×
Ad

ಕೋವಿಡ್ ಎರಡನೇ ಅಲೆ; ಉಡುಪಿ ಜಿಲ್ಲೆ ಇನ್ನೂ ಅಪಾಯದಿಂದ ಪಾರಾಗಿಲ್ಲ: ಡಿಎಚ್‌ಓ ಡಾ.ಸುಧೀರ್‌ಚಂದ್ರ ಸೂಡ

Update: 2021-02-24 20:58 IST

ಉಡುಪಿ, ಫೆ.24: ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸಂಪೂರ್ಣ ನಿಯಂತ್ರಣದಲ್ಲಿದ್ದರೂ, ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಕೋವಿಡ್‌ನ ಎರಡನೇ ಅಲೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲೆಯ ಕೋವಿಡ್‌ನ ಎರಡನೇ ಅಲೆಯ ಅಪಾಯದಿಂದ ಪಾರಾಗಿದೆ ಎಂದು ಈಗಲೇ ಹೇಳುವಂತಿಲ್ಲ. ಜಿಲ್ಲೆ ವಿಶೇಷವಾಗಿ ಮಹಾರಾಷ್ಟ್ರದಿಂದ ಬರುವವರ ಬಗ್ಗೆ ಜಾಗೃತೆ ವಹಿಸಬೇಕಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ‌ಚಂದ್ರ ಸೂಡ ತಿಳಿಸಿದ್ದಾರೆ.

ಉಡುಪಿಯಲ್ಲಿ ಇಂದು ಪತ್ರಕರ್ತರೊಂದಿಗೆ ಸಂವಾದದಲ್ಲಿ ಭಾಗಿಯಾದ ಅವರು, ಕಳೆದ ವರ್ಷದ ಮಾ.25ರಂದು ಜಿಲ್ಲೆಯಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆಯಾದ ಬಳಿಕ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕಳೆದೊಂದು ವರ್ಷದಿಂದ ಕೊರೋನ ನಿಯಂತ್ರಣಕ್ಕೆ ನಡೆಸಿದ ಹೋರಾಟದ ಎಳೆಗಳನ್ನು ವಿವರಿಸಿ ಸಾಧನೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.

ಆದರೆ ಕೊರೋನ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ. ಕೊರೋನ ಲಾಕ್‌ಡೌನ್ ಬಳಿಕ ಮುಂಬೈ ಸೇರಿದಂತೆ ಮಹಾರಾಷ್ಟ್ರದಿಂದ ಭಾರೀ ಸಂಖ್ಯೆಯ ಸ್ಥಳೀಯರು ಊರಿಗೆ ಮರಳಿದ ಬಳಿಕ ಇಲ್ಲಿ ಸಮಸ್ಯೆ ಉಲ್ಬಣಿಸಿತ್ತು. ಹೀಗಾಗಿ ಈಗ ಮಹಾರಾಷ್ಟ್ರದಲ್ಲಿ ಎರಡನೇ ಅಲೆ ತೀವ್ರಗೊಳ್ಳುತಿದ್ದು, ನಾವಿಲ್ಲಿ ಹೆಚ್ಚಿನ ನಿಗಾ ವಹಿಸಬೇಕಿದೆ ಎಂದರು.

