಳನ್ನು ಕಲಿತು ಕೊಳ್ಳಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಛೇರಿ ಮಂಗಳೂರು ವಲಯದ ಜಂಟಿನಿರ್ದೇಶಕ ಡಾ. ಅಪ್ಪಾಜಿ ಗೌಡ ಎಸ್.ಬಿ. ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ವೃತ್ತಿ ಸೇವಾ ಯೋಜನೆ ಅಡಿಯಲ್ಲಿ ನಡೆದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಜಿಲ್ಲಾ ಉದ್ಯೋಗಾಧಿಕಾರಿ ಖಲಂದರ್ ಖಾನ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಯುವ ಜನರ ಕೌಶಲ್ಯಗಳನ್ನು ಹೆಚ್ಚಿಸಲು ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸಿದ್ದು, ವಿದ್ಯಾರ್ಥಿಗಳು ಇದರಲ್ಲಿ ಹೆಸರು ನೋಂದಾಯಿಸಿಕೊಂಡು ಅವು ಗಳ ಪ್ರಯೋಜನ ಪಡೆದುಕೊಳ್ಳಬೇಕು. ಉದ್ಯೋಗಾಕಾಂಕ್ಷಿಗಳು ಕೌಶಲ್ಯಗಳನ್ನು ಕಲಿತು ಉದ್ಯೋಗಗಳನ್ನು ಪಡೆಯಲು ಪ್ರಯತ್ನಿಸ ಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಾಲಕೃಷ್ಣ ಎಸ್. ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಉದ್ಯೋಗ ಮೇಳಗಳಲ್ಲಿ ಭಾಗವಹಿಸಿ ಅದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ವಾಮನ ನಾಯಕ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೃಷ್ಣ ರಾವ್ ಕೊಡಂಚ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ದಯಾನಂದ ಶೆಟ್ಟಿ ಕೊಜಕುಳಿ, ಮಂಜುಳಾ ಪ್ರಸಾದ್, ಐಕ್ಯೂಎಸಿ ಸಂಚಾಲಕ ಡಾ.ಸುರೇಶ್ ರೈ ಕೆ. ಉಪಸ್ಥಿತರಿದ್ದರು.

ಉದ್ಯೋಗ ಮಾಹಿತಿ ಘಟಕ ಸಂಚಾಲಕ ಡಾ. ವೆಂಕಟೇಶ ಹೆಚ್.ಕೆ. ಸ್ವಾಗತಿಸಿ, ಆಂಗ್ಲ ಭಾಷಾ ವಿಭಾಗದ ಪ್ರೊ. ಉಮೇಶ್ ಪೈ ವಂದಿಸಿದರು. ಡಾ. ದುಗ್ಗಪ್ಪ ಕಜೆಕಾರ್ ಹಾಗೂ ಶರ್ಮಿಳಾ ಹಾರಾಡಿ ಕಾರ್ಯಕ್ರಮ ನಿರೂಪಿಸಿದರು.

ಆಟೋಮೊಬೈಲ್ಸ್, ಬ್ಯಾಂಕಿಂಗ್ ಮತ್ತು ಇನ್ಶೂರೆನ್ಸ್, ಇನ್‌ಪಾರ್ಮೆಷ್ನ್ ಟೆಕ್ನಾಲಜಿ ಮೊದಲಾದ ಕ್ಷೇತ್ರಗಳ 17 ಕಂಪನಿಗಳು ಉದ್ಯೋಗ ಮೇಳ ದಲ್ಲಿ ಭಾಗವಹಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News