ಜಾದೂ ಕಲೆಗೆ ಸವಾಲಾದ ತಂತ್ರಜ್ಞಾನ ದುರ್ಬಳಕೆ: ಜಿಲ್ಲಾಧಿಕಾರಿ ಡಾ.ರಾಜೇಂದ್ರ

Update: 2021-02-25 14:16 GMT

ಮಂಗಳೂರು, ಫೆ. 25: ಭಾರತದ ಪ್ರಾಚೀನ ಕಲೆಗಳಲ್ಲಿ ಒಂದಾಗಿರುವ ಜಾದೂ ಕಲೆಯನ್ನು ಇಂದಿನ ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ದುರ್ಬಳಕೆಯಿಂದ ಸವಾಲುಗಳನ್ನು ಎದುರಿಸುತ್ತಿದೆ. ಕುಟುಂಬದ ಎಲ್ಲರನ್ನೂ ರಂಜಿಸುವ ಮತ್ತು ಮನಸ್ಸಿಗೆ ಮುದ ನೀಡುವ ಜಾದೂ ಕಲೆಯನ್ನು ಉಳಿಸಿ ಬೆಳೆಸುವ ಕೆಲಸ ಎಲ್ಲರಿಂದ ಆಗಬೇಕು ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಕರೆ ನೀಡಿದರು.

ಜಗತ್ಪ್ರಸಿದ್ದ ಜಾದೂಗಾರ ಪಿ.ಸಿ.ಸರ್ಕಾರ್ ಅವರ ಜನ್ಮದಿನದ ಪ್ರಯುಕ್ತ ನಗರದ ರಾಮಕೃಷ್ಣ ಮಠದಲ್ಲಿ ಮಂಗಳವಾರ ಆಯೋಜಿ ಸಲಾಗಿದ್ದ ರಾಷ್ಟ್ರೀಯ ಜಾದೂ ದಿನಾಚರಣೆಯನ್ನು ಜಾದೂ ತಂತ್ರಗಾರಿಕೆಯ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ರಾಮಕೃಷ್ಣ ಮಠದ ಅಧ್ಯಕ್ಷ ಜಿತಕಾಮಾನಂದಜಿ ಮಹಾರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ನಿಕ್, ಮಾಜಿ ಮೇಯರ್ ದಿವಾಕರ್ ಕದ್ರಿ ಅತಿಥಿಗಳಾಗಿದ್ದರು.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಕಲಾವಿದರ ಪಟ್ಟಿಯಲ್ಲಿ ಜಾದೂಗಾರರ ಹೆಸರು ಇಲ್ಲ. ಈ ಪಟ್ಟಿಯಲ್ಲಿ ಜಾದೂ ಕಲೆ ಸೇರ್ಪಡೆ ಗೊಳ್ಳುವ ಪ್ರಕ್ರಿಯೆ ನಡೆಯಲಿ ಎಂದು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಉಪ ನಿರ್ದೇಶಕ ರಾಜೇಶ್ ಜಿ. ತಿಳಿಸಿದರು.
ಹಿರಿಯ ಜಾದೂಗಾರ ಪ್ರೊ. ಮಾಧವ್ ಕಾಸರಗೋಡು ಅವರಿಗೆ ಐಂದ್ರಜಾಲಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸಮಿತಿಯ ಅಧ್ಯಕ್ಷ ಡಾ.ನಾ.ದಾ.ಶೆಟ್ಟಿ ಪ್ರಶಸ್ತಿ ವಿಜೇತರ ಪರಿಚಯ ಮಾಡಿದರು.

ವಿಸ್ಮಯ ಜಾದೂ ಪ್ರತಿಷ್ಠಾನದ ಸಂಚಾಲಕ ಕುದ್ರೋಳಿ ಗಣೇಶ್ ಆಶಯ ಭಾಷಣ ಮಾಡಿದರು. ರಾಮಕೃಷ್ಣ ಮಠದ ಏಕ ಗಮ್ಯಾನಂದ ಸ್ವಾಮೀಜಿ, ಸಹ್ಯಾದ್ರಿ ಸಮೂಹದ ಅಧ್ಯಕ್ಷ ಮಂಜುನಾಥ ಭಂಡಾರಿ, ಶಿಕ್ಷಣ ಕ್ಷೇತ್ರದ ನರೇಶ್ ಶೆಣೈ ಜಾದೂ ಕಲಾವಿದರನ್ನು ಗೌರವಿಸಿದರು.

ಪ್ರವೀಣ್ ಉಡುಪ ಕಾರ್ಯಕ್ರಮ ನಿರೂಪಿಸಿದರು. ಜಾದೂಗಾರ ರಾಜೇಶ್ ಮಳಿ ವಂದಿಸಿದರು. ಬಳಿಕ ನಡೆದ ಜಾದೂ ಪ್ರದರ್ಶನ ದಲ್ಲಿ ಸತೀಶ್ ಹೆಮ್ಮಾಡಿ, ರಾಜೇಶ್ ಮಳಿ, ಅಂಜನಾ ಹಾಗೂ ಅಪೂರ್ವ ಮಳಿ ಜಾದೂ ರಂಜನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News