×
Ad

ಕೋಟ ತಲುಪಿದ ಕಾಂಗ್ರೆಸ್‌ನ ಜನಧ್ವನಿ ಪಾದಯಾತ್ರೆ

Update: 2021-02-25 21:23 IST

ಉಡುಪಿ, ಫೆ.25: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆಡಳಿತ ವೈಖರಿ, ಜನವಿರೋಧಿ ನೀತಿಗಳನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸೋಮವಾರದಿಂದ ಹಮ್ಮಿಕೊಂಡಿರುವ ಜನಧ್ವನಿ ಪಾದಯಾತ್ರೆ ಗುರುವಾರ ಕೋಟ ತಲುಪಿದೆ.

 ಮೂರನೇ ದಿನದ ಪಾದಯಾತ್ರೆ ಬ್ರಹ್ಮಾವರದಲ್ಲಿ ಕೊನೆಗೊಂಡಿದ್ದು, ಇಂದು ಬೆಳಗ್ಗೆ ಬ್ರಹ್ಮಾವರದಿಂದ ಕೋಟದವರೆಗೆ ಯಾತ್ರೆ ಸಾಗಿತು. ನಾಲ್ಕನೇ ದಿನದ ಪಾದಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ರಾಜ್ಯ ಹಾಗೂ ಕೇಂದ್ರ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿಮುಖ್ಯ ಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಈಗಾಗಲೇ ನಡೆದಿದೆ ಎಂದರು.

ಇದು ಬೆಂಗಳೂರಿಗೆ ಸೀಮಿತವಾಗದೆ ರಾಜ್ಯದ ಜಿಲ್ಲಾವಾರುಗಳಲ್ಲಿ ಬೃಹತ್ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಹೆಜಮಾಡಿಯಿಂದ ಬೈಂದೂರಿನ ತನಕ 108ಕಿಮಿ ಪಾದಯಾತ್ರೆ ನಡೆದು ಜನಸಾಮಾನ್ಯರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿಯನ್ನು ಪ್ರತಿಭಟನಾ ಮೂಲಕ ತಿಳಿಯಪಡಿಸುತ್ತಿದ್ದೇವೆ. ಕಳೆದ ಹಲವಾರು ತಿಂಗಳುಗಳಿಂದ ರೈತರು ಕೃಷಿ ಮಸೂದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಈ ದೇಶದ ಪ್ರಧಾನಿ ನರೇಂದ್ರ ಮೋದಿ ಅದರ ಬಗ್ಗೆ ತುಟಿ ಬಿಚ್ಚಲ್ಲ ಎಂದರು.

135 ಕೋಟಿ ಜನಕ್ಕೆ ಈ ಸರಕಾರದ ಕಾರ್ಯನೀತಿ ಅರ್ಥವಾಗಿದೆ. ಇದು ಜನ ಸಾಮಾನ್ಯರ ಸರಕಾರವಲ್ಲ. ಬಂಡವಾಳಶಾಹಿಗಳ ಸರಕಾರವಾಗಿದೆ. ಪೆಟ್ರೋಲ್ ,ಗ್ಯಾಸ್ ದರ ಗಗನಕ್ಕೇರಿಸಿದ್ದಾರೆ. ಸಾಮಾನ್ಯ ಜನರ ಹೊಟ್ಟೆಯ ಮೇಲೆ ಬರೆ ಎಳೆದಿದೆ. ನಾವು ತಂದ ಭೂಸುದರಣಾ ಮಸೂದೆಯನ್ನು ಕಿತ್ತುಕೊಳ್ಳುವ ಮೂಲಕ ತಿದ್ದುಪಡಿಮಾಡಲಾಗಿದೆ ಇದೊಂದು ಜನವಿರೋಧಿ ಸರಕಾರ ಎಂದು ಖಡಾಖಂಡಿತಾವಾಗಿ ಹೇಳುತ್ತೇವೆ ಎಂದು ಸೊರಕೆ ಹೇಳಿದರು.

ಟೋಲ್ ಹೋರಾಟಕ್ಕೆ ಶ್ಲಾಘನೆ: ಸಾಸ್ತಾನ ಟೋಲ್ ಹೋರಾಟ ಸಮಿತಿ ಶ್ಲಾಘನೀಯ ಕಾರ್ಯ ಮಾಡಿದ್ದಾರೆ. ಪ್ರತಿಭಟನೆ ಹತ್ತಿಕ್ಕುವ ಕೆಲಸವನ್ನು ಕೂಡಾ ಈ ಸರಕಾರ ಮಾಡಿದೆ. ಟೋಲ್ ಕಂಪನಿಯ ಉದ್ಧಾರ ಮಾಡುವ ಸರಕಾರವಾಗಿದೆ.ಸ್ಥಳೀಯರಿಗೆ ಟೋಲ್ ವಿನಾಯಿತಿ ಮುಂದುವರೆಸಿಕೊಂಡು ಹೋಗಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ ಹೋರಾಟಕ್ಕೆ ದುಮುಕಬೇಕಾದಿತು ಎಂದು ಖಡಕ್ ಎಚ್ಚರಿಕೆಯನ್ನು ನವಯುಗ ಕಂಪನಿಗೆ ನೀಡಿದರು.

