ಡಾ. ಮೋಹನ್ ಆಳ್ವಗೆ ಬಿ.ಎಂ. ಇದಿನಬ್ಬ ಸ್ಮಾರಕ ಗೌರವ ಪ್ರಶಸ್ತಿ

Update: 2021-02-25 15:09 GMT

ಮಂಗಳೂರು, ಫೆ.25: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ವತಿಯಿಂದ ಮಾಜಿ ಶಾಸಕ, ಹಿರಿಯ ಕವಿ, ಸಾಹಿತಿ, ಸ್ವಾತಂತ್ರ ಹೋರಾಟಗಾರ ಬಿಎಂ ಇದಿನಬ್ಬ ಜನ್ಮ ಶತಮಾನೋತ್ಸವವು ಮಾ.5ರಂದು ನಗರದ ಪುರಭವನದಲ್ಲಿ ನಡೆಯಲಿದೆ ಎಂದು ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದ್ದಾರೆ.

ದಿ. ಬಿ.ಎಂ. ಇದಿನಬ್ಬ ಸ್ಮರಣಾರ್ಥ ‘ಬಿ.ಎಂ. ಇದಿನಬ್ಬ ಜನ್ಮ ಶತಮಾನೋತ್ಸವ (ಮರ್ಹೂಂ ಬಿ.ಎಂ. ಇದಿನಬ್ಬ ನೂರು ವರ್ಸೆ ಒರು ನೆನಪು) ಕಾರ್ಯಕ್ರಮದಲ್ಲಿ ಕಲೆ, ಸಂಸ್ಕೃತಿ, ನಾಡು, ನುಡಿಗಾಗಿ ಸೇವೆ ಸಲ್ಲಿಸುತ್ತಿರುವ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವಾ ಅವರಿಗೆ ದಿ. ಬಿ.ಎಂ. ಇದಿನಬ್ಬ ಗೌರವ ಪ್ರಶಸ್ತಿಯನ್ನು ಅಕಾಡಮಿ ನೀಡಲಿದೆ.

ಪ್ರಶಸ್ತಿಯು 10,000 ರೂ. ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಅಪರಾಹ್ನ 3 ಗಂಟೆಗೆ ನಡೆಯುವ ಉದ್ಘಾಟನೆ ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೆರವೇರಿಸಲಿದ್ದು, ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಇದೇ ವೇಳೆ ದಿ. ಬಿ.ಎಂ. ಇದಿನಬ್ಬ ಅವರ ಮಕ್ಕಳಿಗೆ ಉಳ್ಳಾಲ ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ. ಖಾದರ್ ಸನ್ಮಾನ ನೆರವೇರಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸಂಸ್ಮರಣಾ ಭಾಷಣ ಮಾಡಲಿದ್ದಾರೆ. ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯ ಅಧ್ಯಕ್ಷ ಹರಿಕೃಷ್ಣ ಪುನರೂರು, ಉಳ್ಳಾಲ ಸೈಯದ್ ಮದನಿ ದರ್ಗಾದ ಅಧ್ಯಕ್ಷ ಅಬ್ದುಲ್ ರಶೀದ್, ಮಾಜಿ ಶಾಸಕ ಬಿ.ಎ. ಮೊಹಿಯುದ್ದಿನ್ ಬಾವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಅದೇ ದಿನ 4:30ರಿಂದ ಬಿ.ಎಂ. ಇದಿನಬ್ಬರ ಕುರಿತು ಹಿರಿಯ ಸಾಹಿತಿ ಮುಹಮ್ಮದ್ ಬಡ್ಡೂರು ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರಗಲಿದ್ದು, ಕವಿಗಳಾದ ಭಾಸ್ಕರ್ ರೈ ಕುಕ್ಕುವಳ್ಳಿ (ತುಳು), ತೋನ್ಸೆ ಪುಷ್ಕಳ ಕುಮಾರ್ (ಕನ್ನಡ), ಬಿ.ಎ. ಮುಹಮ್ಮದ್ ಅಲಿ (ಬ್ಯಾರಿ), ಬಶೀರ್ ಅಹ್ಮದ್ ಕಿನ್ಯ (ಮಲಾಮೆ), ಫ್ಲೋರಾ ಕ್ಯಾಸ್ತಲಿನೊ (ಕೊಂಕಣಿ) ಕವನ ವಾಚಿಸಲಿದ್ದಾರೆ.

ಸಂಜೆ 5:30ರಿಂದ ‘ಬಿ.ಎಂ. ಇದಿನಬ್ಬ ಬದುಕು ಮತ್ತು ಬರಹ’ ವಿಷಯದಲ್ಲಿ ಬ್ಯಾರಿ ಅಧ್ಯಯನ ಪೀಠದ ಸದಸ್ಯ ಅಹ್ಮದ್ ಬಾವ ಮೊಹಿದಿನ್ ಪಡೀಲ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಗೋಷ್ಠಿಯಲ್ಲಿ ಪತ್ರಕರ್ತರಾದ ಚಿದಂಬರ ಬೈಕಂಪಾಡಿ, ಹಂಝ ಮಲಾರ್, ಉಳ್ಳಾಲ ಸೈಯದ್ ಮದನಿ ದರ್ಗಾ ಆಡಳಿತ ಸಮಿತಿಯ ಸದಸ್ಯ ಫಾರೂಕ್ ಉಳ್ಳಾಲ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

ಸಂಜೆ 6:30ರಿಂದ ಅಬ್ದುಲ್ ಸಮದ್ ಮತ್ತು ಬಳಗದಿಂದ ಬ್ಯಾರಿ ಕವಾಲಿ, ಮುಹಮ್ಮದ್ ಫೈಝ್ ಮತ್ತು ಬಳಗದಿಂದ ಬ್ಯಾರಿ ಸಂಗೀತ ರಸಮಂಜರಿ ನಡೆಯಲಿದೆ ಎಂದು ಬ್ಯಾರಿ ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮಾ, ಅಧ್ಯಕ್ಷ ರಹೀಂ ಉಚ್ಚಿಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News