ಉ.ಪ್ರದೇಶ: ಕೇಂದ್ರ ಸಚಿವರ ಬೆಂಬಲಿಗರು-ರೈತರ ಮಧ್ಯೆ ಘರ್ಷಣೆ; ನಾಲ್ವರಿಗೆ ಗಾಯ

Update: 2021-02-23 16:31 GMT

ಲಕ್ನೊ, ಫೆ.23: ಉತ್ತರಪ್ರದೇಶದ ಮುಝಫರ್‌ನಗರದಲ್ಲಿ ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಬೆಂಬಲಿಗರು ಹಾಗೂ ರೈತರ ಮಧ್ಯೆ ಸೋಮವಾರ ಘರ್ಷಣೆ ನಡೆದಿದ್ದು ನಾಲ್ವರು ಗಾಯಗೊಂಡಿರುವುದಾಗಿ ‘ದಿ ಹಿಂದು’ ವರದಿ ಮಾಡಿದೆ. ಆದರೆ ರೈತರೊಂದಿಗೆ ಘರ್ಷಣೆ ನಡೆಸಿದವರು ತನ್ನ ಬೆಂಬಲಿಗರಲ್ಲ, ರಾಷ್ಟ್ರೀಯ ಲೋಕದಳದ ಬೆಂಬಲಿಗರು ಎಂದು ಸಚಿವರು ಹೇಳಿದ್ದಾರೆ.

ಮುಝಫರ್‌ನಗರದ ಸೊರಾಮ್ ಗ್ರಾಮದಲ್ಲಿ ಘಟನೆ ನಡೆದಿದೆ. ನಿಧನರಾದ ಗ್ರಾಮದ ಹಿರಿಯ ವ್ಯಕ್ತಿಯೊಬ್ಬರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಸಚಿವ ಬಲ್ಯಾನ್ ಪಾಲ್ಗೊಂಡಿದ್ದು ಈ ಸಂದರ್ಭ ಕೆಲವು ಗ್ರಾಮಸ್ಥರು ಬಲ್ಯಾನ್ ವಿರುದ್ಧ ಹಾಗೂ ಕೃಷಿ ಕಾಯ್ದೆ ವಿರುದ್ಧ ಘೋಷಣೆ ಕೂಗಿದರು ಎನ್ನಲಾಗಿದೆ. ಇದನ್ನು ಆಕ್ಷೇಪಿಸಿದ ಬಲ್ಯಾನ್ ಬೆಂಬಲಿಗನೊಬ್ಬ ಗ್ರಾಮಸ್ಥರ ಮೇಲೆ ಆಕ್ರಮಣ ನಡೆಸಿದ್ದು ಗೊಂದಲಕ್ಕೆ ಕಾರಣವಾಯಿತು. ಪರಿಸ್ಪರ ಹಲ್ಲೆ ನಡೆಸಿದ್ದು ನಾಲ್ವರು ಗಾಯಗೊಂಡಿದ್ದು ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು ಎಂದು ವರದಿಯಾಗಿದೆ.

ಘಟನೆಯ ಬಳಿಕ ಗ್ರಾಮಸ್ಥರು ಪಂಚಾಯತ್ ಸಭೆ ನಡೆಸಿದರು ಹಾಗೂ ಸಚಿವ ಬಲ್ಯಾನ್ ಮತ್ತವರ ಬೆಂಬಲಿಗರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿ ಶಹಪುರ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆಸಿದರು. ತನ್ನ ಮೇಲೆ ಸುಮಾರು 25 ಮಂದಿಯಿದ್ದ ಸಚಿವರ ಬೆಂಬಲಿಗರು ಹಲ್ಲೆ ನಡೆಸಿದ್ದರಲ್ಲದೆ ಪೊಲೀಸರು ಕೂಡಾ ಒರಟಾಗಿ ನಡೆಸಿಕೊಂಡರು ಎಂದು ಭಾರತೀಯ ಕಿಸಾನ್ ಯೂನಿಯನ್‌ನ ಸದಸ್ಯ ಯೋಗೇಶ್ ಕುಮಾರ್ ಆರೋಪಿಸಿದ್ದಾರೆ. ಇದುವರೆಗೆ ಎಫ್‌ಐಆರ್ ದಾಖಲಿಸಿಲ್ಲ, ರೈತರೊಂದಿಗೆ ಮಾತನಾಡಿ ಮಾಹಿತಿ ಪಡೆಯುತ್ತಿದ್ದೇವೆ ಎಂದು ಬುಧಾನಾ ಠಾಣೆಯ ಎಸ್‌ಐ ಗಿರಿಜಾ ಶಂಕರ್ ತ್ರಿಪಾಠಿ ಹೇಳಿದ್ದಾರೆ.

