ಎರ್ಮಾಳ್ ಬಳಿ ಕಡಿದ ಯುಪಿಸಿಎಲ್ ಪೈಪ್‌ಲೈನ್: ಮೀನುಗಾರರಲ್ಲಿ ಆತಂಕ

Update: 2021-02-26 15:25 GMT

ಪಡುಬಿದ್ರಿ/ಉಡುಪಿ, ಫೆ. 26: ಯುಪಿಸಿಎಲ್ ಸ್ಥಾವರದಿಂದ ಎರ್ಮಾಳು ಬಳಿ ಅರಬಿ ಸಮುದ್ರಕ್ಕೆ ಸಂಸ್ಕರಿತ ತ್ಯಾಜ್ಯ ನೀರು ಸಾಗಿಸಲು ಅಳವಡಿಸಲಾಗಿರುವ ಸುಮಾರು 100ಮೀ. ಉದ್ದದ ಪೈಪ್‌ಲೈನ್ ಒಡೆದುಹೋಗಿದ್ದು, ಈ ಬಗ್ಗೆ ಪರಿಸರದ ಮೀನುಗಾರರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಎಲ್ಲೂರು ಕೇಂದ್ರಿತವಾಗಿ ಕಾರ್ಯಾಚರಿಸುತ್ತಿರುವ ಗೌತಮ್ ಅದಾನಿ ಒಡೆತನದ ಕಲ್ಲಿದ್ದಲು ಆಧಾರಿತ ಉಷ್ಣವಿದ್ಯುತ್ ಸ್ಥಾವರ ‘ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್’ (ಯುಪಿಸಿಎಲ್) ಸಮುದ್ರದ ನೀರನ್ನು ಪೈಪ್‌ಲೈನ್ ಮೂಲಕ ಸೆಳೆದು ಸ್ಥಾವರಕ್ಕೆ ಬಳಸಿದ ಬಳಿಕ ಅದನ್ನು ಸಂಸ್ಕರಿಸಿ ಸಮುದ್ರಕ್ಕೆ ಬಿಡಲಾಗುತ್ತಿದೆ ಎಂದು ಹೇಳುತ್ತಿದೆ.

ತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುವುದರಿಂದ ಮೀನು ಸಂತತಿ ಅಳಿಯುವ ಭೀತಿಯಿಂದ ಸಮುದ್ರಕ್ಕೆ ಪೈಪ್‌ಲೈನ್ ಅಳವಡಿಸುವ ವೇಳೆ ಕಾಪು ಮತ್ತು ಉಡುಪಿ ತಾಲೂಕುಗಳ ಮೀನುಗಾರರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೆ ತಾವು ತ್ಯಾಜ್ಯ ನೀರನ್ನು ಸಂಸ್ಕೃರಿಸಿದ ಬಳಿಕವಷ್ಟೇ ಸಮುದ್ರಕ್ಕೆ ಬಿಡುವುದಾಗಿ ಯುಪಿಸಿಎಲ್ ಭರವಸೆ ನೀಡಿದ ಹಿನ್ನೆಲೆಯಲ್ಲಿ ಯೋಜನೆಗೆ ಒಪ್ಪಿಗೆ ಸೂಚಿಸಲಾಗಿತ್ತು.

ಪೈಪ್‌ಲೈನ್‌ನ್ನು ಸಮುದ್ರದ ಮಧ್ಯದಲ್ಲಿ ಅಳವಡಿಸಲಾಗಿತ್ತು. ಆದರೆ ಕಳೆದ ಸುಮಾರು ಒಂದು ತಿಂಗಳ ಹಿಂದೆ ಎರ್ಮಾಳು ಕಡಲ ಕಿನಾರೆಯಲ್ಲಿ ಈ ಪೈಪ್‌ಲೈನ್ ಒಡೆದಿದ್ದು, ಇನ್ನೂ ಸಹ ಸಂಬಂಧಪಟ್ಟ ಅಧಿಕಾರಿಗಳಾಗಲೀ, ಯುಪಿಸಿಎಲ್ ಕಂಪೆನಿಯವರಾಗಲೀ ಅದನ್ನು ಸರಿಪಡಿಸುವ ಯಾವುದೇ ಪ್ರಯತ್ನಕ್ಕೆ ಮುಂದಾಗಿಲ್ಲ. ಇದು ಸ್ಥಳೀಯರ ಅಸಮಧಾನಕ್ಕೆ ಕಾರಣವಾಗಿದೆ. ಕೂಡಲೇ ಇದನ್ನು ಸರಿಪಡಿಸಬೇಕು ಎಂದು ಸ್ಥಳೀಯರು ಗ್ರಾಮ ಪಂಚಾಯಿತಿ ಹಾಗೂ ಯುಪಿಸಿಎಲ್‌ನ್ನು ಒತ್ತಾಯಿಸಿದ್ದಾರೆ.

