ಐಷಾರಾಮಿ ಕಾರು ನಾಪತ್ತೆ ಪ್ರಕರಣ; ಸಿಸಿಬಿ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ವರದಿ ಸಲ್ಲಿಕೆ

Update: 2021-02-26 16:35 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಫೆ. 26: ಪೊಲೀಸ್ ವಶದಲ್ಲಿದ್ದ ಐಷಾರಾಮಿ ಕಾರುಗಳ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತ ಸಿಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧವೇ ಸಿಐಡಿಗೆ ವರದಿ ಸಲ್ಲಿಕೆಯಾಗಿದೆ.

ಜನರಿಗೆ ಹಣ ದ್ವಿಗುಣ ಮಾಡಿಕೊಡುವ ಆಮಿಷವೊಡ್ಡಿ 30 ಕೋಟಿ ರೂಪಾಯಿ ವಂಚಿಸಿದ್ದ ಕನ್ಸ್‌ಸ್ಟ್ರಕ್ಷನ್ ಆ್ಯಂಡ್ ಬಿಲ್ಡರ್ ಪ್ರೈ.ಲಿ. ಸಂಸ್ಥೆಯೊಂದರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಸಿಸಿಬಿ ಪೊಲೀಸರು, ವಂಚನೆ ಆರೋಪದಲ್ಲಿ ಬಂಧಿತರಾಗಿದ್ದ ಮೂವರು ಆರೋಪಿಗಳಿಂದ ಜಾಗ್ವಾರ್, ಬಿಎಂಡಬ್ಲೂ, ಪೋರ್ಷ್ ಸೇರಿ ಮೂರು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು.

ತಮ್ಮ ವಶದಲ್ಲಿದ್ದ ಜಾಗ್ವಾರ್ ಕಾರನ್ನು ಮಂಗಳೂರಿನ ಸಿಸಿಬಿ ಅಧಿಕಾರಿಗಳು ಮಾರಾಟ ಮಾಡಿದ್ದಾರೆ. ಪೋರ್ಷ್ ಹಾಗೂ ಬಿಎಂಡಬ್ಲೂ ಕಾರನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈಗಾಗಲೇ ಈ ಅಧಿಕಾರಿಗಳು ಮಂಗಳೂರು ಸಿಸಿಬಿ ವಿಭಾಗದಿಂದ ವರ್ಗಾವಣೆಯಾಗಿದ್ದಾರೆ. ಪೊಲೀಸ್ ವಶದಲ್ಲಿದ್ದ ಐಷಾರಾಮಿ ಕಾರಗಳ ದುರ್ಬಳಕೆ ಮತ್ತು ಮಾರಾಟ ಪ್ರಕರಣ ಕುರಿತು ತನಿಖೆಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಆದೇಶಿಸಿದ್ದರು. ತನಿಖೆ ನಡೆಸಿ ವರದಿ ತಯಾರಿಸಿರುವ ಡಿಸಿಪಿ ವಿನಯ್ ಗಾಂವ್ಕರ್, ಇದನ್ನು ಡಿಜಿಪಿಗೆ ರವಾನಿಸಿದ್ದಾರೆ.

ಮುಂದಿನ ವಾರ ಮಂಗಳೂರಿಗೆ ಸಿಐಡಿ ತಂಡ

ಡಿಐಜಿ ಅವರು ಸಿಸಿಬಿ ವಿರುದ್ಧ ಸಮಗ್ರ ತನಿಖೆಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸ್ ತಂಡ ಎಸ್ಪಿ ರೋಹಿಣಿ ಕಟ್ಟೋಚ್ ನೇತೃತ್ವದಲ್ಲಿ ಶೀಘ್ರವೇ ಮಂಗಳೂರಿಗೆ ಆಗಮಿಸುವ ನಿರೀಕ್ಷೆ ಇದೆ. ಸಿಐಡಿ ಇನ್‌ಸ್ಪೆಕ್ಟರ್ ಚಂದ್ರಪ್ಪ ಸೇರಿದಂತೆ ತಂಡ ಈ ತನಿಖೆ ನಡೆಸಲು ಒಂದೆರಡು ದಿನದಲ್ಲಿ ಮಂಗಳೂರಿಗೆ ಆಗಮಿಸುವ ನಿರೀಕ್ಷೆ ಇದೆ. ಮೇಲ್ನೋಟಕ್ಕೆ ತಪ್ಪು ಕಂಡು ಬಂದಿರುವ ಎಸ್‌ಐವೊಬ್ಬರು ವರ್ಗಾವಣೆಗೊಂಡು ಬೇರೆ ಜಿಲ್ಲೆಯಲ್ಲಿ ಕರ್ತವ್ಯದಲ್ಲಿದ್ದಾರೆ. ಉಳಿದವರು ಮಂಗಳೂರಿನಲ್ಲೇ ಕಾರ್ಯನಿರ್ವಹಿಸುತ್ತಿರುವುದರಿಂದ ಸಿಐಡಿ ತಂಡ ಇಲ್ಲಿಗೇ ಆಗಮಿಸಿ ತನಿಖೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News