ಸಹಕಾರಿ ಕ್ಷೇತ್ರದ ಧುರೀಣ ರಮೇಶ್ ಶೆಟ್ಟರಿಗೆ ಜೀವ ಬೆದರಿಕೆ, ವಾಹನ ಜಖಂ: ದೂರು ದಾಖಲು
ಉಡುಪಿ, ಫೆ. 25: ಜಿಲ್ಲೆಯ ಹಿರಿಯ ಸಹಕಾರಿ ಧುರೀಣ, ಉಪ್ಪೂರು ಸೊಸೈಟಿಯ ಅಧ್ಯಕ್ಷ ಹಾಗೂ ಹಾವಂಜೆ ಗ್ರಾಪಂ ಸದಸ್ಯರಾದ ರಮೇಶ್ ಎನ್. ಶೆಟ್ಟಿ ಅವರು ಕುಕ್ಕೆಹಳ್ಳಿ ಮನೆಯಲ್ಲಿರುವಾಗ ಇವರ ವಿರೋಧಿಗಳು, ಫೆ.23ರ ರಾತ್ರಿ ರಾಜಕೀಯ ದ್ವೇಷದಿಂದ ಮನೆಗೆ ಮತ್ತು ವಾಹನಕ್ಕೆ ಹಾನಿ ಮಾಡಿದ್ದಾರೆ ಎಂದು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದರ ಜೊತೆಗೆ ಗೇಟಿನ ಲೈಟ್ ಗಳನ್ನು ಒಡೆದು ಹಾಕಿದ್ದಾರೆ, ಜೊತೆಗೆ ಏರುಧ್ವನಿಯಲ್ಲಿ ರಮೇಶ್ ಎನ್ ಶೆಟ್ಟಿ ಇವರಿಗೆ ಜೀವ ಬೆದರಿಕೆಯನ್ನು ಹಾಕಿದ್ದಾರೆ. ರಾತ್ರಿ 10:30ರ ಸುಮಾರಿಗೆ ತಾವು ಕುಟುಂಬದವರೊಂದಿಗೆ ಮನೆಯಲ್ಲಿರುವಾಗ ಜಗದೀಶ ಶೆಟ್ಟಿ ಯಾನೆ ಸುನಿಲ್ ಶೆಟ್ಟಿ, ಅನಿಲ್ ಶೆಟ್ಟಿ, ಅಜಿತ್ ಶೆಟ್ಟಿ ಹಾಗೂ ಇತರರು ಈ ಕೃತ್ಯ ಎಸಗಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ರಾತ್ರಿ ಬಾಗಿಲು ಬಡಿದ ಶಬ್ದ ಕೇಳಿ ಕಿಟಕಿಯಲ್ಲಿ ನೋಡಿದಾಗ ಇವರೆಲ್ಲ ಮನೆಯ ಅಂಗಳದಲ್ಲಿದ್ದು, ಅಲ್ಲಿಂದಲೇ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದು, ಮನೆಯ ಎದುರು ನಿಲ್ಲಿಸಿದ್ದ ಕಾರನ್ನು ಹಾನಿಗೊಳಿಸಿದ್ದಾರೆ. ಬಳಿಕ ಅವರು ಕೆಂಪು ಬಣ್ಣದ ಜೀಪಿನಲ್ಲಿ ಹೋಗಿರುವುದಾಗಿ ತಿಳಿಸಿದ್ದಾರೆ.
ಈ ಕೃತ್ಯದಲ್ಲಿ ಮಾಜಿ ಸದಸ್ಯರು, ಹಾವಂಜೆ ಗ್ರಾಮದ ಪಿಡಬ್ಲ್ಯೂಡಿ ಗುತ್ತಿಗೆದಾರ ಮತ್ತು ಕುಕ್ಕೆಹಳ್ಳಿ ಗ್ರಾಮ ಪಂಚಾಯಿತಿಯ ರಾಜಕೀಯ ವಿರೋಧಿಗಳು ಇರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಪೊಲೀಸ್ ಇಲಾಖೆ ಕೂಡಲೇ ಇವರನ್ನು ಬಂಧಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಂಡನೆ: ಕಾಂಗ್ರೆಸ್ ಮುಖಂಡ, ಹಿರಿಯ ಸಹಕಾರಿ ಧುರೀಣ ರಮೇಶ್ ಶೆಟ್ಟಿ ಅವರಿಗೆ ಜೀವ ಬೆದರಿಕೆ ಒಡ್ಡಿರುವುದು ರಾಜಕೀಯ ಪ್ರೇರಿತವಾಗಿದ್ದು ಖಂಡನೀಯ, ಸಂಬಂಧಪಟ್ಟವರನ್ನು ಕೂಡಲೇ ಬಂಧಿಸಬೇಕು ಎಂದು ತಿಳಿಸಿದ್ದು, ಘಟನೆಯನ್ನು ಕೇಂದ್ರದ ರಾಜ್ಯಸಭಾ ಸದಸ್ಯರಾದ ಆಸ್ಕರ್ ಫೆರ್ನಾಂಡಿಸ್ , ಎಂ.ಎ.ಗಫೂರ್, ಸ್ಥಳೀಯರಾದ ರಾಜ್ಯ ಯುವ ಕಾಂಗ್ರೆಸ್ ನ ಮಾಜಿ ಕಾರ್ಯದರ್ಶಿ ಜಯಶೆಟ್ಟಿ ಬನ್ನಂಜೆ ಖಂಡಿಸಿದ್ದಾರೆ.