ಉಡುಪಿ: ಬೆಲೆ ಏರಿಕೆ ವಿರುದ್ಧ ಅಣಕು ಶವ ಯಾತ್ರೆ, ಪ್ರತಿಭಟನೆ

Update: 2021-02-25 15:50 GMT

ಉಡುಪಿ, ಫೆ.25: ಇಂಧನ, ಅಡಿಗೆ ಅನಿಲ, ಆಹಾರ ಸಾಮಗ್ರಿ, ಕಟ್ಟಡ ನಿರ್ಮಾಣ ಸಾಮಗ್ರಿ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆಯನ್ನು ಏರಿಸಿರುವುದರ ವಿರುದ್ಧ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಇಂದು ನಗರದಲ್ಲಿ ಅಣಕು ಶವ ಯಾತ್ರೆಯ ಮೂಲಕ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿತು.

ಒಂದೆಡೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮತ್ತೊಂದೆಡೆ ಕಳೆದ ಒಂದು ವರ್ಷದಿದ ಉದ್ಯೋಗ ಹಾಗೂ ಸಂಬಳವಿಲ್ಲದೇ ಬಳವಳಿದ ಮಹಿಳಾ ಅತಿಥಿ ಉಪನ್ಯಾಸಕರು ಅಣಕು ಶವಯಾತ್ರೆಯಲ್ಲಿ ಚಟ್ಟವನ್ನು ಹೊತ್ತು ನಡೆದರು. ಜೋಡುಕಟ್ಟೆಯಿಂದ ಸಾಗಿಬಂದ ಪ್ರತಿಭಟನಾ ಮೆರವಣಿಗೆ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಸಮಾಪನಗೊಂಡಿತು. ದ್ವಿಚಕ್ರ ವಾಹನ ಹಾಗೂ ಅನಿಲದ ಸಿಲಿಂಡರ್‌ನ್ನು ತಳ್ಳುಗಾಡಿಯಲ್ಲಿ ಸಾಗಿಸಲಾಯಿತು. ಭಜನೆ ಮಾಡುವ ಮೂಲಕ ಸರಕಾರದ ಗಮನ ಸೆಳೆಯಲಾಯಿತು.

ಲಾಕ್‌ಡೌನ್ ಮುಗಿದು ಹಲವಾರು ತಿಂಗಳಾಗಿವೆ. ಆದರೆ ದೇಶದ ಪರಿಸ್ಥಿತಿ ಮಾತ್ರ ಚಿಂತಾಜನಕವಾಗಿದೆ. ವಿದ್ಯಾಭ್ಯಾಸ ಮಾಡಿದ ಯಾರಿಗೂ ಕೆಲಸವಿಲ್ಲದಂತಾಗಿದೆ. ಅತಿಥಿ ಉಪನ್ಯಾಸಕರಿಗೆ ಕೆಲಸವಿಲ್ಲದೆ ಹೆಣ ಹೊರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಕ್ಕಿಯಿಂದ ಹಿಡಿದು, ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ, ಗ್ಯಾಸ್, ಕಬ್ಬಿಣ, ಸಿಮೆಂಟ್‌ಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಬೆಲೆಏರಿಕೆಯನ್ನು ಮತ್ತೆ ಯಥಾಸ್ಥಿತಿಗೆ ತರಬೇಕು ಎಂದು ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಒತ್ತಾಯಿಸಿದರು.

ಅತಿಥಿ ಉಪನ್ಯಾಸಕರ ಹಿತರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷೆ ಶಾಹಿದಾ ಕೋಟ ಮಾತನಾಡಿ, 10 ವರ್ಷಗಳಿಂದ ಅತಿಥಿ ಉಪನ್ಯಾಸಕಿಯಾಗಿ ದುಡಿದಿದ್ದು, ಕಳೆದ 11 ತಿಂಗಳಿನಿಂದ ಕೆಲಸ ಹಾಗೂ ಸಂಬಳವಿಲ್ಲದೇ ಒದ್ದಾಡುತ್ತಿದ್ದೇವೆ. ಹಲವಾರು ಮಂದಿ ಕೆಲಸ ಸಿಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲಸ, ವೇತನ ಇಲ್ಲದ ಕಾರಣ ಜೀವನ ನಿರ್ವಹಣೆಯೇ ಕಷ್ಟಕರವಾಗಿದೆ. ಅತಿಥಿ ಉಪನ್ಯಾಸಕರಿಗೆ ಕೆಲಸದ ಭದ್ರತೆ ಒದಗಿಸಿ ಸಮಸ್ಯೆಗಳನ್ನು ನಿವಾರಿಸುವಂತೆ ಮನವಿ ಮಾಡಿದರು.

ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್‌ನ ತಾರಾನಾಥ ಮೇಸ್ತಾ ಶಿರೂರು, ಸುಧೀರ್ ಶೇಟ್, ಗಣೇಶ್‌ರಾಜ್ ಸರಳೇಬೆಟ್ಟು, ಸದಾನಂದ ಪೂಜಾರಿ, ಬಾಲಗಂಗಾಧರ್ ರಾವ್, ಸಂತೋಷ್, ಸರಕಾರಿ ಪದವಿ ಪೂರ್ವ ಕಾಲೇಜುಗಳ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಂಜಪ್ಪ ಗೋಣಿ, ಉಪನ್ಯಾಸಕ ಮುಖಂಡರಾದ ತ್ರಿವೇಣಿ, ಸತ್ಯಪ್ರಭಾ, ಪ್ರಶಾಂತಿ, ತೃಪ್ತಿ, ರಫಿಕ್, ಸೀಮಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News