ಈಗಾಗಲೇ ಮಹಾರಾಷ್ಟ್ರ ಹಾಗೂ ಕೇರಳದಿಂದ ಬರುವವರು ಕಡ್ಡಾಯವಾಗಿ ನೆಗೆಟಿವ್ ವರದಿ ತರುವಂತೆ ಸೂಚಿಸಲಾಗಿದೆ. ಗಡಿಗಳಲ್ಲಿ ಎಲ್ಲರನ್ನೂ ಪರೀಕ್ಷಿಸಿ ಪ್ರವೇಶ ನೀಡಲಾಗುತ್ತಿದೆ. ಬಸ್ ಮತ್ತು ರೈಲುಗಳಲ್ಲಿ ಬರುವವರಿಗೂ ಕೋವಿಡ್ ವರದಿ ಕಡ್ಡಾಯ ಗೊಳಿಸಲಾಗಿದೆ. ನೆಗೆಟಿವ್ ವರದಿಯೊಂದಿಗೆ ಬಂದವರಿಗೂ ಒಂದು ವಾರದ ಐಸೋಲೇಷನ್‌ಗೆ ಸೂಚಿಸಲಾಗುತ್ತಿದೆ. 14 ದಿನಗಳ ನಂತರ ಮತ್ತೊಮ್ಮೆ ಅವರಿಗೆ ಆರ್‌ಟಿ ಪಿಸಿಆರ್ ಪರೀಕ್ಷೆಗೊಳಪಡಿಸಲಾಗುವುದು ಎಂದು ಡಿಎಚ್‌ಓ ತಿಳಿಸಿದರು.

ಪಾಸಿಟಿವ್ ಪ್ರಮಾಣ ಶೇ.6.5: ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 3,61,742 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ. ಇವರಲ್ಲಿ 23,557 ಮಂದಿ ಕೊರೋನಕ್ಕೆ ಪಾಸಿಟಿವ್ ಬಂದಿದ್ದಾರೆ. ಇವರಲ್ಲಿ ಶೇ.57 ಮಂದಿ (13,275) ಪುರುಷರಾದರೆ, ಶೇ.47 ಮಂದಿ (10,282) ಮಹಿಳೆಯರು. ಜಿಲ್ಲೆಯಲ್ಲಿ ಪಾಸಿಟಿವಿಟಿಯ ಪ್ರಮಾಣ ಶೇ.6.5 ಆಗಿದೆ. ಈವರೆಗೆ 189 ಮಂದಿ ಕೊರೋನಕ್ಕೆ ಬಲಿಯಾಗಿದ್ದಾರೆ. ಇದು ಒಟ್ಟಾರೆ ಪ್ರಕರಣದ ಶೇ.0.81 ಆಗಿದೆ ಎಂದವರು ವಿವರಿಸಿದರು.

ಜಿಲ್ಲೆಯಲ್ಲಿ ಇದುವರೆಗೆ 23557 ಮಂದಿ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾರೆ. ಚೇತರಿಕೆಯ ಪ್ರಮಾಣ ಶೇ.98.94 ಆಗಿದೆ. ಈಗ 63 ಸಕ್ರೀಯ ಪ್ರಕರಣಗಳಿವೆ. ಇವುಗಳಲ್ಲಿ 49 ಮಂದಿ ಹೋಮ್ ಐಸೋಲೇಷನ್‌ನಲ್ಲಿ ಹಾಗೂ ಉಳಿದ 14 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಇವರಲ್ಲೂ ನಾಲ್ವರು ಐಸಿಯುನಲ್ಲಿ ಹಾಗೂ ಉಳಿದ 10 ಮಂದಿ ವಾರ್ಡುಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದರು.

ಆಗಸ್ಟ್‌ನಲ್ಲಿ ಅತ್ಯಧಿಕ ಸೋಂಕು: 2020ರ ಮಾರ್ಚ್ ತಿಂಗಳಲ್ಲಿ ಜಿಲ್ಲೆಯಲ್ಲಿ ಮೊತ್ತ ಮೊದಲ ಕೊರೋನ ಸೋಂಕು ಪತ್ತೆಯಾಗಿತ್ತು. ಆ ತಿಂಗಳಲ್ಲಿ ಮೂರು ಪ್ರಕರಣಗಳು ವರದಿಯಾದರೆ, ಮೇ ತಿಂಗಳಲ್ಲಿ ಅದು 227 ಆಗಿತ್ತು. ಜೂನ್‌ನಲ್ಲಿ ಸಾವಿರದ (1004) ಗಿ ದಾಟಿತ್ತು. ಅದೇ ರೀತಿ ಹೆಚ್ಚುತ್ತಾ ಹೋದ ಕೊರೋನ ಪ್ರಕರಣಗಳ ಸಂಖ್ಯೆ ಆಗಸ್ಟ್ ನಲ್ಲಿ (6982)ಕ್ಕೆ ಉತ್ತುಂಗಕ್ಕೇರಿತ್ತು. ಬಳಿಕ ಇಳಿಮುಖವಾಗುತ್ತಾ ಬಂದು ಡಿಸೆಂಬರ್‌ನಲ್ಲಿ ಕೇವಲ 371 ಪ್ರಕರಣ ಕಂಡುಬಂದಿತ್ತು ಎಂದವರು ತಿಳಿಸಿದರು.

