ಕೇರಳ ಕರ್ನಾಟಕ ಗಡಿ ಮುಚ್ಚುವ ತೀರ್ಮಾನ ಕೈ ಬಿಡಿ : ಡಿವೈಎಫ್‌ಐ

Update: 2021-02-23 15:20 GMT

ಮಂಗಳೂರು, ಫೆ.23: ಕೇರಳದಲ್ಲಿ ಕೊರೋನ ಸೋಂಕು ಪ್ರಕರಣ ಹೆಚ್ಚಳವೆಂಬ ಕಾರಣ ಮುಂದಿಟ್ಟು ದ.ಕ.ಜಿಲ್ಲೆಗೆ ಹೊಂದಿಕೊಂಡಿರುವ ಕೇರಳದ ಗಡಿಗಳನ್ನು ಮುಚ್ಚುವ ಮತ್ತು ಗಡಿಪ್ರವೇಶಿಸಲು ಕೊರೋನ ನೆಗಟಿವ್ ವರದಿ ಹೊಂದಿರುವುದು ಕಡ್ಡಾಯಪಡಿಸುವ ದ.ಕ.ಜಿಲ್ಲಾಡಳಿತದ ತೀರ್ಮಾನವು ಕಾಸರಗೋಡು ಸಹಿತ ಅವಿಭಜಿತ ದ.ಕ.ಜಿಲ್ಲೆಯ ಜನರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹಾಗಾಗಿ ಸರಕಾರ ತಕ್ಷಣವೇ ಗಡಿ ಮುಚ್ಚುವ, ಪರೀಕ್ಷಾ ವರದಿ ಕಡ್ಡಾಯ ಮಾಡುವ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಡಿವೈಎಫ್‌ಐ ದ ಕ ಜಿಲ್ಲಾ ಸಮಿತಿ ಒತ್ತಾಯಿಸಿದೆ.

ಕೊರೋನ ಮೊದಲ ಹಂತದಲ್ಲಿ ತಿಂಗಳುಗಳ ಕಾಲದ ಗಡಿ ಮುಚ್ಚುಗಡೆಯಿಂದ ಮಂಗಳೂರಿನ ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಕಾಸರಗೋಡು ಭಾಗದ ಸಾವಿರಾರು ಜನ ಕನ್ನಡಿಗರು ಉದ್ಯೋಗ, ವ್ಯಾಪಾರಕ್ಕಾಗಿ ಮಂಗಳೂರನ್ನೇ ಅವಲಂಬಿಸಿದ್ದರು. ಆ ಸಂದರ್ಭ ತಮ್ಮ ದುಡಿಮೆಯ ಅವಕಾಶಗಳನ್ನೇ ಕಳೆದುಕೊಂಡು ಬೀದಿಗೆ ಬಂದಿದ್ದರು. ಈಗ ನಿಧಾನವಾಗಿ ಎಲ್ಲವೂ ಸಹಜ ಸ್ಥಿತಿಗೆ ಮರಳು ತ್ತಿರುವಾಗ ಗಡಿನಾಡಿನ ಸಾವಿರಾರು ವಿದ್ಯಾರ್ಥಿಗಳು ಫೀಸು ಕಟ್ಟಿ ಪರೀಕ್ಷೆಗಳಿಗೆ ಸಿದ್ದರಾಗುತ್ತಿರುವಾಗ ಏಕಾಏಕಿ ಗಡಿ ಮುಚ್ಚುವುದು ಆಘಾತಕಾರಿಯಾಗಿದೆ.

ಗಡಿಗಳನ್ನು ಮುಚ್ಚುವುದರಿಂದ ಕೊರೋನ ನಿಯಂತ್ರಣಕ್ಕೆ ಬರುತ್ತದೆ ಎಂಬುದಕ್ಕೆ ಯಾವುದೇ ಸರಿಯಾದ ಆಧಾರ ಇಲ್ಲ. ಈ ಹಿಂದೆ ತಿಂಗಳ ಕಾಲ ಗಡಿ ಮುಚ್ಚಿದಾಗ ಕೊರೋನ ಸೋಂಕು ಅತ್ಯಂತ ವೇಗವಾಗಿ ಹರಡಿತ್ತು. ಜಿಲ್ಲೆಯಲ್ಲಿ ಕೊರೋನ ಮುಂಜಾಗರೂಕತೆ ಕ್ರಮಗಳನ್ನು ಜಾರಿಗೊಳಿಸುವಲ್ಲಿ, ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವಿಧಾನಗಳನ್ನು ನಿಯಮಬದ್ದಗೊಳಿಸುವಲ್ಲಿ ವೈಫಲ್ಯಗಳು ಇನ್ನೂ ಮುಂದುವರಿದಿದೆ. ಹಾಗಾಗಿ ಗಡಿ ಮುಚ್ಚುವುದರಿಂದ ಪ್ರಾಯೋಗಿಕವಾಗಿ ಯಾವ ಪ್ರಯೋಜನವೂ ಆಗುವುದಿಲ್ಲ. ಬದಲಿಗೆ ಚೇತರಿಸಿಕೊಳ್ಳಲು ಪರದಾಡುತ್ತಿರುವ ಜನ ಸಾಮಾನ್ಯರ ಬದುಕಿಗೆ ಕೊಡಲಿ ಪೆಟ್ಟು ಬೀಳುತ್ತದೆ. ಜಿಲ್ಲಾಡಳಿತ ಗಡಿ ಮುಚ್ಚುವ ತೀರ್ಮಾನ ಹಿಂಪಡೆದು ಜನರ ಆತಂಕ ದೂರ ಮಾಡಬೇಕು ಎಂದು ಡಿವೈಎಫ್‌ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News