ಮಣಿಪಾಲ ಗ್ರಾಮೀಣ ಹೆರಿಗೆ ಮತ್ತು ಮಕ್ಕಳ ಕಲ್ಯಾಣ ಕೇಂದ್ರಗಳಲ್ಲಿ ನೇತ್ರ ತಪಾಸಣಾ ಸೌಲಭ್ಯ ಪ್ರಾರಂಭ

Update: 2021-02-24 14:07 GMT

ಮಣಿಪಾಲ, ಫೆ.24: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ನೇತ್ರ ಚಿಕಿತ್ಸಾ ವಿಭಾಗ ಮಣಿಪಾಲದ ಗ್ರಾಮೀಣ ಹೆರಿಗೆ ಮತ್ತು ಮಕ್ಕಳ ಕಲ್ಯಾಣ ಕೇಂದ್ರಗಳಲ್ಲಿ ನೇತ್ರ ತಪಾಸಣಾ ಸೌಲಭ್ಯವನ್ನು ಆರಂಭಿಸಿದೆ.

ಈ ಸೌಲಭ್ಯದ ಸಾಂಕೇತಿಕ ಉದ್ಘಾಟನೆ ಮಲ್ಪೆಯ ಗ್ರಾಮೀಣ ಹೆರಿಗೆ ಮತ್ತು ಮಕ್ಕಳ ಕಲ್ಯಾಣ ಕೇಂದ್ರದಲ್ಲಿ ಮಂಗಳವಾರ ನಡೆಯಿತು. ಸೌಲಭ್ಯವನ್ನು ಉದ್ಘಾಟಿಸಿ ಮಾತನಾಡಿದ ಮಣಿಪಾಲ ಕೆಎಂಸಿ ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಸುಲತಾ ವಿ. ಭಂಡಾರಿ, ಕಣ್ಣಿನ ದೋಷ ಹಾಗೂ ಸಮಸ್ಯೆಗಳ ಬಗ್ಗೆ ನಿರ್ಲಕ್ಷ ತೋರಬಾರದು. ಕಾಲ ಕಾಲಕ್ಕೆ ಕಣ್ಣಿನ ತಪಾಸಣೆ ಮಾಡಿಕೊಂಡು ಕಣ್ಣಿನ ಆರೈಕೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ಮೊದಲು ಈ ಕೇಂದ್ರಗಳಲ್ಲಿ ಕಣ್ಣಿನ ಸಂಪೂರ್ಣ ತಪಾಸಣೆ ನಡೆಸಿ ಅಗತ್ಯವಿರುವವರಿಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಮತ್ತು ಉಡುಪಿಯ ಜಿಲ್ಲಾ ಅಂಧತ್ವ ನಿವಾರಣಾ ವಿಭಾಗದ ಜಂಟಿ ಆಶ್ರಯದಲ್ಲಿ ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ಗ್ಲುಕೊಮಾ ಸಂಬಂಧಿತ ಚಿಕಿತ್ಸೆ ಮತ್ತು ಇತರ ಚಿಕಿತ್ಸೆಗಳನ್ನುನೀಡಲಾಗುವುದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥೆ ಡಾ. ಸುಮಾ ನಾಯರ್, ಗ್ರಾಮೀಣ ಹೆರಿಗೆ ಮತ್ತು ಮಕ್ಕಳ ಕಲ್ಯಾಣ ಕೇಂದ್ರಗಳಲ್ಲಿ ಈ ಸೌಲಭ್ಯ ಆರಂಭಿಸಿರುವುದರಿಂದ ಜನರಿಗೆ ತಮ್ಮ ಮನೆ ಬಾಗಿಲಲ್ಲೇ ನೇತ್ರ ತಪಾಸಣಾ ಸೌಲಭ್ಯ ದೊರಕಿದಂತಾ ಗಿದೆ. ಪ್ರತೀ ತಿಂಗಳ 4ನೇ ಸೋಮವಾರ ಅಲೆವೂರು , 4ನೇ ಮಂಗಳವಾರ ಮಲ್ಪೆ, 4ನೇ ಬುಧವಾರ ಉದ್ಯಾವರ, 4ನೇ ಗುರುವಾರ ಕಾಪು, ಮತ್ತು 4ನೇ ಶುಕ್ರವಾರ ಕಡೆಕಾರಿನಲ್ಲಿ ಈ ಸೌಲಭ್ಯ ದೊರೆಯಲಿದೆ ಎಂದರು.

ಲಯನ್ಸ್ ಕ್ಲಬ್ ಪ್ರಕೃತಿ ಉಡುಪಿಯ ಅಧ್ಯಕ್ಷ ಸುಧಾಕರ್ ಶೆಟ್ಟಿ , ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News