'#modi_job_do': ವಿದ್ಯಾರ್ಥಿಗಳು, ಯುವಕರಿಂದ 50 ಲಕ್ಷಕ್ಕೂ ಹೆಚ್ಚು ಟ್ವೀಟ್ ಗಳು

Update: 2021-02-25 15:14 GMT
Photo: Twitter (@KhansirOfficial)

ಹೊಸದಿಲ್ಲಿ: ಟ್ವಿಟರ್ ನಲ್ಲಿ ಇಂದು ದೇಶದ ನಿರುದ್ಯೋಗಿ ಯುವಕರು ‘ಮೋದಿ ನಮಗೆ ಉದ್ಯೋಗ ನೀಡಿ’ ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ. 'ಮೋದಿ ಜಾಬ್ ದೋ' (#modi_job_do) ಎಂಬ ಹ್ಯಾಶ್ ಟ್ಯಾಗ್ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಈ ಅಭಿಯಾನದಲ್ಲಿ ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ವಿಪಕ್ಷ ಸದಸ್ಯರುಗಳು ಭಾಗವಹಿಸಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಪರೀಕ್ಷೆ ಪ್ರಕ್ರಿಯೆಯಲ್ಲಿ ವಂಚನೆ, ನಿಗದಿತ ಸಮಯದಲ್ಲಿ ವಿವಿಧ ಸರಕಾರಿ ಪರೀಕ್ಷೆಗಳನ್ನು ನಡೆಸಲು ಹಾಗೂ ಮುಕ್ತಾಯಗೊಳಿಸಲು ಆಗುತ್ತಿರುವ ವಿಳಂಬಗಳು ಹಾಗೂ ವೈಫಲ್ಯಗಳ ಪರಿಣಾಮವಾಗಿ ಗುರುವಾರದಂದು ವಿದ್ಯಾರ್ಥಿಗಳು ಹಾಗೂ ವಿರೋಧ ಪಕ್ಷಗಳು ಕೇಂದ್ರ  ಸರಕಾರದ ವಿರುದ್ಧ ಟ್ವಿಟರ್ ನಲ್ಲಿ ಹ್ಯಾಶ್ ಟ್ಯಾಗ್ ನ್ನು ಟ್ರೆಂಡಿಂಗ್ ಮಾಡುತ್ತಿದ್ದಾರೆ.

ಗುರುವಾರ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿರುವ ಹ್ಯಾಶ್ ಟ್ಯಾಗ್ ನಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಸರಕಾರಿ ಪರೀಕ್ಷೆಗಳ ಫಲಿತಾಂಶಗಳ ಸಮಯ ಹಾಗೂ ಪರೀಕ್ಷೆಗಳ ಸುಧಾರಣೆಗಳ ಕುರಿತಾಗಿಯೇ ಇತ್ತು.

‘ಮೋದಿ ಜಾಬ್ ದೋ'(#modi_job_do) ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ 50 ಲಕ್ಷಕ್ಕೂ ಅಧಿಕ ಟ್ವೀಟ್ ಮಾಡಲಾಗಿದೆ. 'ಮೋದಿ ರೋಜ್ ಗಾರ್ ದೋ' #modi_rojgar_do(ಮೋದಿ ಉದ್ಯೋಗ ಕೊಡಿ)ಹಾಗೂ ಮಧ್ಯಪ್ರದೇಶದ ಸಿಎಂ ಅವರನ್ನು ಗುರಿಯಾಗಿಸಿ ಕೂಡ ಹ್ಯಾಶ್ ಟ್ಯಾಗ್ ಗಳು ಟ್ವಿಟರ್ ನಲ್ಲಿ ಹೆಚ್ಚು ಟ್ರೆಂಡಿಂಗ್ ಆಗುತ್ತಿವೆ.

ಈ ಟ್ವಿಟರ್ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹ್ಯಾಶ್ ಟ್ಯಾಗ್ ನ್ನು ಬಳಸಿ ಟ್ವೀಟ್ ಮಾಡಿದ್ದಾರೆ. 

“ವಿಫಲ ಸರಕಾರ, ಹೆಚ್ಚುತ್ತಿರುವ ಹಣದುಬ್ಬರ, ನಿರುದ್ಯೋಗದ ಎಲ್ಲ ಮಿತಿಯನ್ನು ಮೀರಿದೆ. ಮೋದಿ ಜಾಬ್ ದೋ ಎಂದು ಗಾಂಧಿ ಹಿಂದಿಯಲ್ಲಿ ಟ್ವೀಟಿಸಿದ್ದಾರೆ.

ವಿಶ್ವಕ್ಕೆ ಕೋವಿಡ್ -19 ಸಾಂಕ್ರಾಮಿಕ ಅಪ್ಪಳಿಸಿ ವಿಶ‍್ವದ ಆರ್ಥಿಕತೆಯನ್ನು ಸ್ತಬ್ದಗೊಳಿಸುವ ಮೊದಲೇ ಭಾರತದಲ್ಲಿ 45 ವರ್ಷಗಳ ಬಳಿಕ ಗರಿಷ್ಠ ಮಟ್ಟದ ನಿರುದ್ಯೋಗ ಸಮಸ್ಯೆ ಕಾಡುತ್ತಿತ್ತು. ಇದೀಗ ಕೋವಿಡ್-19 ದೇಶದ ನಿರುದ್ಯೋಗ ಸಮಸ್ಯೆಯನ್ನು ಮತ್ತಷ್ಟು ಹದಗೆಡಿಸಿದೆ. ಖಾಸಗಿ ಸಂಸ್ಥೆಗಳು ಉದ್ಯೋಗವನ್ನು ಕಡಿತ ಮಾಡುತ್ತಿದ್ದು, ದಿನಗೂಲಿ ಕಾರ್ಮಿಕರಿಗೆ ಕೆಲಸವಿಲ್ಲವಾಗಿದೆ. ವಿವಿಧ ಇಲಾಖೆಗಳಲ್ಲಿ ಸರಕಾರವು ನೇಮಕಾತಿಯನ್ನು ವಿಳಂಬ ಮಾಡುತ್ತಿದೆ ಎಂದು ಆರೋಪಿಸಲಾಗಿದೆ. ಲಕ್ಷಾಂತರ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದು, ಇದರ ಪರಿಣಾಮವಾಗಿ ಜನವರಿ 2021ರಲ್ಲಿ ಭಾರತದಲ್ಲಿ ಕೇವಲ 400 ಮಿಲಿಯನ್ ಉದ್ಯೋಗಿಗಳನ್ನು ಹೊಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News