ದಾದ್ರಾ ನಗರ್ ಹವೇಲಿ ಸಂಸದನ ಸುಸೈಡ್ ನೋಟ್‍ನಲ್ಲಿ ಬಿಜೆಪಿ ನಾಯಕನ ಹೆಸರು: ಮಹಾರಾಷ್ಟ್ರ ಗೃಹ ಸಚಿವ

Update: 2021-02-25 10:44 GMT
ಮೋಹನ್ ದೇಲ್ಕರ್

ಮುಂಬೈ: ಸೋಮವಾರ ಮುಂಬೈಯ ಮರೀನ್ ಡ್ರೈವ್ ಪ್ರದೇಶದ ಹೋಟೆಲ್‍ನ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ದಾದ್ರಾ ಮತ್ತು ನಗರ್ ಹವೇಲಿಯ ಪಕ್ಷೇತರ ಸಂಸದ ಮೋಹನ್ ದೇಲ್ಕರ್ ಅವರ ಸುಸೈಡ್ ನೋಟ್‍ನಲ್ಲಿ  ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿ ಬಿಜೆಪಿಯ ಪ್ರಫುಲ್ ಪಟೇಲ್ ಅವರ ಹೆಸರು ಉಲ್ಲೇಖಗೊಂಡಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಹೇಳಿದ್ದಾರೆ.

"ಪಟೇಲ್ ಅವರು ದೇಲ್ಕರ್ ಮೇಲೆ ಒತ್ತಡ ಹೇರುತ್ತಿದ್ದುದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ,'' ಎಂದು ದೇಶಮುಖ್ ಹೇಳಿದ್ದಾರೆ ಎಂದು timesofindia ವರದಿ ಮಾಡಿದೆ.

"ಮುಂಬೈಯಲ್ಲಿ ತಮಗೆ ನ್ಯಾಯ ದೊರಕುವ ಭರವಸೆ ಅವರಿಗಿದ್ದುದರಿಂದ ಅವರು ಇಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರಬಹುದು,'' ಎಂದೂ ಅವರು ಹೇಳಿದ್ದಾರೆ.

ದೇಲ್ಕರ್ ಅವರನ್ನು ಬಿಜೆಪಿ ಟಾರ್ಗೆಟ್ ಮಾಡಿತ್ತು ಎಂಬುದು ಅವರ 16 ಪುಟಗಳ ಸುಸೈಡ್ ನೋಟ್‍ನಿಂದ ತಿಳಿಯುತ್ತದೆ ಎಂದು ದೇಶಮುಖ್ ಅವರನ್ನು ಭೇಟಿಯಾದ ಕಾಂಗ್ರೆಸ್ ನಿಯೋಗದ ನೇತೃತ್ವ ವಹಿಸಿದ್ದ ಸಚಿನ್ ಸಾವಂತ್ ಹೇಳಿದ್ದಾರೆ. "ಸುಸೈಡ್ ನೋಟ್‍ನಲ್ಲಿ ಕೆಲವು ಐಪಿಎಸ್ ಹಾಗೂ ಇತರ ಅಧಿಕಾರಿಗಳ ಹೆಸರುಗಳೂ ಇದ್ದವು. ಅವರ ಆತ್ಮಹತ್ಯೆಯ ಹಿಂದೆ 'ಬಿಜೆಪಿ ಪಾತ್ರ'ದ ಕುರಿತು ತನಿಖೆ ನಡೆಸುವ ಭರವಸೆ ಸಚಿವರಿಂದ ದೊರಕಿದೆ,'' ಎಂದು ಅವರು ಹೇಳಿದರು.

ದೇಲ್ಕರ್ ವಿರುದ್ಧ ಹಲವು ಸುಳ್ಳು ಪ್ರಕರಣಗಳು ದಾಖಲಾಗಿದ್ದವು ಹಾಗೂ ಅವರ ಬೆಂಬಲಿಗರಿಗೆ ಕಿರುಕುಳ ನೀಡಲಾಗಿತ್ತು  ಎಂದೂ ಸಾವಂತ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News