ಒಡೆದ ಪೈಪ್‌ನಿಂದಲೇ ನೀರು: ಸುಮಾರು ಒಂದು ತಿಂಗಳಿಗೂ ಹಿಂದೆ ಈ ಪೈಪ್‌ಲೈನ್ ಒಡೆದುಹೋಗಿದ್ದು, ಸಮುದ್ರದ ತಳದಲ್ಲಿದ್ದ ಇದನ್ನು ತಂದು ಸಮುದ್ರ ಕಿನಾರೆಯಲ್ಲಿ ಇಡಲಾಗಿದೆ. ಈಗ ತೆರೆದ ಸ್ಥಿತಿಯಲ್ಲಿರುವ ಪೈಪ್‌ನಿಂದಲೇ ಸ್ಥಾವರವು ನೀರನ್ನು ಹೊರ ಬಿಡುತ್ತಿದೆ ಎಂದು ಪರಿಸರ ಹೋರಾಟಗಾರ ಯತೀಶ್ ಬೈಕಂಪಾಡಿ ದೂರಿದ್ದಾರೆ.

ಯುಪಿಸಿಎಲ್‌ನಿಂದ ಸಂಸ್ಕರಣೆಗೊಂಡು ಪೈಪ್‌ಲೈನ್ ಮೂಲಕ ಬಿಡಲಾಗುತ್ತಿದೆ ಎಂದು ಕಂಪೆನಿ ಹೇಳುವ ಬಿಸಿ ನೀರು ನೇರವಾಗಿ ಕಡಲ ಒಡಲು ಸೇರಿ, ಕಡಲಿನ ಪ್ರಾಕೃತಿಕ ಸಮತೋಲನವನ್ನು ಹಾಳು ಗೆಡಹುವ ಸಾಧ್ಯತೆ ಇದೆ. ಅಲ್ಲದೇ ಇದರಿಂದ ಮೀನು ಸಂತತಿ ನಾಶವಾಗುತ್ತದೆ ಎಂಬುದು ಸ್ಥಳೀಯ ಮೀನುಗಾರರ ಆತಂಕ ಎಂದವರು ಹೇಳಿದ್ದಾರೆ.

ಪೈಪ್‌ಲೈನ್ ಅಳವಡಿಸಿದ ಬಳಿಕ ಈ ಪ್ರದೇಶದಲ್ಲಿ ನಿರ್ಮಿಸಿದ ಬ್ರೇಕ್‌ವಾಟರ್‌ನಿಂದ ಕಡಲಕೊರೆತ ತೀವ್ರಗೊಂಡಿದ್ದು, ಆರೇಳು ವರ್ಷಗಳ ಹಿಂದೆ ಜಿಲ್ಲಾಡಳಿತ ಪೈಪ್‌ಲೈನ್‌ಗೆ ಅಳವಡಿಸಿದ್ದ ಬ್ರೇಕ್‌ವಾಟರ್‌ನ್ನು ತೆರವುಗೊಳಿಸಿದ ಬಳಿಕ ಕಡಲಕೊರೆತದ ತೀವ್ರತೆ ಕಡಿಮೆಯಾಗಿತ್ತು.

ರಾಜ್ಯ ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಸಿ.ಪಿ.ಯೋಗೀಶ್ವರ್ ನಾಳೆ ಯೋಜನಾ ಪ್ರದೇಶಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದ್ದು, ಅವರಿಗೆ ಈ ಬಗ್ಗೆ ಮನವಿ ಸಲ್ಲಿಸುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News