ಪೊಗರು ಚಿತ್ರದಲ್ಲಿ ಬ್ರಾಹ್ಮಣರ ಅವಹೇಳನ ಆರೋಪ : ಪೇಜಾವರಶ್ರೀ ಖಂಡನೆ

Update: 2021-02-23 13:54 GMT

ಉಡುಪಿ, ಫೆ.23: ನಂದಕಿಶೋರ್ ನಿರ್ದೇಶನದ ‘ಪೊಗರು’ ಚಲನಚಿತ್ರದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡಿರುವುದನ್ನು ಪೇಜಾವರ ಮಠದ ಶ್ರೀವಿಶ್ವ ಪ್ರಸನ್ನ ತೀರ್ಥರು ಖಂಡಿಸಿದ್ದಾರೆ.

ಚಿತ್ರದ ಅನೇಕ ದೃಶ್ಯಗಳಲ್ಲಿ ಬ್ರಾಹ್ಮಣರನ್ನು ತೀರಾ ಅವಮಾನಿಸಲಾಗಿದ್ದು ಇದರಿಂದ ಬ್ರಾಹ್ಮಣರ ಭಾವನೆಗಳಿಗೆ ತೀರಾ ನೋವಾಗಿದೆ. ಇಂತಹ ಬೆಳವಣಿಗೆ ಅಸಹನೀಯ. ಕೇವಲ ಬ್ರಾಹ್ಮಣರನ್ನು ಮಾತ್ರವಲ್ಲ ಯಾವುದೇ ಜಾತಿ ಸಮುದಾಯಗಳನ್ನು ನಿಂದಿಸುವ ಅವಮಾನಿಸುವ ಪ್ರವೃತ್ತಿ ಸಲ್ಲದು. ಈ ಮೂಲಕ ಮನೋರಂಜನೆ ನೀಡುತ್ತೇವೆ ಅನ್ನೋ ಭ್ರಮೆಯಿಂದ ಚಿತ್ರರಂಗ ಹೊರಬರಬೇಕು. ತಕ್ಷಣ ಪೊಗರು ಚಿತ್ರದಲ್ಲಿ ಬ್ರಾಹ್ಮಣ ಸಮಾಜವನ್ನು ನಿಂದಿಸುವ ದೃಶ್ಯಗಳನ್ನು ತೆರವುಗೊಳಿಸಬೇಕು ಎಂದು ಪೇಜಾವರಶ್ರೀ ಆಗ್ರಹಿಸಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ

ಪೊಗರು ಚಿತ್ರ ಹಿಂದೂ ಸಮಾಜದ ಭಾವನೆಗೆ ಧಕ್ಕೆ ಮಾಡಿದೆ. ಪೂಜಾ ಪದ್ಧತಿ, ಅರ್ಚಕರಿಗೆ ಅವಮಾನ ಮಾಡಿದೆ. ಚಿತ್ರದಿಂದ ಶ್ರದ್ಧೆ, ಆಚಾರ ವಿಚಾರಕ್ಕೆ ಧಕ್ಕೆಯಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂಥ ಆಕ್ಷೇಪಾರ್ಹ ದೃಶ್ಯಗಳಿಗೆ ಸೆನ್ಸಾರ್ ಕತ್ತರಿ ಹಾಕಿಲ್ಲ ಯಾಕೆ ? ಎಂದು ಹೇಳಿಕೆಯಲ್ಲಿ ಪ್ರಶ್ನಿಸಿರುವ ಅವರು, ಇದರಲ್ಲಿ ಸೆನ್ಸಾರ್ ಮಂಡಳಿ ನಡೆ ಸಂಶಯಕ್ಕೆ ಎಡೆಮಾಡಿ. ಪ್ರಚಾರ ಗಿಟ್ಟಿಸಿ ಹಣ ಮಾಡಬಹುದು ಎಂದು ಅಂದುಕೊಂಡಿರಬಹುದು.ಇಂತಹ ಮಾನಸಿಕತೆಯನ್ನು ನಾವು ತೊಡೆದುಹಾಕಬೇಕು. ಪೊಗರು ಚಲನಚಿತ್ರ ಪ್ರದರ್ಶನಕ್ಕೆ ನನ್ನ ವಿರೋಧ ಇದೆ. ಚಿತ್ರವನ್ನು ವಾಪಸ್ ಪಡೆದರೆ ಮರು ಸೆನ್ಸಾರ್ ಮಾಡಿ ಎಂದವರು ಸರಕಾರವನ್ನು ಒತ್ತಾಯಿಸಿದ್ದಾರೆ.

ಚಿತ್ರದ ಕೆಲ ದೃಶ್ಯಗಳನ್ನು ಕಂಡು ನನಗೆ ಬಹಳ ನೋವಾಗಿದೆ. ನಿಮ್ಮ ದಾರ್ಷ್ಟ್ಯವನ್ನು ಬೇರೆ ಧರ್ಮಗಳಿಗೆ ತೋರಿಸಲು ಶಕ್ತಿ ಇದೆಯೇ. ಇದು ಕೇವಲ ಬ್ರಾಹ್ಮಣರು ವಿರೋಧಿಸುವ ವಿಚಾರ ಅಲ್ಲ. ಪೂರ್ಣ ಹಿಂದೂ ಸಮಾಜ ಎದ್ದುನಿಂತು ವಿರೋಧಿಸಬೇಕು ಎಂದು ಶೋಭಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News