ಪಾದಯಾತ್ರೆ ಸಾಲಿಗ್ರಾಮ ಸಮೀಪಿಸುತ್ತಿದ್ದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಶಂಕರ್ ಕುಂದರ್ ಹಾರ ಹಾಕಿ ಸ್ವಾಗತಿಸಿದರು. ನಂತರ ಬ್ಲಾಕ್ ಕಛೇರಿ ಇಂದಿರಾದಲ್ಲಿ ಇಂದಿರಾಗಾಂಧಿ ಭಾವ ಚಿತ್ರಕ್ಕೆ ಪುಷ್ಭಾರ್ಚನೆಯನ್ನು ನಡೆಸಲಾಯಿತು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನಕರ ಹೇರೂರು, ಮುಖಂಡರಾದ ವೆರೋನಿಕ ಕರ್ನೇಲಿಯೊ, ಮಲ್ಯಾಡಿ ಶಿವರಾಮ್ ಶೆಟ್ಟಿ, ಹರೀಶ್ ಕಿಣಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ತಿಮ್ಮ ಪೂಜಾರಿ, ರೋಶನಿ ಒಲಿವೇರ, ಶಂಕರ್ ಬಂಗೇರ, ರವೀಂದ್ರ ಕಾಮತ್,ಚಂದ್ರ ಆಚಾರ್ಯ,ದಿನೇಶ್ ಬಂಗೇರ, ನಟರಾಜ್ ಹೊಳ್ಳ, ಅಜಿತ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಫೆ.27ರ ಸಮಾರೋಪಕ್ಕೆ ಡಿಕೆಶಿ

ಕೇಂದ್ರ ಹಾಗೂ ರಾಜ್ಯ ಸರಕಾರಗಳ ರೈತ ವಿರೋಧಿ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡ ಜನಧ್ವನಿ ಪಾದಯಾತ್ರೆ ಫೆ.27ರ ಶನಿವಾರ ಅಪರಾಹ್ನ 3:00ಕ್ಕೆ ಬೈಂದೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆ ಯೊಂದಿಗೆ ಸಮಾಪನಗೊಳ್ಳಲಿದೆ. ಸಮಾಪನ ಸಭೆಯನ್ನುದ್ದೇಶಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ‌ಮಾತನಾಡಲಿರುವರು. ಪಕ್ಷದ ಹಲವು ರಾಜ್ಯ ಹಾಗೂ ಜಿಲ್ಲೆಯ ಮುಖಂಡರು ಸಭೆಯಲ್ಲಿ ಭಾಗವಹಿಸಲಿರುವರು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ.

ಸಿದ್ಧರಾಮಯ್ಯರ ಕಾಲದಲ್ಲಿ ಜಿಲ್ಲೆ ಅಭಿವೃದ್ಧಿ

ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್ ಆಡಳಿತದ ಅಧಿಯಲ್ಲಿ ಉಡುಪಿಯಲ್ಲಿ ಅಭೂತಪೂರ್ವ ಅಭಿವೃದ್ದಿ ಆಗಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಬ್ರಹ್ಮಾವರದಲ್ಲಿ ಬುಧವಾರ ಹಮ್ಮಿಕೊಂಡ ಜನಧ್ವನಿ ಪಾದಯಾತ್ರೆಯ ಬಹಿ ರಂಗ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಅಂದು ವಾರಾಹಿ ಕುಡಿಯುವ ನೀರಿನ ಯೋಜನೆಗೆ ಚಾಲನೆ, ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ, ನರ್ಮ್ ಬಸ್, ಮಿನಿ ವಿಧಾನಸೌದ, ಬ್ರಹ್ಮಾವರ ತಾಲೂಕು ರಚನೆ, ಸಕ್ಕರೆ ಕಾರ್ಖಾನೆಗೆ ರೂ.12 ಕೋಟಿ ಅನುದಾನ, ಸುಸಜ್ಜಿತ ರಸ್ತೆಗಳ ನಿರ್ಮಾಣ ಹೀಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿತ್ತು ಎಂದವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News