ಮಂಗಳೂರಿನಲ್ಲಿ ಹೈಟೆಕ್ ಪಿಶ್ ಪಾರ್ಕ್: ಸಚಿವ ನಾರಾಯಣಗೌಡ

Update: 2021-02-26 16:49 GMT

ಮಂಗಳೂರು, ಫೆ.26: ಮೀನಿನ ಉತ್ಪನ್ನಗಳ ಉತ್ಪಾದನೆಗಾಗಿ ಮಂಗಳೂರಿನಲ್ಲಿ ಹೈಟೆಕ್ ಫಿಶ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಡಾ.ಕೆ.ಸಿ.ನಾರಾಯಣ ಗೌಡ ಹೇಳಿದ್ದಾರೆ.

ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ನಗರದ ಖಾಸಗಿ ಹೊಟೇಲಿನಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಕರಾವಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೀನು ಸಂಗ್ರಹಿಸಲಾಗುತ್ತದೆ. ಮೀನು ಬಳಕೆಯಾಗಿ ಉಳಿದ ಮೀನು ಹಾಳಾಗದಂತೆ ಶೀತಲೀಕರಣ ಘಟಕದ ಮೂಲಕ ಅದನ್ನು ಸಂರಕ್ಷಿಸಿಟ್ಟು ನಂತರ ತಂತ್ರಜ್ಞಾನ ಬಳಸಿಕೊಂಡು ಮೀನಿನ ಚಿಪ್ಸ್, ಉಪ್ಪಿನಕಾಯಿ ಮತ್ತಿತರ ವಸ್ತುಗಳನ್ನು ಉತ್ಪಾದಿಸಲಾಗುವುದು. ಮೀನುಗಾರಿಕೆ ಕಾಲೇಜು ಬಳಿ ಇದಕ್ಕೆ ಜಮೀನು ಪರಿಶೀಲಿಸಲಾಗುವುದು ಎಂದರು.

ದ.ಕ.ಜಿಲ್ಲೆಗೆ ಮಂಜೂರಾಗಿರುವ ಸಂಸದರು, ಶಾಸಕರ ಹಾಗೂ ಸರಕಾರದ ವಿವಿಧ ಅನುದಾನಗಳಲ್ಲಿ ಬಾಕಿ ಉಳಿದಿರುವ 26 ಕೋ.ರೂ.ವೆಚ್ಚದ ಕಾಮಗಾರಿ ಶೀಘ್ರ ಪೂರ್ಣಗೊಳ್ಳಬೇಕಿದೆ. ಈ ಅನುದಾನವನ್ನು ವರ್ಷಾಂತ್ಯದೊಳಗೆ ಕಾಮಗಾರಿ ಪೂರ್ತಿಗೊಳಿಸಬೇಕಿದೆ. ರಾಜ್ಯದ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತಿತರ ಅಧಿಕಾರಿಗಳಲ್ಲಿ ವೀಡಿಯೊ ಕಾನ್ಫರೆನ್ಸ್ ಮಾಡಿ ಮಾತನಾಡಿದ್ದೇನೆ. ಈಗ ಜಿಲ್ಲೆಗಳಿಗೆ ಪ್ರವಾಸ ಮಾಡಿ ಅನುದಾನ ಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸುತ್ತಿದ್ದೇನೆ ಎಂದರು.

ಲೇಡಿಸ್ ಹಾಸ್ಟೆಲ್ 

ನಗರದ ಮಂಗಳಾ ಕ್ರೀಡಾಂಗಣದ ಬಳಿ ಹೆಣ್ಮಕ್ಕಳ ಕ್ರೀಡಾ ಹಾಸ್ಟೆಲ್ ಸ್ಥಾಪನೆಗೆ 1.5 ಕೋ. ರೂ. ಮಂಜೂರಾಗಿದೆ. ಹೆಣ್ಮಕ್ಕಳ ಸುರಕ್ಷೆ ದೃಷ್ಟಿ ಯಿಂದ ಪ್ರತ್ಯೇಕ ಶೌಚಾಲಯ ಸಹಿತ ಕೊಠಡಿ ನಿರ್ಮಿಸಬೇಕಿದ್ದು, ಹೆಚ್ಚಿನ ಅನುದಾನ ಕೊಡಲು ಸರಕಾರ ಸಿದ್ಧವಿದೆ. ಕ್ರೀಡೆಯಲ್ಲಿ ಹೆಣ್ಣು ಮಕ್ಕಳು ಸಾಧನೆ ಮಾಡುತ್ತಿದ್ದಾರೆ. ಅವರಿಗೆ ಊಟ, ವಸತಿ ಸಹಿತ ಹೆಚ್ಚಿನ ಸೌಲಭ್ಯ ಕಲ್ಪಿಸಿ ಕೊಡಬೇಕು. ಇದು ಅವರ ಸಾಧನೆಗೆ ಸಹಕಾರಿಯಾಗಲಿದೆ ಎಂದ ಸಚಿವರು, ಮಂಗಳೂರು ಸ್ಮಾರ್ಟ್ ಸಿಟಿಯಾಗಿದ್ದು, ಅದಕ್ಕೆ ಬೇಕಾದ ಸೌಲಭ್ಯವನ್ನು ‘ಖೇಲೋ ಇಂಡಿಯಾ ಖೇಲೋ’ ಯೋಜನೆ ಮೂಲಕ ಕಲ್ಪಿಸಲಾಗುವುದು. ಜಿಲ್ಲೆಯ 20 ಯೋಜನೆಗಳಿಗೆ ಶಿಲಾನ್ಯಾಸ ಮಾಡಲಾಗಿದೆ. ಜಿಲ್ಲೆಗೆ ಬೇಕಾದ ಎಲ್ಲಾ ಸೌಲಭ್ಯ ಕಲ್ಪಿಸಲು ಇಲಾಖೆ ಬದ್ಧವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News