ಕ್ಷುಲ್ಲಕ ವಿಚಾರ : ಯುವಕನಿಗೆ ರಾಡ್ ನಿಂದ ಮಾರಣಾಂತಿಕ ಹಲ್ಲೆ
ಕೋಟ : ಬೈಕಿನಲ್ಲಿ ತೆರಳುತ್ತಿದ್ದ ಯುವಕನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಸಾಲಿಗ್ರಾಮ ಸಮೀಪದ ಪಾರಂಪಳ್ಳಿ ಪಡುಕೆರೆಯಲ್ಲಿ ನಡೆದಿದೆ.
ಹಲ್ಲೆಗೊಳಗಾದವನನ್ನು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಪಡುಕೆರೆಯ ನಿವಾಸಿ ಅಕ್ಷಯ್ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಅಕ್ಷಯ್ ನನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲ್ಲೆ ನಡೆಸಿದಾತನನ್ನು ಪರಂಪಳ್ಳಿಯ ಗಗನ್ ಪೂಜಾರಿ ಎಂದು ತಿಳಿದುಬಂದಿದೆ.
ಕ್ಷುಲಕ ಕಾರಣಕ್ಕೆ ಆರೋಪಿ ಗಗನ್ ಹಾಗೂ ಅಕ್ಷಯ್ ನಡುವೆ ಮೊಬೈಲ್ ನಲ್ಲಿ ಪರಸ್ಪರ ಗಲಾಟೆ ನಡೆದಿತ್ತು. ರಾತ್ರಿಯ ವೇಳೆಯಲ್ಲಿ ಕೋಟದ ಹೋಟೆಲ್ ನಲ್ಲಿ ಊಟ ಮುಗಿಸಿ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಅಡ್ಡಗಟ್ಟಿದ ಗಗನ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆಯೊಡ್ಡಿ, ನಂತರ ಕಬ್ಬಿಣದ ರಾಡ್ ನಿಂದ ಬಲವಾಗಿ ಹೊಡೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎಂದು ದೂರಲಾಗಿದೆ.
ಗಗನ್ ಪೂಜಾರಿ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.