ಸೂಕ್ತ ಪ್ರಮಾಣೀಕರಣವಿಲ್ಲದೆ ಮಹಾರಾಷ್ಟ್ರದಲ್ಲಿ ‘ಪತಂಜಲಿಯ ಕೊರೋನಿಲ್’ ಮಾತ್ರೆ ಮಾರಾಟವಿಲ್ಲ: ಗೃಹ ಸಚಿವ

Update: 2021-02-23 16:37 GMT

ಮುಂಬೈ, ಫೆ.23: ಕೊರೋನ ಸೋಂಕಿನ ವಿರುದ್ಧ ಪತಂಜಲಿ ಸಂಸ್ಥೆ ತಯಾರಿಸಿದ ಕೊರೋನಿಲ್ ಮಾತ್ರೆಯನ್ನು ಸೂಕ್ತ ಪ್ರಮಾಣೀಕರಣವಿಲ್ಲದೆ ಮಹಾರಾಷ್ಟ್ರದಲ್ಲಿ ಮಾರಾಟ ನಡೆಸಲು ಅವಕಾಶವಿಲ್ಲ ಎಂದು ರಾಜ್ಯದ ಗೃಹ ಸಚಿವ ಅನಿಲ್ ದೇಶ್‌ಮುಖ್ ಹೇಳಿದ್ದಾರೆ.

ಕೊರೋನಿಲ್ ಮಾತ್ರೆ ಕೊರೋನ ಸೋಂಕಿನ ವಿರುದ್ಧ ಪರಿಣಾಮಕಾರಿ ಔಷಧ ಎಂದು ವಿಶ್ವ ಆರೋಗ್ಯಸಂಸ್ಥೆ ಪ್ರಮಾಣೀಕರಿಸಿರುವುದಾಗಿ ಪತಂಜಲಿ ಸಂಸ್ಥೆ ನಿರ್ಲಜ್ಜ ಸುಳ್ಳುಹೇಳಿದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(ಐಎಂಎ) ಸೋಮವಾರ ಖಂಡಿಸಿದ ಬೆನ್ನಲ್ಲೇ, ಮಹಾರಾಷ್ಟ್ರ ಸರಕಾರದ ಈ ಹೇಳಿಕೆ ಹೊರಬಿದ್ದಿದೆ. ಇಬ್ಬರು ಹಿರಿಯ ಕೇಂದ್ರ ಸಚಿವರು ಕೊರೋನಿಲ್ ಔಷಧಿಯನ್ನು ಅನುಮೋದಿಸಿರುವುದು ಅತ್ಯಂತ ಶೋಚನೀಯ ಎಂದು ದೇಶ್‌ಮುಖ್ ಟ್ವೀಟ್ ಮಾಡಿದ್ದಾರೆ.

ಕೊರೋನಿಲ್ ಮಾತ್ರೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸ್ಪಷ್ಟೀಕರಣ ನೀಡಬೇಕೆಂದು ಐಎಂಎ ಆಗ್ರಹಿಸಿದೆ. ಕೊರೋನ ಸೋಂಕಿನ ವಿರುದ್ಧ ಬಳಸಬಹುದಾದ ಯಾವುದೇ ಸಾಂಪ್ರದಾಯಿಕ ಔಷಧದ ಪರಿಣಾಮಕಾರಿತ್ವದ ಬಗ್ಗೆ ತಾನು ಪ್ರಮಾಣಪತ್ರ ನೀಡಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟನೆ ನೀಡಿದೆ.

ಯೋಗ ಗುರು ರಾಮ್‌ದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆ ಫೆಬ್ರವರಿ 19ರಂದು ನೀಡಿದ್ದ ಹೇಳಿಕೆಯಲ್ಲಿ ‘ಸಂಸ್ಥೆಯ ಉತ್ಪನ್ನವಾದ ಕೊರೋನಿಲ್ ಮಾತ್ರೆಗೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಮಾಣೀಕರಣ ಯೋಜನೆಯ ಪ್ರಕಾರ ಕೊರೋನ ಸೋಂಕಿನ ಚಿಕಿತ್ಸೆಗೆ ನೆರವಾಗುವ ಔಷಧಿಯೆಂದು ಆಯುಷ್ ಇಲಾಖೆಯ ಪ್ರಮಾಣಪತ್ರ ದೊರಕಿದೆ’ ಎಂದು ಹೇಳಿತ್ತು. ಆದರೆ ಈ ಬಗ್ಗೆ ಐಎಂಎ ಆಕ್ಷೇಪ ಎತ್ತಿದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ್ದ ಪತಂಜಲಿಯ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ, ‘ಕೊರೋನಿಲ್‌ಗೆ ವಿಶ್ವ ಆರೋಗ್ಯ ಸಂಸ್ಥೆಯ ಗುಣಮಟ್ಟ ಪ್ರಮಾಣಪತ್ರವನ್ನು ಭಾರತ ಸರಕಾರದ ಡಿಸಿಜಿಐ(ಔಷಧ ನಿಯಂತ್ರಕ ಪ್ರಧಾನ ನಿರ್ದೇಶನಾಲಯ) ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆ ಯಾವುದೇ ಔಷಧವನ್ನು ಮಾನ್ಯ ಅಥವಾ ಅಮಾನ್ಯ ಮಾಡುವುದಿಲ್ಲ’ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News