ಮಾ.2: ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Update: 2021-02-23 15:17 GMT

ಮಂಗಳೂರು, ಫೆ.23: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ದರ ಏರಿಕೆಯನ್ನು ನಿಯಂತ್ರಿಸಲಾಗದ ಕೇಂದ್ರ ಸರಕಾರದ ಧೋರಣೆಯನ್ನು ಖಂಡಿಸಿ ಮಾ.2ರಂದು ನಗರದಲ್ಲಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಹಾಗೂ ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಿನದಿಂದ ದಿನಕ್ಕೆ ಇಂಧನದ ಬೆಲೆ ಏರಿಕೆ ಯಾಗುತ್ತಿದೆ. ಈ ಬಗ್ಗೆ ದೇಶದೆಲ್ಲೆಡೆ ಜನರು ಆಕ್ರೋಶ, ಅಸಮಾಧಾನ ವ್ಯಕ್ತಪಡಿಸುತ್ತಿದ್ದರೂ ಕೂಡ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಇಂಧನ ಬೆಲೆ ಏರಿಕೆಯಿಂದ ಎಲ್ಲಾ ವರ್ಗದ ಜನರೂ ತತ್ತರಿಸಿದ್ದಾರೆ. ಆ ಹಿನ್ನಲೆಯಲ್ಲಿ ಮಾ.2ರಂದು ಬೆಳಗ್ಗೆ 10 ಗಂಟೆಗೆ ಬಾವುಟಗುಡ್ಡದಿಂದ ರ್ಯಾಲಿ ನಡೆಸಿ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು. ಆ ದಿನ ಮಧ್ಯಾಹ್ನ 2 ಗಂಟೆಯವರೆಗೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ಎಲ್ಲಾ ಬಸ್ ಮತ್ತು ರಿಕ್ಷಾಗಳು ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಈ ಬಂದ್‌ನಿಂದ ಜನಸಾಮಾನ್ಯರಿಗೆ ತೊಂದರೆಯಾಗಲಿದೆ. ಆದರೆ, ಇಂಧನ ಬೆಲೆ ಏರಿಕೆಗೆ ವಿರೋಧ ವ್ಯಕ್ತಪಡಿಸುವ ಸಲುವಾಗಿ ನಡೆಸಲಾ ಗುವ ಪ್ರತಿಭಟನೆ, ಬಂದ್‌ನಲ್ಲಿ ಪಾಲ್ಗೊಂಡು ಕೇಂದ್ರ ಸರಕಾರಕ್ಕೆ ಬಿಸಿ ಮುಟ್ಟಿಸಬೇಕಿದೆ ಎಂದ ಹರೀಶ್ ಕುಮಾರ್ ಬಿಜೆಪಿ ಹೊರತು ಇತರ ಪಕ್ಷಗಳು ಆಡಳಿತ ನಡೆಸುವ ರಾಜ್ಯದಲ್ಲಿ ತೆರಿಗೆ ಇಳಿಸಲಾಗಿದೆ. ಆದರೆ ಬಿಜೆಪಿ ಆಡಳಿತ ನಡೆಸುವ ರಾಜ್ಯಗಳಲ್ಲಿ ತೆರಿಗೆ ಇಳಿಸದ ಕಾರಣ ಅಲ್ಲೆಲ್ಲಾ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಅಡುಗೆ ಅನಿಲದ ಬೆಲೆಯಲ್ಲಿ ಏರಿಕೆ ಮಾತ್ರವಲ್ಲ ಸಬ್ಸಿಡಿಯನ್ನೂ ಕೂಡ ರದ್ದುಪಡಿಸಲಾಗಿದೆ ಎಂದರು.

ಇಂಧನ ಬೆಲೆ ಏರಿಕೆಗೆ ಈ ಹಿಂದಿನ ಸರಕಾರ ಕಾರಣ ಎಂದು ಬಿಜೆಪಿಗರು ಕಾಂಗ್ರೆಸ್ ಪಕ್ಷವನ್ನು ಬೊಟ್ಟು ಮಾಡುತ್ತಿದ್ದಾರೆ. ಈ ಹಿಂದೆ ಇದ್ದ ಸರಕಾರ ಬಿಜೆಪಿ ನೇತೃತ್ವದ ಎನ್‌ಡಿಎ ಅಲ್ಲವೇ? ಕಾಂಗ್ರೆಸ್ 60 ವರ್ಷದಲ್ಲಿ ಮಾಡದ ಸಾಧನೆಯನ್ನು ಬಿಜೆಪಿ ಕೇವಲ 6 ವರ್ಷದಲ್ಲಿ ಮಾಡಿದೆ ಎಂದು ಬಿಜೆಪಿಗರು ಹೇಳುತ್ತಿದ್ದಾರೆ. ಇಂಧನ ಸಹಿತ ಇತರ ಎಲ್ಲಾ ವಸ್ತುಗಳ ಬೆಲೆ ಏರಿಕೆಯು ಬಿಜೆಪಿಯ ಸಾಧನೆಯೇ? ಎಂದು ಹರೀಶ್ ಕುಮಾರ್ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್ ಬಜಾಲ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಪಕ್ಷದ ಮುಖಂಡರಾದ ಜೆ. ಸಲೀಂ, ವಿಶ್ವಾಸ್ ಕುಮಾರ್ ದಾಸ್, ಪ್ರಕಾಶ್ ಸಾಲ್ಯಾನ್, ಸುರೇಂದ್ರ ಕಂಬ್ಳಿ, ಲಾರೆನ್ಸ್, ಜಯಶೀಲ ಅಡ್ಯಂತಾಯ, ನಝೀರ್ ಬಜಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News