ತಾನು ಗ್ರಾಮಕ್ಕೆ ವೈಯಕ್ತಿಕ ಭೇಟಿ ನೀಡಿದ್ದ ಸಂದರ್ಭ ಆರ್‌ಎಲ್‌ಡಿ ಮುಖಂಡರು ರೂಪಿಸಿದ್ದ ಪೂರ್ವಯೋಜಿತ ಕೃತ್ಯದ ಹಿನ್ನೆಲೆಯಲ್ಲಿ ಘರ್ಷಣೆ ನಡೆದಿದೆ. ತಾನು ಅಲ್ಲಿ ಕುಳಿತಿದ್ದಾಗ ಕೆಲವು ಆರ್‌ಎಲ್‌ಡಿ ಕಾರ್ಯಕರ್ತರು ಆಗಮಿಸಿ ಅನಗತ್ಯವಾಗಿ ಸ್ಥಳೀಯರೊಂದಿಗೆ ತಗಾದೆ ತೆಗೆದು ಘರ್ಷಣೆ ಆರಂಭಿಸಿದ್ದಾರೆ. ಬಳಿಕ ಅವರನ್ನು ಅಲ್ಲಿಂದ ಓಡಿಸಲಾಗಿದೆ ಎಂದು ಸಚಿವ ಸಂಜೀವ್ ಬಲ್ಯಾನ್ ಹೇಳಿದ್ದಾರೆ. ಈ ಹೇಳಿಕೆಯನ್ನು ತಳ್ಳಿಹಾಕಿರುವ ಆರ್‌ಎಲ್‌ಡಿ ಉಪಾಧ್ಯಕ್ಷ ಜಯಂತ್ ಚೌಧರಿ, ಇದು ಬಿಜೆಪಿ ಮುಖಂಡರು ಹಾಗೂ ರೈತರ ಮಧ್ಯೆ ನಡೆದ ಘರ್ಷಣೆಯಾಗಿದೆ ಎಂದಿದ್ದಾರೆ.

‘ನಿಮಗೆ ರೈತರೊಂದಿಗೆ ಮಾತನಾಡಲು ಮನಸ್ಸಿಲ್ಲದಿದ್ದರೆ ಕನಿಷ್ಟ ಅವರೊಂದಿಗೆ ಸೌಹಾರ್ದಯುತವಾಗಿ ವರ್ತಿಸಿ, ರೈತರನ್ನು ಗೌರವಿಸಿ’ ಎಂದು ಬಿಜೆಪಿ ಮುಖಂಡರನ್ನುದ್ದೇಶಿಸಿ ಟ್ವೀಟ್ ಮಾಡಿರುವ ಅವರು, ಕೃಷಿ ಕಾಯ್ದೆಯ ಪರವಾಗಿ ಮಾತನಾಡುವ ಸರಕಾರದ ಪ್ರತಿನಿಧಿಗಳ ಗೂಂಡಾಗಿರಿಯನ್ನು ರೈತರು ಸಹಿಸಿಕೊಳ್ಳಬೇಕೇ ? ಎಂದು ಪ್ರಶ್ನಿಸಿದ್ದಾರೆ. ರೈತರು ತಮ್ಮ ಭ್ರಾತೃತ್ವವನ್ನು ಉಳಿಸಿಕೊಳ್ಳಬೇಕು. ಗ್ರಾಮಕ್ಕೆ ಆಗಮಿಸುವ ಜನಪ್ರತಿನಿಧಿಗಳೊಂದಿಗೆ ಪ್ರಶ್ನೆ ಕೇಳುವಾಗ ಜನತೆ ಸಭ್ಯತೆಯ ಮಿತಿಯನ್ನು ದಾಟಬಾರದು. ಜನಪ್ರತಿನಿಧಿಗಳೂ ಜನರ ಭಾವನೆಗಳಿಗೆ ಗೌರವ ನೀಡಬೇಕು ಎಂದು ಭಾರತೀಯ ಕಿಸಾನ್ ಯೂನಿಯನ್‌ನ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಸೊರಾಮ್ ಗ್ರಾಮದಲ್ಲಿ ಬಲ್ಯಾನ್ ಖಾಪ್(ಸಮುದಾಯ)ನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದು ಸಚಿವ ಸಂಜೀವ ಬಲ್ಯಾನ್, ಭಾರತೀಯ ಕಿಸಾನ್ ಯೂನಿಯನ್‌ನ ಮುಖಂಡರಾದ ರಾಕೇಶ್ ಟಿಕಾಯತ್, ನರೇಶ್ ಟಿಕಾಯತ್ ಇದೇ ಖಾಪ್‌ಗೆ ಸೇರಿದವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News