ಹೊಸವರ್ಷದಿಂದ ಪಾಸಿಟಿವ್ ಪ್ರಕರಣ ಇನ್ನೂ ಕಡಿಮೆಯಾಗುತ್ತಿದೆ. ಜನವರಿ ತಿಂಗಳಲ್ಲಿ ಜಿಲ್ಲೆಯಲ್ಲಿ 262 ಪಾಸಿಟಿವ್ ಕಂಡುಬಂದಿದ್ದರೆ, ಪೆಬ್ರವರಿ ತಿಂಗಳಲ್ಲಿ ಅದು 221 ಆಗಿದೆ. ಈಗ ಪ್ರತಿ ವಾರ 30ರಿಂದ 40 ಹೊಸ ಪ್ರಕರಣಗಳು ಮಾತ್ರ ಕಂಡುಬರುತ್ತಿವೆ ಎಂದರು.

60 ವರ್ಷ ಮೇಲ್ಪಟ್ಟವರು ಅತ್ಯಧಿಕ ಬಲಿ: ಜಿಲ್ಲೆಯಲ್ಲಿ ಈವರೆಗೆ ಒಟ್ಟು 189 ಮಂದಿ ಕೊರೋನ ಮಹಾಮಾರಿಗೆ ಬಲಿಯಾಗಿದ್ದಾರೆ. ಇವರಲ್ಲಿ 138 ಮಂದಿ ಪುರುಷರು ಹಾಗೂ 51 ಮಂದಿ ಮಹಿಳೆಯರು. 11ರಿಂದ 60ವರ್ಷದೊಳಗಿನ ಶೇ.38 ಹಾಗೂ 60 ವರ್ಷ ಮೇಲ್ಪಟ್ಟವರು ಶೇ.62ರಷ್ಟು ಮೃತಪಟ್ಟಿದ್ದಾರೆ.

ತಾಲೂಕುವಾರು ನೋಡುವಾಗ ಉಡುಪಿ ತಾಲೂಕಿನಲ್ಲಿ ಅತ್ಯಧಿಕ 61 ಮಂದಿ ಸತ್ತರೆ, ಕಾರ್ಕಳ ತಾಲೂಕಿನಲ್ಲಿ 33, ಬ್ರಹ್ಮಾವರ ತಾಲೂಕಿನಲ್ಲಿ 27, ಕುಂದಾಪುರ ತಾಲೂಕಿನ 26, ಕಾಪು 19, ಬೈಂದೂರು 18 ಹಾಗೂ ಹೆಬ್ರಿ ತಾಲೂಕಿನ ಮೂವರು ಸೋಂಕಿಗೆ ಬಲಿಯಾ ಗಿದ್ದಾರೆ. ಇನ್ನು ದಾವಣಗೆರೆ ಹಾಗೂ ಉತ್ತರಕನ್ನಡದ ತಲಾ ಒಬ್ಬರು ಇಲ್ಲಿ ಮೃತಪಟ್ಟವರಲ್ಲಿ ಸೇರಿದ್ದಾರೆ.

