ಸುಪ್ರೀಂ ಮಾಜಿ ಸಿಜೆಐ ರಂಜನ್‌ ಗೊಗೊಯಿ ವಿರುದ್ಧ ʼನ್ಯಾಯಾಂಗ ನಿಂದನೆʼ ಪ್ರಕರಣ ದಾಖಲಿಸುವಂತೆ ಸಾಕೇತ್‌ ಗೋಖಲೆ ಆಗ್ರಹ

Update: 2021-02-23 12:09 GMT

ಹೊಸದಿಲ್ಲಿ: ಇಂಡಿಯಾ ಟುಡೇ ಚಾನೆಲ್‌ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸುಪ್ರೀಂ ಕೋರ್ಟ್‌ ನ ಮಾಜಿ ಮುಖ್ಯ ನ್ಯಾಯಾಧೀಶ ರಂಜನ್‌ ಗೊಗೊಯಿ ನ್ಯಾಯಾಲಯಗಳ ಕುರಿತು ಹಲವಾರು ಹೇಳಿಕೆ ನೀಡಿದ್ದರು. ಈ ಕುರಿತಾದಂತೆ ಇದೀಗ ಅವರ ವಿರುದ್ಧ ʼನ್ಯಾಯಾಂಗ ನಿಂದನೆʼ ಪ್ರಕರಣ ದಾಖಲಿಸುವ ಕುರಿತಾದಂತೆ ಆರ್ಟಿಐ ಕಾರ್ಯಕರ್ತ ಸಾಕೇತ್‌ ಗೋಖಲೆ ಭಾರತೀಯ ಅಟಾರ್ನಿ ಜನರಲ್‌ ಕೆಕೆ ವೇಣುಗೋಪಾಲ್‌ ಗೆ ಪತ್ರ ಬರೆದಿದ್ದಾರೆ. ಈ ಕುರಿತಾದಂತೆ ಸಾಮಾಜಿಕ ತಾಣದಲ್ಲಿ ಸಾಕೇತ್‌ ಗೋಖಲೆ ಮಾಹಿತಿ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಾಜ್ಯಸಭೆಯ ಎಂಪಿ ಹಾಗೂ ಮಾಜಿ ಸುಪ್ರೀಂ ಮುಖ್ಯ ನ್ಯಾಯಾಧೀಶರು ನ್ಯಾಯಾಲಯಕ್ಕೆ ಅವಮಾನವಾಗುವಂತೆ ಮಾತನಾಡಿದ್ದಾರೆ ಎಂದು ಅವರ ಹೇಳಿಕೆಗಳ ಕೆಲವು ಪಟ್ಟಿಯನ್ನು ಪತ್ರದಲ್ಲಿ ಸಾಕೇತ್‌ ಉಲ್ಲೇಖಿಸಿದ್ದಾರೆ.

"ನೀವು ೫ ಟ್ರಿಲಿಯನ್‌ ಎಕಾನಮಿಯನ್ನು ಬಯಸುತ್ತಿದ್ದೀರಿ. ಆದರೆ ದೇಶದ ನ್ಯಾಯಾಂಗವು ಕುಸಿದು ಬೀಳುವಂತಿದೆ", ನೀವು ನ್ಯಾಯಾಲಯಕ್ಕೆ ಹೋದರೆ ಅಲ್ಲಿ ನಿಮ್ಮ ಕೊಳೆಯಾದ ಬಟ್ಟೆಯನ್ನು ತೊಳೆಯಬೇಕೆ ಹೊರತು ನಿಮಗೆ ತೀರ್ಪು ಸಿಗುವುದಿಲ್ಲ. ಈ ಕುರಿತು ಹೇಳಲು ನನಗೆ ಯಾವ ಹಿಂಜರಿಕೆ ಇಲ್ಲ." ಮಿಲಿಯನ್‌ ಗಟ್ಟಲೆ ಹಣ ಹೊಂದಿರುವ ಕಾರ್ಪೊರೇಷನ್‌ ಗಳು ಮಾತ್ರ ಸುಪ್ರೀಂ ಕೋರ್ಟ್‌ ಗೆ ಹೋಗಬಹುದು., ನ್ಯಾಯಾಂಗವು ಸರಿಯಾಗಿ ಕಾರ್ಯ ನಿರ್ವಹಿಸದ್ದಕ್ಕೆ ಒಂದಲ್ಲ ಹಲವು ಕಾರಣಗಳಿವೆ." ಈ ರೀತಿಯಾದ ಹಲವಾರು ಹೇಳಿಕೆಗಳನ್ನು ಸಾಕೇತ್‌ ಗೋಖಲೆ ಪಟ್ಟಿ ಮಾಡಿದ್ದಾರೆ.

"ನೀವು ಈಗಾಗಲೇ ಕಾಮಿಡಿಯನ್‌ ಕುನಾಲ್‌ ಕಮ್ರ ಹಾಗೂ ಕಾರ್ಟೂನಿಸ್ಟ್‌ ರಚಿತಾ ತನೇಜಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದೀರಿ. ಆದರೆ, ರಂಜನ್‌ ಗೊಗೊಯಿ ಹೇಳಿಕೆಯು ಅದಕ್ಕಿಂತಲೂ ತೀವ್ರತರವಾಗಿದು, ಕೂಡಲೇ ಈ ಕುರಿತು ನಿಮ್ಮ ಪ್ರತಿಕ್ರಿಯೆಯನ್ನು ಬಯಸುತ್ತಿದ್ದೇನೆ" ಎಂದು ಸಾಕೇತ್‌ ಗೋಖಲೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News