ಮೋಹನ ತರಂಗಿಣಿ ಪರಿಪೂರ್ಣ ಕಾವ್ಯ: ಡಾ. ಅರುಣ್ ಕುಮಾರ್
ಉಡುಪಿ, ಫೆ. 26: ತುಳುವ ವಂಶದ ಅರಸು ಕೃಷ್ಣದೇವರಾಯನ ಕಾಲಘಟ್ಟದಲ್ಲಿ ಇದ್ದವರು ಕನಕದಾಸರು. ಆ ಕಾಲದ ಎಲ್ಲಾ ಏಳುಬೀಳು ಗಳನ್ನು ಕಂಡವರು. ದಾಸ ಶ್ರೇಷ್ಟರು. ಅಂತರಂಗ ಶುದ್ಧತೆಯನ್ನು ಸಾಧಿಸಿದ ಕನಕದಾಸರು, ಹಲವು ಬಗೆಯಲ್ಲಿ ಅಂದರೆ ಪಾಳೆಯಗಾರ, ಯೋಧ, ದಾಸ, ಭಕ್ತ, ಕವಿ, ದಾರ್ಶನಿಕರಾಗಿ ಬೆಳೆದವರು ಎಂದು ಕಾರ್ಕಳ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಅರುಣ್ ಕುಮಾರ್ ಎಸ್.ಆರ್ ಹೇಳಿದ್ದಾರೆ.
ಉಡುಪಿಯ ಕನಕದಾಸ ಅಧ್ಯಯನ ಸಂಶೋಧನ ಪೀಠ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿ ಇವರ ಸಹಯೋಗದಲ್ಲಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ ವಿಸ್ತರಣಾ ಉಪನ್ಯಾಸ ಮಾಲಿಕೆಯ ತೃತೀಯ ಉಪನ್ಯಾಸದಲ್ಲಿ ‘ಕನಕದಾಸರ ಕೃತಿ ಮೋಹನ ತರಂಗಿಣಿ’ ಕುರಿತು ಮಾತನಾಡುತ್ತಿದ್ದರು.
ಕನಕದಾಸರ ಲೋಕಾನುಭವ ಇತರ ದಾಸ ಶ್ರೇಷ್ಟರಿಗಿಂತ ಭಿನ್ನ. ಮೋಹನ ತರಂಗಿಣಿ ಕಾವ್ಯ ವೈವಿಧ್ಯಮಯ ಲೋಕಾನುಭವದಿಂದ ಒಡಮೂಡಿದ್ದು, ಪರಿಪೂರ್ಣ ಕಾವ್ಯ ವೆನಿಸಿಕೊಳ್ಳುತ್ತದೆ. ಮೋಹನ ತರಂಗಿಣಿ ಕೃಷ್ಣಕಥೆಯ ಸುಂದರ ಹಂದರ. ಭಾಗವತ ಶಿವಪುರಾಣ ಮುಂತಾದವುಗಳಿಂದ ಕಥೆಯನ್ನು ಆಯ್ದು ಸುಂದರವಾಗಿ ನವರಸಭರಿತವಾದ ಕಾವ್ಯ ಕಟ್ಟಿಕೊಟ್ಟವರು ಕನಕದಾಸರು. ಇದು ಸಮತೋಲಿತ ಚಿಂತನೆ ಇರುವ ಅದ್ಭುತ ಕಾವ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ.ಎ.ರಾಘವೇಂದ್ರ ವಹಿಸಿದ್ದರು. ಕನಕದಾಸ ಅಧ್ಯಯನ ಸಂಶೋಧನ ಪೀಠ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಾಧ್ಯಾಪಕ ಡಾ. ಸತೀಶ್ ವಂದಿಸಿದರು. ಡಾ ಪ್ರಜ್ಞಾ ಮಾರ್ಪಳ್ಳಿ ಕಾರ್ಯಕ್ರಮ ನಿರ್ವಹಿಸಿದರು.