ಹಳೆ ಉಪಯೋಗವಿಲ್ಲದ ದೋಣಿಗಳಿಗೆ ಹೊಸ ಟಚ್ : ಎಕ್ಕೂರು ಮೀನುಗಾರಿಕಾ ಕಾಲೇಜಿನಲ್ಲಿ ವಿಶೇಷ ಆಕರ್ಷಣೆ

Update: 2021-02-23 16:49 GMT

ಮಂಗಳೂರು, ಫೆ. 23: ಹಳೆಯ ಹಾಗೂ ಉಪಯೋಗಕ್ಕೆ ಬಾರದ ಮೀನುಗಾರಿಕಾ ದೋಣಿಗಳನ್ನು ಕಡಿಮೆ ಖರ್ಚಿನಲ್ಲಿ ರಿಪೇರಿ ಮಾಡಿ ನಗರದ ಜನನಿಬಿಡ ಪ್ರದೇಶಗಳಲ್ಲಿ ಇರಿಸುವ ನಿಟ್ಟಿನಲ್ಲಿ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡಲಿದೆ ಎಂದು ಮೀನುಗಾರಿಕಾ ಸಚಿವ ಅಂಗಾರ ತಿಳಿಸಿದ್ದಾರೆ.

ನಗರದ ಎಕ್ಕೂರಿನ ಮೀನುಗಾರಿಕಾ ಕಾಲೇಜಿಗೆ ಭೇಟಿ ನೀಡಿ ಅಲ್ಲಿ ವಿವಿಧ ಕಾಮಗಾರಿಗಳ ಭೂಮಿಪೂಜೆ, ಉದ್ಘಾಟನೆ ಹಾಗೂ ಕಾಲೇಜಿನ ಎದುರು ಇರಿಸಲಾದ ಹೊಸ ರೂಪ ಪಡೆದ ಹಳೆ ಮೀನುಗಾರಿಕಾ ದೋಣಿಯ ವೀಕ್ಷಣೆಯ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ರಾಜ್ಯದ ಕರಾವಳಿ ಪ್ರದೇಶದಲ್ಲಿ ಇರುವ ದೋಣಿಗಳನ್ನು ಅಲಂಕರಿಸಿ ಶಾಲೆ, ಉದ್ಯಾನವನ ಹಾಗೂ ಇತರ ಜನ ನಿಬಿಡ ಪ್ರದೇಶಗಳಲ್ಲಿ ಇಟ್ಟಲ್ಲಿ ಅದೊಂದು ಆಕರ್ಷಣೆಯಾಗಲಿದೆ. ಹಳೆಯ ದೋಣಿಗಳನ್ನು ಖರೀದಿಸಿ ಮರು ಬಳಸುವುದರಿಂದ ಮೀನುಗಾರರಿಗೆ ಹಣಕಾಸಿನ ಸಹಾಯವೂ ಆಗಲಿದೆ ಹಾಗೂ ನಗರ, ಪರಿಸರದ ಸ್ವಚ್ಛತೆಗೂ ಸಕಾರಿಯಾಗಲಿದೆಎಂದವರು ಹೇಳಿದರು.

ಈಗಾಗಲೇ ಇಂತಹ ಸುಮಾರು 20ರಿಂದ 30 ದೋಣಿಗಳನ್ನು ಗುರುತಿಸಿದ್ದು, ಈ ಎಲ್ಲಾ ದೋಣಿಗಳು 30ರಿಂದ 35 ಅಡಿ ಉದ್ದ, 6-9 ಅಡಿ ಅಗಲ ಹಾಗೂ 3-5 ಅಡಿ ಎ್ತರವಿದೆ ಎಂದು ಅವರು ಹೇಳಿದರು.

