ಫೆ. 27ರಂದು ಸ್ಕೌಟ್ಸ್ ಗೈಡ್ಸ್ ಕನ್ನಡ ಭವನ, ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣ ಉದ್ಘಾಟನೆ

Update: 2021-02-25 13:46 GMT

ಮೂಡುಬಿದಿರೆ : ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆಯು ಮೂಡುಬಿದಿರೆಯ ಹೃದಯಭಾಗದಲ್ಲಿರುವ ಸ್ವರಾಜ್ಯ ಮೈದಾನದ ಬಳಿ ಸುಸಜ್ಜಿತ ಸಭಾಂಗಣ ‘ಸ್ಕೌಟ್ಸ್ ಗೈಡ್ಸ್ ಕನ್ನಡ ಭವನ’ ಹಾಗೂ ‘ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣ’ಗಳು ಫೆ.27ರ ಬೆಳಗ್ಗೆ 10.30ಕ್ಕೆ ಲೋಕಾರ್ಪಣೆ ನಡೆಯಲಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಲೋಕಾರ್ಪಣೆ ಗೊಳಿಸಲಿದ್ದಾರೆ. ಭಾರತ ಭೂಷಣ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಭಾರತ್ ಸ್ಕೌಟ್ಸ್ ಗೈಡ್ಸ್‍ನ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್. ಸಿಂಧಿಯಾರವರು ದಿವಂಗತ. ಕೆ. ಅಮರನಾಥ ಶೆಟ್ಟರ ಕುರಿತು ಸಂಪಾದಿಸಿದ ‘ಅಮರಸ್ಮರಣೆ’  ಸಂಪುಟವನ್ನು ಅನಾವರಣಗೊಳಿಸಲಿದ್ದಾರೆ. ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಎನ್. ವಿನಯ ಹೆಗ್ಡೆಯವರು ಅಮರನಾಥ ಶೆಟ್ಟಿಯವರಿಗೆ ನುಡಿನಮನ ಸಲ್ಲಿಸಲಿದ್ದಾರೆ. ಸ್ಥಳೀಯ ಶಾಸಕರಾದ ಉಮಾನಾಥ ಎ.ಕೋಟ್ಯಾನ್‍  ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ  ಅರವಿಂದ ಲಿಂಬಾವಲಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಂಸದರಾದ ನಳಿನ್ ಕುಮಾರ್ ಕಟೀಲ್, ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್. ಅಂಗಾರ, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ  ರಂಗಪ್ಪ ಆಗಮಿಸಲಿದ್ದಾರೆ.

ಸುಸಜ್ಜಿತವಾದ ‘ಸ್ಕೌಟ್ಸ್ ಗೈಡ್ಸ್ ಕನ್ನಡ ಭವನ’ದ ನಿವೇಶನವು 1 ಎಕ್ರೆ ವಿಸ್ತೀರ್ಣವನ್ನೊಳಗೊಂಡು ಪ್ರಧಾನ ಸಭಾಂಗಣಕ್ಕೆ ‘ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ  ಸಭಾಂಗಣ’ವೆಂದು ನಾಮಕರಣ ಮಾಡಲಾಗಿದೆ.

ಮೂಡುಬಿದಿರೆಯ ಈ ಕನ್ನಡ ಭವನವು ಸಮಸ್ತ ಜನತೆಗೆ, ಸಂಘ ಸಂಸ್ಥೆಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ಸುಲಭವಾಗಿ ಲಭ್ಯವಾಗ ಬೇಕೆಂಬ ಕಳಕಳಿಯಿಂದ ಸುಮಾರು 1200 ಆಸನಗಳಿಂದ ಕೂಡಿದ ಸುಸಜ್ಜಿತ ಸಭಾಭವನ, 400 ಆಸನಗಳಿಂದ ಕೂಡಿದ ಮತ್ತೆರಡು ಸಭಾಭವನ, 3 ಕಿರುಸಭಾಂಗಣಗಳು, ಅತಿಥಿಗೃಹ (ಸುಮಾರು 10 ಕೊಠಡಿಗಳು) ಸುಸಜ್ಜಿತ ಪಾಕಶಾಲೆಗಳು ಮತ್ತು 750 ಜನರು ಕುಳಿತು ಊಟ ಮಾಡುವ ಭೋಜನ ಶಾಲೆ ಹಾಗೂ ಕಾರ್ಯಾಲಯಗಳನ್ನೊಳಗೊಂಡಂತೆ ಸುಮಾರು 12 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಈ ಭವನವು ನಿರ್ಮಾಣಗೊಂಡಿದೆ.

ಮೂಡುಬಿದಿರೆಗೆ ತಿಲಕಪ್ರಾಯವೆಂಬಂತೆ ಕಂಗೊಳಿಸುತ್ತಿರುವ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನ ಮತ್ತು ಮೂಡುಬಿದಿರೆಯ ಕಣ್ಮಣಿ ಮುಂಡ್ರುದೆಗುತ್ತು ಅಮರನಾಥ ಶೆಟ್ಟರ ಹೆಸರಿನ ಭವನಗಳ ಉದ್ಘಾಟನಾ ಸಮಾರಂಭದಲ್ಲಿ ಹಾಗೂ ಅದೇ ದಿನ ಸಂಜೆ 7ಗಂಟೆಗೆ ಮುಂಡ್ರುದೆಗುತ್ತು ಅಮರನಾಥ ಶೆಟ್ಟಿ ಸಭಾಂಗಣದಲ್ಲಿ 250 ಪ್ರತಿಭಾವಂತ ವಿದ್ಯಾರ್ಥಿಗಳಿಂದ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ ಕಾರ್ಯಕ್ರಮವು ಸಂಪನ್ನಗೊಳ್ಳಲಿದೆ ಎಂದು ಡಾ. ಎಂ.ಮೋಹನ ಆಳ್ವ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News