ಬೈಂದೂರು: ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ‘ಶಾಸಕರ ಕಚೇರಿ ಚಲೋ‘

Update: 2021-02-25 13:33 GMT

ಬೈಂದೂರು, ಫೆ. 25: ಸಿಐಟಿಯು ರಾಜ್ಯ ಸಮಿತಿಯ ನೇತೃತ್ವದಲ್ಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಜೆಟ್ ಪೂರ್ವ ಮಾ.4ರಂದು ನಡೆಯುವ ಕಾರ್ಮಿಕರ ‘ವಿಧಾನಸೌಧ ಚಲೋ ಹೋರಾಟ’ದ ಅಂಗವಾಗಿ ಇಂದು ಬೈಂದೂರು ತಾಲೂಕು ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರ ಬೃಹತ್ ಮೆರವಣಿಗೆಯನ್ನು ಬೈಂದೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಬೃಹತ್ ಮೆರವಣಿಗೆಯ ಮೂಲಕ ‘ಬೈಂದೂರು ಶಾಸಕರ ಕಚೇರಿ ಚಲೋ’ ಹೋರಾಟ ನಡೆಸಿದರು.

ಬೈಂದೂರು ಸಿಐಟಿಯು ಕಚೇರಿ ಬಳಿ ಕಾರ್ಮಿಕರ ಪಾದಯಾತ್ರೆಯನ್ನು ಉದ್ಘಾಟಿಸಿದ ಸಿಐಟಿಯು ಉಡುಪಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಮಾತನಾಡಿ, ಮಾ.4 ರಂದು ಎಲ್ಲಾ ವಿಭಾಗದ ಕಾರ್ಮಿಕರು ‘ಬಜೆಟ್ ಅಧಿವೇಶನ ಚಲೋ‘ನಡೆಸಿ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಈ ವರ್ಷದ ಬಜೆಟ್ ಅನುದಾನದ ಮೂಲಕ ಹಲವು ಬೇಡಿಕೆಗಳನ್ನು ಈಡೆರಿಸಲು ಒತ್ತಾಯಿಸಲಾಗುತ್ತದೆ ಎಂದರು.

ಬೇಡಿಕೆ: ಬೈಂದೂರು ತಾಲೂಕು ಕೇಂದ್ರಕ್ಕೆ ಮಿನಿ ವಿಧಾನಸೌಧ, ಕಾರ್ಮಿಕ ನಿರೀಕ್ಷಕರ ಕಚೇರಿ, ಬೈಂದೂರು ತಾಲೂಕಿನಾದ್ಯಂತ ನದಿಗಳಲ್ಲಿ ಮರಳು ತೆಗೆಯಲು ಪರವಾನಿಗೆ, ಸರಕಾರದ ಎಲ್ಲಾ 24 ಇಲಾಖೆಗಳನ್ನು ತಾಲೂಕಿನಲ್ಲಿ ತೆರೆಯಲು ಒತ್ತಾಯ, ಬೈಂದೂರು ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವುದು, ಸ್ಕೀಮ್ ನೌಕರರಾದ ಅಕ್ಷರ ದಾಸೋಹ, ಅಂಗನವಾಡಿ, ಆಶಾ, ಪಂಚಾಯತ್ ನೌಕರರರಿಗೆ ವೇತನ ಹೆಚ್ಚಳ.

ಕಟ್ಟಡ ಕಾರ್ಮಿಕರಿಗೆ ಕೊರೋನಾ ಪರಿಹಾರ, ಮದುವೆ, ಪಿಂಚಣಿ, ಮರಣ ಪರಿಹಾರಕ್ಕೆ ಅರ್ಜಿ ಹಾಕುವ ಕಾಲ ಮಿತಿ ರದ್ಧತಿ, ಮನೆ ಕಟ್ಟಲು 3 ಲಕ್ಷ ರೂ. ಸಹಾಯಧನ ಕೊಡಬೇಕು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು ಇತ್ಯಾದಿ ಸ್ಥಳೀಯ ಬೇಡಿಕೆ ಸಹಿತ ರಾಜ್ಯ ಮಟ್ಟದ 30 ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಶಾಸಕರ ಆಪ್ತ ಸಹಾಯಕ ಮಹಿಮ್ ಶೆಟ್ಟಿ ಅವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಕಾರ್ಮಿಕ ಮುಖಂಡರಾದ ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಗಣೇಶ್ ತೊಂಡೆಮಕ್ಕಿ, ಉದಯ ಗಾಣಿಗ ಮೊಗೇರಿ, ರಾಜೀವ ಪಡುಕೋಣೆ, ವಿಜಯ ಕೊಯಾನಗರ, ಅಮ್ಮಯ್ಯ ಪೂಜಾರಿ ಬಿಜೂರು, ಸಿಂಗಾರಿ ನಾವುಂದ, ಜಯಶ್ರೀ ಪಡುವರಿ, ರಾಮ ಕಂಭದಕೋಣೆ, ಮಂಜು ಪಡವರಿ, ರಾಜು ದೇವಾಡಿಗ ಅರೆಹೊಳೆ, ನಾಗರತ್ನ ನಾಡ ಮೊದಲಾದವರು ಉಪಸ್ಥಿತರಿದ್ದರು. ವೆಂಕಟೇಶ್ ಕೋಣಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News