ಪ್ರಾಯದ ಲೆಕ್ಕದಲ್ಲಿ ನೋಡುವಾಗ 80 ವರ್ಷ ಮೇಲ್ಪಟ್ಟವರು 19, 71ರಿಂದ 80 ವರ್ಷದವರು 38, 61ರಿಂದ 70-59, 51ರಿಂದ 60-38 ಮಂದಿ, 41ರಿಂದ 50-24 ಮಂದಿ, 31ರಿಂದ 40-7, 21ರಿಂದ 30 ಹಾಗೂ 11ರಿಂದ 20ವಯೋಮಾನದವರು ತಲಾ ಇಬ್ಬರು ಮೃತಪಟ್ಟಿದ್ದಾರೆ.

ಸೌಲಭ್ಯಗಳಲ್ಲಿ ಹೆಚ್ಚಳ: ಕೋವಿಡ್‌ನಿಂದಾಗಿ ಆಗಿರುವ ಲಾಭವೆಂದರೆ, ವಿವಿಧ ಸೌಲಭ್ಯಗಳು ಹೆಚ್ಚಾಗಿವೆ. ಮೊದಲು ಇದ್ದ 8 ಐಸಿಯು ಬೆಡ್ ಇಂದು 28 ಆಗಿದೆ. ಆಕ್ಸಿಝನ್ ಬೆಡ್‌ಗಳ 10ರಿಂದ 110ಕ್ಕೇರಿದೆ. ವೆಂಟಿಲೇಟರ್‌ಗಳ ಸಂಖ್ಯೆ 8ರಿಂದ 28 ಹಾಗೂ ಅಂಬುಲೆನ್ಸ್‌ಗಳ ಸಂಖ್ಯೆ 18ರಿಂದ 20ಕ್ಕೇರಿದೆ. ಜಿಲ್ಲೆಯ ಕೋವಿಡ್ ವಿಶೇಷಾಧಿಕಾರಿ ಡಾ.ಪ್ರೇಮಾನಂದ ಉಪಸ್ಥಿತರಿದ್ದರು.

ಮಾರ್ಚ್‌ನಿಂದ ಹಿರಿಯ ನಾಗರಿಕರಿಗೆ ವ್ಯಾಕ್ಸಿನ್ 

ಮಾರ್ಚ್ ಮೊದಲ ವಾರದಿಂದ ಜಿಲ್ಲೆಯ 50 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕೋವಿಡ್ ವಿರುದ್ಧದ ಕೊವಿಶೀಲ್ಡ್ ವ್ಯಾಕ್ಸಿನ್ ಲಭ್ಯವಾಗುವ ಸಾಧ್ಯತೆ ಇದೆ ಎಂದು ಡಾ. ಸೂಡ ತಿಳಿಸಿದರು.

ಜ.16ರಂದು ಮೊದಲ ಹಂತದಲ್ಲಿ ವೈದ್ಯರೂ ಸೇರಿದಂತೆ ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನ್ ನೀಡಲಾಗುತಿದ್ದು ಈವರೆಗೆ 23,889 ಮಂದಿಯಲ್ಲಿ 17,339 ಮಂದಿ (ಶೇ.72.6) ಮೊದಲ ಸುತ್ತಿನ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.

ವ್ಯಾಕ್ಸಿನ್ ಪಡೆದುಕೊಂಡವರಲ್ಲಿ ಶೇ.85ರಷ್ಟು ಸರಕಾರಿ ಉದ್ಯೋಗಿಗಳಿದ್ದರೆ, ಖಾಸಗಿಯವರು ಶೇ.68ರಷ್ಟಿದ್ದಾರೆ. ಎರಡನೇ ಡೋಸನ್ನು ಈವರೆಗೆ 7287 (ಶೇ.30.5) ಮಂದಿ ಪಡೆದಿದ್ದಾರೆ. ಇನ್ನು ಎರಡನೇ ಸುತ್ತಿನಲ್ಲಿ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತಿದ್ದು ಒಟ್ಟು 4283 ಮಂದಿಯಲ್ಲಿ ಶೇ. 65.9ರಷ್ಟು ಮಂದಿ ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News