ಲಂಕಾ ಬಾಂಬ್ ದಾಳಿ: ಸಿರಿಸೇನ ವಿರುದ್ಧ ಮೊಕದ್ದಮೆಗೆ ಶಿಫಾರಸು

Update: 2021-02-24 18:45 GMT

ಕೊಲಂಬೊ (ಶ್ರೀಲಂಕಾ), ಫೆ. 24: ಎರಡು ವರ್ಷಗಳ ಹಿಂದೆ ಈಸ್ಟರ್ ಸಂಡೆಯ ದಿನ ನಡೆದ ಆತ್ಮಹತ್ಯಾ ಬಾಂಬ್ ದಾಳಿಗಳನ್ನು ತಡೆಯಲು ವಿಫಲವಾಗಿರುವುದಕ್ಕಾಗಿ ಶ್ರೀಲಂಕಾದ ಅಂದಿನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಮತ್ತು ಅವರ ಗುಪ್ತಚರ ಮುಖ್ಯಸ್ಥರ ವಿರುದ್ಧ ಮೊಕದ್ದಮೆ ದಾಖಲಿಸಬೇಕು ಎಂಬುದಾಗಿ ತನಿಖಾ ವರದಿಯೊಂದು ಶಿಫಾರಸು ಮಾಡಿದೆ.

2019 ಎಪ್ರಿಲ್ 21ರಂದು ಭಯೋತ್ಪಾದಕರು ಮೂರು ಹೊಟೇಲ್‌ಗಳು ಮತ್ತು ಮೂರು ಚರ್ಚ್‌ಗಳ ಮೇಲೆ ಆತ್ಮಹತ್ಯಾ ಬಾಂಬ್ ದಾಳಿಗಳನ್ನು ನಡೆಸಿದ್ದರು. ಸರಣಿ ದಾಳಿಗಳಲ್ಲಿ 279 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ದಾಳಿ ನಡೆದ ಐದು ತಿಂಗಳುಗಳ ಬಳಿಕ ತನಿಖೆಗಾಗಿ ಸಿರಿಸೇನ ಸಮಿತಿಯೊಂದನ್ನು ರಚಿಸಿದ್ದರು. ಸಮಿತಿಯು ಮಂಗಳವಾರ ಸಂಸತ್ತಿಗೆ ವರದಿ ನೀಡಿದ್ದು, ಸಿರಿಸೇನ ಕರ್ತವ್ಯಲೋಪವೆಸಗಿದ್ದಾರೆ ಎಂದು ಆರೋಪಿಸಿದೆ.

ಸಂಭಾವ್ಯ ದಾಳಿಗಳ ಬಗ್ಗೆ ಭಾರತೀಯ ಗುಪ್ತಚರ ಇಲಾಖೆಯು ಶ್ರೀಲಂಕಾಕ್ಕೆ 17 ದಿನಗಳ ಮೊದಲೇ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ.

ದಂಡ ಸಂಹಿತೆಯ ಯಾವುದಾದರೂ ಸೂಕ್ತ ವಿಧಿಯ ಅಡಿಯಲ್ಲಿ ಸಿರಿಸೇನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಬಗ್ಗೆ ಅಟಾರ್ನಿ ಜನರಲ್ ಪರಿಶೀಲಿಸಬೇಕು ಎಂದು ವರದಿ ಹೇಳಿದೆ.

ಸಿರಿಸೇನ ಈಗ ಆಡಳಿತಾರೂಢ ಪಕ್ಷದ ಸಂಸದರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News