ಮೀನುಗಾರಿಕಾ ಕಾಲೇಜಿಗೆ ಸೇರಿದ ಮೀನು ಸಾಕಾಣಿಕಾ ಹೊಂಡಗಳಲ್ಲಿನ ಹೂಳು ತೆಗೆದು ವಿವಿಧ ಜಾತಿಯ ಮೀನು ಸಾಕಾಣೆಗೆ ಪ್ರೋತ್ಸಾಹ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಂಬಂಧಿಸಿ ಹೆಚ್ಚಿನ ಮಾಹಿತಿ ಒದಗಿಸುವುದು, ಅನುದಾನದ ಕೊರತೆ ಇದ್ದಾಗ ಸಣ್ಣ ನೀರಾವರಿ ಇಲಾಖೆ ಸೇರಿದಂತೆ ಇತರ ಇಲಾಖೆಗಳಿಂದ ಅನುದಾನವನ್ನು ಹೇಗೆ ಕ್ರೋಢೀಕರಿಸಬಹುದು ಎಂಬ ನಿಟ್ಟಿನಲ್ಲಿಯೂ ಚಿಂತಿಸಲಾಗುವುದು ಎಂದು ಅವರು ಈ ಸಂದರ್ಭ ಹೇಳಿದರು.

ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಮೀನುಗಾರಿಕಾ ಕಾಲೇಜಿನ ಡೀನ್ ಸೆಂತಿಲ್ ವೇಲ್ ಉಪಸ್ಥಿತರಿದ್ದರು.

7.90 ಕೋಟಿ ರೂ. ವೆಚ್ಚದಲ್ಲಿ ಮೀನು ಸಾಕಣಿಕಾ ಕೇಂದ್ರದ ಆಧುನೀಕರಣ

ಮೀನುಗಾರಿಕಾ ಕಾಲೇಜಿನಲ್ಲ ಹೊಸ ಜಲಕೃಷಿ ತಂತ್ರಜ್ಞಾನಗಳಿಗಾಗಿ ಸಂಶೋಧನೆ ಮತ್ತು ಶೈಕ್ಷಣಿಕ ಮೀನು ಸಾಕಾಣಿಕಾ ಕೇಂದ್ರದ ಆಧುನೀಕರಣವನ್ನು 7.90 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿೆ ಎಂದು ಸಚಿವ ಅಂಗಾರ ಹೇಳಿದರು.

ಮೀನು ಕೃಷಿ ಮಾಡುವವರಿಗೆ ಗುಣಮಟ್ಟದ ಮೀನು ಮರಿಗಳ ಉತ್ಪಾದನೆ ಹಾಗೂ ವಿತರಣೆಗೆ ವರ್ಧಕ ಸೌಲಭ್ಯಗಳನ್ನು ಒದಗಿಸುವುದು, ಸಂಶೋಧನಾ ಸೌಲಭ್ಯಗಳನ್ನು ವೃದ್ಧಿ ಮತ್ತು ಮೀನುಗಾರಿಕಾ ವೃತ್ತಿಪರ ಅಧಿಕಾರಿಗಳು ಮತ್ತು ಸಂಶೋಧಕರಿಗೆ ಸ್ಮಾರ್ಟ್ ಮೀನುಗಾರಿಕೆ ತಂತ್ರಜ್ಞಾನಗಳನ್ನು ನೀಡುವುದು. ಇದಕ್ಕಾಗಿ ಅಸ್ತಿತ್ವದಲ್ಲಿರುವ ಕೊಳಗಳು/ ಟ್ಯಾಂಕ್‌ಗಳ ದುರಸ್ತಿ ಮತ್ತು ನವೀಕರಣ, ಎಲ್ಲಾ ಪರಿಕರಗಳೊಂದಿಗೆ ಬಾವಿ ನೀರಿನ ಸಂಪನ್ಮೂಲಗಳ ಸೃಷ್ಟಿ ಮೊದಲಾದ ಕಾರ್ಯ ಈ ಯೋಜನೆಯಡಿ ನಡೆಯಲಿದೆ. ಯೋಜನೆಯು 2022ರ ಮಾರ್ಚ್‌ಗೆ ಪೂರ್ಣ ಗೊಳ್ಳುವ ಸಾಧ್ಯತೆ ಇದೆ ಎಂದು ಸಚಿವ ಅಂಗಾರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News