ಇಂಧನ ಮೇಲಿನ ತೆರಿಗೆ ಇಳಿಕೆಗೆ ಕೇಂದ್ರ-ರಾಜ್ಯಗಳ ಸಂಘಟಿತ ಯತ್ನ ಅಗತ್ಯ : ಆರ್ ಬಿಐ ಗವರ್ನರ್

Update: 2021-02-25 12:20 GMT

 ಮುಂಬೈ : ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಗಳನ್ನು ಇಳಿಸಲು ಕೇಂದ್ರ ಮತ್ತು ರಾಜ್ಯಗಳು ಸಂಘಟಿತವಾಗಿ ಪ್ರಯತ್ನಿಸಬೇಕಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಬಾಂಬೆ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು  ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಇಂಧನದ ಮೇಲೆ ತೆರಿಗೆ ವಿಧಿಸುತ್ತಿರುವುದರಿಂದ ಸಂಘಟಿತ ಯತ್ನಗಳು ಮುಖ್ಯವಾಗಿದೆ ಎಂದು ಹೇಳಿದರು.

''ಕೋವಿಡ್ ಸಾಂಕ್ರಾಮಿಕದಿಂದಾಗಿ ಸರಕಾರ ಎದುರಿಸುತ್ತಿರುವ  ಒತ್ತಡಗಳು ಅರ್ಥವಾಗುತ್ತದೆ. ಆದರೆ  ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದಾಗಿ  ಉತ್ಪಾದನಾ ರಂಗದ ವೆಚ್ಚಗಳೂ ಏರಿಕೆಯಾಗುವುದರಿಂದ ಅದು ಹಣದುಬ್ಬರದ ಮೇಲೆ ಬೀರಬಹುದಾದ ಪ್ರಭಾವದ ಕುರಿತೂ ಚಿಂತಿಸಬೇಕಾಗುತ್ತದೆ'' ಎಂದು ಅವರು ಹೇಳಿದರು.

''ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದಾಗ ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ  ಕಡಿಮೆಯಾಗಿರುವುದರಿಂದ ತನ್ನ ಅದೃಷ್ಟ ಬದಲಾಗುವುದಕ್ಕೆ ಭಾರತಕ್ಕೆ ಸಾಕ್ಷಿಯಾಗಲಿದೆ ಹಾಗೂ ಪರಿಸ್ಥಿತಿ ಇದೇ ಮಾದರಿ ಮುಂದುವರಿಯುವಂತೆ ನೋಡಿಕೊಳ್ಳಬೇಕಿದೆ'' ಎಂದು ಅವರು ಹೇಳಿದರು.

''ಅದೇ ಸಮಯ ದೇಶದ ಕೆಲವೆಡೆ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವುದರಿಂದ ಎಚ್ಚರಿಕೆ ಮುಂದುವರಿಸಬೇಕು'' ಎಂದು ತಿಳಿಸಿದ ಅವರು ''ಕೋವಿಡ್ ವಿರುದ್ಧದ ಯುದ್ಧ ಮುಂದುವರಿಯುತ್ತದೆ'' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News