ಪಾದೂರು ಐಎಸ್‌ಪಿಆರ್‌ಎಲ್ ಸಂತ್ರಸ್ಥರಿಗೆ ಗರಿಷ್ಠ ಪರಿಹಾರ ನೀಡಬೇಕು : ಸಂಸದೆ ಶೋಭಾ ಕರಂದ್ಲಾಜೆ

Update: 2021-02-23 14:28 GMT

ಉಡುಪಿ, ಫೆ.23: ಪಾದೂರಿನಲ್ಲಿ ಎರಡನೇ ಹಂತದ ಐಎಸ್‌ಪಿಆರ್‌ಎಲ್ ಕ್ರೂಡ್ ಆಯಿಲ್ ಸ್ಟೋರೇಜ್‌ನ 2ನೇ ಘಟಕದ ವಿಸ್ತರಣಾ ಯೋಜನೆಗೆ ಸಂಬಂಧಿಸಿದಂತೆ 210 ಎಕ್ರೆ ಭೂಸ್ವಾಧೀನ ಅಗತ್ಯವಿದ್ದು, ಈ ಯೋಜನೆಯ ಸಂತ್ರಸ್ಥರಿಗೆ ಕೇಂದ್ರ ಸರಕಾರದ ಪರಿಷ್ಕೃತ ಭೂಸ್ವಾಧೀನ ನಿಯಮಗಳನ್ವಯ ಗರಿಷ್ಠ ಪರಿಹಾರ ನೀಡಬೇಕು ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ವಿಸ್ತರಣಾ ಯೋಜನೆಯಿಂದ ಸಂತ್ರಸ್ತರಾಗುವ ಸಾರ್ವಜನಿಕರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದು, ಐಎಸ್‌ಪಿಆರ್‌ಎಲ್ ಯೋಜನೆಯು ದೇಶದ ಅತ್ಯಂತ ಪ್ರಮುಖ ಯೋಜನೆ ಯಾಗಿದ್ದು, ಇದರಿಂದ 410 ಮಿಲಿಯನ್ ಬ್ಯಾರೆಲ್ ತೈಲ ಸಂಗ್ರಹ ಸಾಧ್ಯ ವಾಗಲಿದೆ. ಯೋಜನೆಯ 2ನೆ ಘಟಕದ ವಿಸ್ತರಣೆಗೆ 210 ಎಕ್ರೆ ಜಾಗದ ಅಗತ್ಯವಿದ್ದು, ಯೋಜನೆಯಿಂದ ಜಾಗ ಕಳೆದುಕೊಳ್ಳುವವರಿಗೆ ಗರಿಷ್ಠ ಪರಿಹಾರ ನೀಡಿ ಅವರಿಗೆ ಸೂಕ್ತ ಪುರ್ನವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಅವರು ಕೆಐಎಡಿಬಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಸ್ತರಣಾ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳಿಗೆ ಹಾನಿ ಸಂಭವಿಸದಂತೆ ಹಾಗೂ ಸ್ಥಳದಲ್ಲಿನ 800 ವರ್ಷಗಳ ಹಿಂದಿನ ಜೈನ ಬಸದಿ ಹಾಗೂ ಸಮೀಪದ ಮನೆಗಳಿಗೆ ಹಾನಿಯಾಗದಂತೆ ಪುನರ್ ಸರ್ವೇ ನಡೆಸಿ, ಪರಿಷ್ಕೃತ ನಕ್ಷೆ ಸಿದ್ದಪಡಿಸಬೇಕು. ಪಾದೂರು ವ್ಯಾಪ್ತಿಯಲ್ಲಿನ ಭೂಪ್ರದೇಶದ ಎಸ್.ಆರ್. ಬೆಲೆಯನ್ನು ಹೆಚ್ಚು ಮಾಡಿ, ಭೂಮಿ ಕಳೆದುಕೊಳ್ಳುವ ಸಂತ್ರಸ್ಥರಿಗೆ ಗರಿಷ್ಠ ದರ ದೊರೆಯುವಂತೆ ಮಾಡಬೇಕು ಹಾಗೂ ಸಂತ್ರಸ್ಥರಿಗೆ ಸೂಕ್ತ ಉದ್ಯೋಗ ನೀಬೇಕು ಎಂದು ಅವರು ಹೇಳಿದರು.

ಈ ಕುರಿತು ಮಾಹಿತಿ ನೀಡಿದ ಕೆಐಯುಡಿಬಿ ಅಧಿಕಾರಿಗಳು, 2ನೆ ಘಟಕದ ವಿಸ್ತರಣೆ ಕುರಿತಂತೆ ಪ್ರಾಥಮಿಕ ಸರ್ವೇ ನಡೆಸಲಾಗಿದೆ. 227 ಮಂದಿ ಸಂತ್ರಸ್ಥರಿಗೆ ನೋಟೀಸ್ ನೀಡಬೇಕಿದ್ದು, ಈಗಾಗಲೇ 30 ಮಂದಿಗೆ ನೋಟಿಸ್ ನೀಡಲಾಗಿದೆ. ಅದರಲ್ಲಿ 3 ಜನ ನಿರಾಕರಣೆ ಮಾಡಿ ದ್ದಾರೆ. ಉಳಿದವರ ವಿಳಾಸ ಪತ್ತೆ ಹಚ್ಚಿ ನೋಟೀಸ್ ನೀಡುವ ಕಾರ್ಯ ಪ್ರಗತಿಯಲ್ಲಿದೆ. ನೋಟೀಸ್ ಪಡೆದ 30 ದಿನಗಳವೆರೆಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಶಾಸಕ ಲಾಲಾಜಿ ಆರ್.ಮೆಂಡನ್, ಜಿಪಂ ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಜಿ.ಜಗದೀಶ್, ಸಿಇಓ ಡಾ.ನವೀನ್ ಭಟ್, ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ, ಜಿಪಂ ಸದಸ್ಯೆ ಶಿಲ್ಪಾಸುವರ್ಣ, ಕಾಪು ತಾಪಂ ಅಧ್ಯಕ್ಷೆ ಶಶಿಪ್ರಭಾ, ಐಎಸ್‌ಪಿಆರ್‌ಎಲ್ ಅಧಿಕಾರಿಗಳಾದ ಅಜಯ್, ರಾಜಶೇಖರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News