ಎನ್‌ಎಂಪಿಟಿ, ವಿವಿಧ ಸಂಸ್ಥೆಗಳ ನಡುವೆ ವ್ಯವಹಾರ ಒಪ್ಪಂದ: 100 ಕೋಟಿಗೂ ಅಧಿಕ ಬಂಡವಾಳ ಹೂಡಿಕೆಗೆ ಅನುಮತಿ

Update: 2021-02-26 18:01 GMT

ಮಂಗಳೂರು, ಫೆ. 26: ಎನ್‌ಎಂಪಿಟಿ ಹಾಗೂ ವಿವಿಧ ಸಂಸ್ಥೆಗಳ ನಡುವೆ ವ್ಯವಹಾರ ಒಪ್ಪಂದದ ಜತೆಗೆ 100 ಕೋಟಿ ರೂಗಳಿಗೂ ಅಧಿಕ ಬಂಡವಾಳ ಹೂಡಿಕೆಗೆ ಇಂದು ರಾಜ್ಯದ ಪರಿಸರ, ಜೀವಿಶಾಸ್ತ್ರ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಉಪಸ್ಥಿತಿಯಲ್ಲಿ ಅನುಮತಿ ನೀಡಲಾಯಿತು.

ಪಣಂಬೂರಿನ ಎನ್‌ಎಂಪಿಟಿ ಆಡಳಿತ ಮಂಡಳಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರ ಸಮ್ಮುಖ ಪ್ರಮುಖ ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಕ್ರೂಸ್ ನಲ್ಲಿ ನವಮಂಗಳೂರು ಬಂದರು ಮೂಲಕ ವಿದೇಶಿ ಪ್ರವಾಸಿಗರು ಬರುತ್ತಿದ್ದು ಇವರಿಗೆ ನಮ್ಮ ಕರ್ನಾಟಕದ ಪಾರಂಪರಿಕ ಸ್ಥಳ, ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ ಹೆಲಿ ಟೂರಿಸಂಗೆ ಬೇಕಾದ ಎಲ್ಲಾ ಕಾನೂನಾತ್ಮಕ ಅನುಮತಿ ಸಹಯೋಗವನ್ನು ಇಲ್ಲಿನ ಆಡಳಿತ ಮಂಡಳಿೆ ನೀಡಲಾಗುವುದು ಎಂದರು.

ಎನ್‌ಎಂಪಿಟಿಯ ಜತೆ ಸಹಕರಿಸಿ ಇರುವ ನ್ಯೂನ್ಯತೆಗಳನ್ನು ಸರಿಪಡಿಸಲಾಗುವುದು. ಪ್ರವಾಸೋದ್ಯಮಕ್ಕೆ ಇರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಲು ಕರ್ನಾಟಕ ಸರಕಾರ ಸಂಪೂರ್ಣ ಸಹಕಾರವನ್ನು ನೀಡಲಿದೆ ಎಂದವರು ಹೇಳಿದರು.

ಟೆಂಪಲ್ ಟೂರಿಸಂ ಯೋಜನೆ ಕೂಡ ಸರಕಾರದ ಮುಂದಿದೆ. ಪ್ರವಾಸೋದ್ಯಮಕ್ಕೆ ಮುಂದಿನ ಬಜೆಟ್‌ನಲ್ಲಿ ಹೆಚ್ಚು ಅನುದಾನ ಪ್ರಸ್ತಾಪವಿದೆಯೆ ಎಂಬ ಪ್ರಶ್ನೆಗೆ ನಮ್ಮಲ್ಲಿ ಯೋಜನೆಯಿಲ್ಲ. ಯೋಜನೆ ರೂಪಿಸಿದರೆ ಸರಕಾರ ಅನುದಾನ ನೀಡುತ್ತದೆ ಎಂದರು.

ಬಂದರಿನ ಅಭಿವೃದ್ಧಿಗೆ ಪೂರಕವಾಗಿ ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರು ಮಾತನಾಡಿ, ಬಂದರು ಸುತ್ತಮುತ್ತ ನೂರಾರು ಟ್ರಕ್‌ಗಳು ಓಡಾಟ ನಡೆಸುತ್ತಿದ್ದು, ಎಲ್ಲೆಂದರಲ್ಲಿ ರಸ್ತೆಬದಿಗಳಲ್ಲಿ ಪಾರ್ಕ್ ಮಾಡಲಾಗುತ್ತದೆ. ಇದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಮಂಗಳೂರು ಹೆದ್ದಾರಿ ಬಳಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ 50 ಎಕರೆ ಜಾಗವನ್ನು ಗುರುತಿಸುವ ಪ್ರಕ್ರಿಯೆ ನಡೆದಿದೆ. ಇದಲ್ಲದೆ ಹೆದ್ದಾರಿಯ 4 ಕಡೆಗಳಲ್ಲಿ ಟ್ರಕ್ ವಿಶ್ರಾಂತಿ ಸ್ಥಳಗಳನ್ನು ಗುರುತಿಸಿ ಸೌಲಭ್ಯವನ್ನು ಒದಗಿಸಲಾಗುವುದು ಎಂದರು.

ಎನ್‌ಎಂಪಿಟಿ ಚೇಯರ್‌ಮನ್ ಎ.ವಿ. ರಮಣ ಅಕ್ಕರಾಜು ಅವರು ಬಂದರು ಬೆಳೆದು ಬಂದ ಬಗೆ ಹಾಗೂ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಮೆರೈನ್ ಶೃಂಗ ಸಭೆಯ ಮಾಹಿತಿ ನೀಡಿದರು. ಬಿಜೆಪಿ ಮುಖಂಡ ಕಿಶೋರ್ ಕುಮಾರ್, ಬಂದರಿನ ಪ್ರಮುಖ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.

''ಬಂದರಿನ ವ್ಯವಹಾರ ವೃದ್ಧಿಗೆ ಮಂಗಳೂರು ಬೆಂಗಳೂರು ನಡುವೆ ಉತ್ತಮ ರಸ್ತೆ ಸಂಪರ್ಕದ ಅವಶ್ಯಕತೆಯಿದೆ. ಇಲ್ಲಿನ ಜಲಸಂಪತ್ತನ್ನು ಉಪಯೋಗಿಸಿಕೊಂಡು ಪ್ರವಾಸೋಧ್ಯಮ ಅಭಿವೃದ್ಧಿ ಪಡಿಸಲಾಗುವುದು. ಹೆಲ್ತ್ ಟೂರಿಸಂ ಮೂಲಕ ಇಲ್ಲಿನ ಆಯುರ್ವೇದ ಚಿಕಿತ್ಸೆಯನ್ನು ವಿಶ್ವಕ್ಕೆ ಪರಿಚಯಿಸುವ ಅಗತ್ಯವಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು''.

-ಸಿ.ಪಿ.ಯೋಗೇಶ್ವರ್, ಸಚಿವರು, ರಾಜ್ಯದ ಪರಿಸರ, ಜೀವಿಶಾಸ್ತ್ರ ಹಾಗೂ ಪ್ರವಾಸೋದ್ಯಮ ಇಲಾಖೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News