ಮಂಗಳೂರು : ಕೋಟ್ಪಾ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ಬೀಡಿ ಕಾರ್ಮಿಕರ ಪ್ರತಿಭಟನೆ

Update: 2021-02-25 07:46 GMT

ಮಂಗಳೂರು : ಕೋಟ್ಪಾಕಾಯ್ದೆಗೆ ತಿದ್ದುಪಡಿ ತರುವ ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿ ಬೀಡಿ ಕಾರ್ಮಿಕರು ಮತ್ತು ಗುತ್ತಿಗೆದಾರರು ಗುರುವಾರ ಮಂಗಳೂರು ಮಿನಿ ವಿಧಾನ ಸೌಧದ ಮುಂದೆ ಪ್ರತಿಭಟನೆ ನಡೆಸಿದರು. ಅದಕ್ಕೂ ಮೊದಲು ಹಂಪನಕಟ್ಟೆ ವೃತ್ತದಿಂದ ರ್ಯಾಲಿ ನಡೆಸಿದರು.

ದ.ಕ.ಜಿಲ್ಲೆಯ ವಿವಿಧ ಬೀಡಿ ಕಾರ್ಮಿಕ ಮತ್ತು ಗುತ್ತಿಗೆದಾರರ ಸಂಘಟನೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬೀಡಿ ಕಾರ್ಮಿಕರು ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಭಿತ್ತಿಪತ್ರ ಪ್ರದರ್ಶಿಸಿದರು. ಅಲ್ಲದೆ ಬೀಡಿ ಸೇದುವವರಿಗೆ 2 ಸಾವಿರ ರೂ. ದಂಡ ಹಾಕುವುದು ಯಾವ ನ್ಯಾಯ? ಬೀಡಿ ಮಾರಾಟ ಮಾಡಲು ಪರವಾನಗಿ ಕಡ್ಡಾಯಗೊಳಿಸಿದ್ದು ಯಾಕೆ ? ಬೀಡಿ ಸೇದುವವರ ಪ್ರಾಯವನ್ನು 18ರಿಂದ 21ಕ್ಕೇರಿಸಿದ್ದು ಯಾಕೆ ಎಂದು ಪ್ರಶ್ನಿಸಿದರು.

ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಸೃಷ್ಟಿಸದೆ ಇದೀಗ ಕೋಟ್ಪಾಕಾಯ್ದೆಗೆ ಮತ್ತಷ್ಟು ತಿದ್ದುಪಡಿಗಳ ಮೂಲಕ ಕಾರ್ಮಿಕರನ್ನು ಬೀದಿ ಪಾಲು ಮಾಡಲು ಕೇಂದ್ರ ಹಾಗೂ ರಾಜ್ಯ ಸರಕಾರ ಮುಂದಾಗಿರುವ ಬಗ್ಗೆ ಆಕ್ಷೇಪಿಸಿದರು. 2003ರಲ್ಲಿ ಕೇಂದ್ರ ಸರಕಾರ ಜಾರಿಗೆ ತಂದ ಕೋಟ್ಪಾಕಾಯ್ದೆಯಿಂದ ಸಿಗರೇಟು ಮತ್ತು ತಂಬಾಕು ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ಸಂಬಂಧಿಸಿ ಹಲವಾರು ರೀತಿಯ ನಿಯಂತ್ರಣ ಮಾಡಿರುವುದರಿಂದ ಬೀಡಿ ಕಾರ್ಮಿಕರ ಮೇಲೆ ಭಾರೀ ಪರಿಣಾಮ ಬಿದ್ದಿದೆ. ವಾರದಲ್ಲಿ ಕೇವಲ ಎರಡು ಕೆಲಸ ಪಡೆಯುತ್ತಿರುವ ಬೀಡಿ ಕಾರ್ಮಿಕರ ಸಂಕಷ್ಟವನ್ನೇ ಕೇಳುವವರು ಇಲ್ಲದಾಗಿದೆ. ಇದೀಗ ಕಾಯ್ದೆಗೆ ಹೊಸ ತಿದ್ದುಪಡಿಯ ಪ್ರಕಾರ ಮತ್ತಷ್ಟು ನಿಯಂತ್ರಣಗಳನ್ನು ಅನುಷ್ಠಾನಗೊಳಿಸುವುದರಿಂದ ಇದರ ಭೀಕರ ಪರಿಣಾಮವನ್ನು ಬೀಡಿ ಕಾರ್ಮಿಕರು ಎದುರಿಸಬೇಕಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಚ್‌ಎಂಎಸ್ ಅಧ್ಯಕ್ಷ ಮುಹಮ್ಮದ್ ರಫಿ, ಗೌರವಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ಹರೀಶ್ ಕೆ.ಎಸ್., ಎಐಟಿಯುಸಿ ಕಾರ್ಯದರ್ಶಿ ಸೀತಾರಾಮ ಬೇರಿಂಜ, ಕೋಶಾಧಿಕಾರಿ ಶೇಖರ ಬಿ., ಬಿಎಂಎಸ್ ಮುಖಂಡ ಸಿ.ವಿ. ಲೋಕೇಶ್, ಗುತ್ತಿಗೆದಾರರ ಸಂಘದ ಮುಖಂಡರಾದ ದೀಪಕ್ ನಾಯ್ಕಿ ಪಾಲ್ಗೊಂಡಿದ್ದರು. ಸಿಐಟಿಯು ಅಧ್ಯಕ್ಷ ವಸಂತ ಆಚಾರಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News