ಸುರ್ಜಾಗಡ ಗಣಿ ಬೆಂಕಿ ಪ್ರಕರಣ: ವರವರ ರಾವ್ ಗೆ ಜಾಮೀನು ಮಂಜೂರು

Update: 2021-02-23 14:11 GMT

ನಾಗ್ಪುರ,ಫೆ.23: ಬಾಂಬೆ ಉಚ್ಚ ನ್ಯಾಯಾಲಯದ ನಾಗ್ಪುರ ಪೀಠವು 2016ರ ಸುರ್ಜಾಗಡ ಕಬ್ಬಿಣದ ಗಣಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾರೋಗ್ಯದಿಂದ ನರಳುತ್ತಿರುವ ಕವಿ ಹಾಗೂ ಸಾಮಾಜಿಕ ಹೋರಾಟಗಾರ ವರವರ ರಾವ್(82) ಅವರಿಗೆ ಮಂಗಳವಾರ ವೈದ್ಯಕೀಯ ನೆಲೆಯಲ್ಲಿ ಆರು ತಿಂಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

 2016,ಡಿ.25ರಂದು ಗಡಚಿರೋಲಿ ಜಿಲ್ಲೆಯ ಎಟಾಪಲ್ಲಿ ತಾಲೂಕಿನ ಸುರ್ಜಾಗಡ ಗಣಿಯಿಂದ ಕಬ್ಬಿಣದ ಅದಿರು ಸಾಗಿಸುತ್ತಿದ್ದ ಕನಿಷ್ಠ 80 ವಾಹನಗಳಿಗೆ ಮಾವೋವಾದಿಗಳು ಬೆಂಕಿ ಹಚ್ಚಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾವ್ ಮತ್ತು ವಕೀಲ ಸುರೇಂದ್ರ ಗಡ್ಲಿಂಗ್ ಅವರನ್ನು 2019,ಫೆಬ್ರವರಿಯಲ್ಲಿ ಪೊಲೀಸರು ಬಂಧಿಸಿದ್ದರು.

ಉಚ್ಚ ನ್ಯಾಯಾಲಯದ ನಾಗ್ಪುರ ಪೀಠದ ನ್ಯಾ.ಸ್ವಪ್ನಾ ಜೋಶಿ ಅವರು ವೈದ್ಯಕೀಯ ಕಾರಣಗಳಿಂದ ರಾವ್ ಅವರಿಗೆ ಜಾಮೀನು ಮಂಜೂರು ಮಾಡಿದರು. ಸೋಮವಾರ ಬಾಂಬೆ ಉಚ್ಚ ನ್ಯಾಯಾಲಯದ ಪ್ರಧಾನ ಪೀಠವು ಇದೇ ಕಾರಣಗಳಿಂದ ರಾವ್ ಅವರಿಗೆ ಎಲ್ಗಾರ್ ಪರಿಷದ್-ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ಆರು ತಿಂಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.

ರಾವ್ ಬುದ್ಧಿಮಾಂದ್ಯತೆ ಲಕ್ಷಣಗಳು ಸೇರಿದಂತೆ ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಅವರ ಪರ ವಕೀಲರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News