ಮಂಗಳೂರು: ಸಚಿವ ಯೋಗೇಶ್ವರ್‌ಗೆ ಜೆಡಿಎಸ್ ಕಾರ್ಯಕರ್ತರಿಂದ ಘೇರಾವ್

Update: 2021-02-28 06:04 GMT

ಮಂಗಳೂರು : ಕುಮಾರಸ್ವಾಮಿಯನ್ನು ಜೋಕರ್ ಎಂದು ಕರೆದಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ಅವರಿಗೆ ಮಂಗಳೂರಿನಲ್ಲಿ ದ.ಕ. ಜಿಲ್ಲಾ ಯುವ ಜೆಡಿಎಸ್ ಕಾರ್ಯಕರ್ತರು ಘೇರಾವ್ ಹಾಕಿದ ಘಟನೆ ರವಿವಾರ ಬೆಳಗ್ಗೆ ನಡೆದಿದೆ.

ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಸಚಿವ ಯೋಗೇಶ್ವರ್ ಅವರು ವಾಸ್ತವ್ಯ ಇದ್ದ ಹೋಟೆಲ್ ಬಳಿ ಜಮಾಯಿಸಿದ್ದು, ಬೆಂಗಳೂರಿಗೆ ತೆರಳಲು ಅಣಿಯಾಗುತ್ತಿದ್ದ ಸಚಿವರು ಯುವ ಜೆಡಿಎಸ್ ಕಾರ್ಯಕರ್ತರನ್ನು ಕಂಡು ತಮ್ಮ ಸರಕಾರಿ ವಾಹನವನ್ನು ಬಿಟ್ಟು ಬೇರೆ ವಾಹನದಲ್ಲಿ ಪ್ರಯಾಣಿಸಿದರು ಎಂದು ತಿಳಿದುಬಂದಿದೆ. ಇದನ್ನರಿತ ಯುವ ಜೆಡಿಎಸ್ ಕಾರ್ಯಕರ್ತರು ಸಚಿವರ ಎಸ್ಕಾರ್ಟ್ ವಾಹನಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಈ ವೇಳೆ ಮಾತನಾಡಿದ ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ಸಚಿವ ಯೋಗೇಶ್ವರ್ ಅವರು ಶನಿವಾರ ಮಂಗಳೂರಿನಲ್ಲಿ ನಮ್ಮ ನಾಯಕರಾದ ಎಚ್ ಡಿ ಕುಮಾರಸ್ವಾಮಿ ಅವರನ್ನು ಜೋಕರ್ ಎಂದು ಕರೆದಿರುವುದು ಖಂಡನೀಯ. ದ.ಕ. ಜಿಲ್ಲೆಯಲ್ಲಿ ಕೂಡ ಜೆ ಡಿಎಸ್ ಬಲಿಷ್ಠವಾಗಿದೆ ಎನ್ನುವುದನ್ನು ಸಚಿವರು ಮರೆತು ಇಂತಹ ಹೇಳಿಕೆ ನೀಡಿದ್ದು, ನಮ್ಮ ಶಕ್ತಿ ಏನು ಎಂದು ತೋರಿಸಲು ಇಲ್ಲಿ ಅವರ ವಿರುದ್ಧ ಪ್ರತಿಭಟಿಸಲು ಸೇರಿದ್ದೇವೆ. ಆದರೆ ನಮ್ಮನ್ನ ನೋಡಿದ ಸಚಿವರ ಹಿಂಬಾಗಿಲ ಮೂಲಕ ತಪ್ಪಿಸಿಕೊಂಡು ಹೋಗಿದ್ದು ತನ್ನ ಸರಕಾರಿ ವಾಹನದಲ್ಲಿ ಬೇರೆಯವರನ್ನು ಕೂರಿಸಿ ಅವರು ಬೇರೆ ಮಾರ್ಗದಿಂದ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಸಾರ್ವಜನಿಕವಾಗಿ ಅಂತಹ ಕೀಳು ಹೇಳಿಕೆ ನೀಡಿರುವ ಸಚಿವರಿಗೆ ನಿಜವಾದ ಧೈರ್ಯವಿದ್ದಲ್ಲಿ ನೇರ ಮಾರ್ಗದಿಂದಲೇ ತೆರಳುತ್ತಿದ್ದರು, ಅದನ್ನು ಬಿಟ್ಟು ಹಿಂಬಾಗಿಲಿನಿಂದ ಹೋಗುತ್ತಿರಲಿಲ್ಲ. ಇನ್ನಾದರೂ ಸಚಿವರು ಇಂತಹ ಹೇಳಿಕೆ ನೀಡುವುದನ್ನು ಬಿಟ್ಟು ತಮ್ಮ ಘನತೆಗೆ ತಕ್ಕಂತೆ ವರ್ತಿಸಲಿ. ಇಂತಹ ವರ್ತನೆ ಪುನರಾವರ್ತನೆ ಯಾದಲ್ಲಿ ಮುಂದಿನ ದಿನಗಳಲ್ಲಿ ಬೇರೆ ರೀತಿಯಲ್ಲಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ದ.ಕ. ಜಿಲ್ಲಾ ಯುವ ಜನತಾದಳ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಫೈಝಲ್ ಮುಹಮ್ಮದ್, ಯುವ ಜನತಾದಳದ ಮಂಗಳೂರು ಉತ್ತರ ಘಟಕಾಧ್ಯಕ್ಷ ರತೀಶ್ ಕರ್ಕೇರ , ಮಂಗಳೂರು ಉತ್ತರ ಉಪಾಧ್ಯಕ್ಷ ಹಿತೇಶ್ ರೈ, ಯುವ ಜನತಾದಳ ಉಪಾಧ್ಯಕ್ಷ  ಮುಹಮ್ಮದ್ ಆಸಿಫ್, ಸತ್ತಾರ್ ಬಂದರ್, ಪ್ರದೀಪ್, ರೊಹಿತ್, ಶ್ರೀನಾಥ್ ಪೂಜಾರಿ ಹಾಗೂ ಹಲವು ಕಾರ್ಯಕರ್ತರು ಪಾಲ್ಗೊಂಡಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News