ಆತ್ಮವಿಶ್ವಾಸ, ಕಠಿಣ ಪರಿಶ್ರಮದಿಂದ ಯಾವುದೇ ಸಾಧನೆ ಮಾಡಲು ಸಾಧ್ಯ: ಮಾಜಿ ಸಚಿವ ವಿನಯ ಕುಮಾರ್ ಸೊರಕೆ

Update: 2021-02-28 08:54 GMT

ಉಡುಪಿ : ಸಾಧನೆಗೆ ಯಾವುದೇ ದೈಹಿಕ ನ್ಯೂನತೆ ಅಡ್ಡಿಯಾಗುವುದಿಲ್ಲ. ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮ ಇದ್ದರೆ ಯಾವುದೇ ಸಾಧನೆ ಸಾಧ್ಯ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ಮಲ್ಪೆ ಎಜುಕೇಶನ್ ಸೊಸೈಟಿಯ ಆಶ್ರಯದಲ್ಲಿ ಶನಿವಾರ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಮಲ್ಪೆ ಫ್ಲವರ್ಸ್ ಆಫ್ ಪ್ಯಾರಡೈಸ್ ಪಬ್ಲಿಕ್ ಸ್ಕೂಲ್‌ನ 20ನೇ ವಾರ್ಷಿಕೋತ್ಸವದ ಪ್ರೇರಣಾ ದಿನದ ಉದ್ಘಾಟನಾ ಸಮರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಉಡುಪಿ ಜಿಲ್ಲೆಯು ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿ ಇರಲು ಖಾಸಗಿ ಶಿಕ್ಷಣ ಸಂಸ್ಥೆಗಳ ಬದ್ದತೆ ಕೂಡ ಮುಖ್ಯವಾಗಿದೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್.ನಾಗೂರ ಶಾಲಾ ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಿ, ಗುರುವಿನ ಶಕ್ತಿ ಎಂಬುದು ಅದ್ಭುತ. ಪೋಷಕರು ತಮ್ಮ ಮಕ್ಕಳಿಗೆ ಪ್ರೋತ್ಸಾಹ ನೀಡುವುದರಿಂದ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಮಾರಂಭವನ್ನು ಉದ್ಯಮಿ ಸಾಧು ಸಾಲಿಯಾನ್ ಉದ್ಘಾಟಿಸಿ ಶುಭಹಾರೈಸಿದರು. ಅಪ್ರತಿಮ ಸಾಧಕಿ ಮುಂಬೈಯ ಡಾ.ರೋಶನ್ ಶೇಕ್ ಮಾತನಾಡಿದರು. ಮಲ್ಪೆ ಅಬೂಬಕರ್ ಸಿದ್ದೀಕ್ ಮಸೀದಿಯ ಅಧ್ಯಕ್ಷ ಖತೀಬ್ ಅಬ್ದುರ್ರಶೀದ್ ಮಲ್ಪೆ ಎಜುಕೇಶನ್ ಟ್ರಸ್ಟ್‌ನ್ನು ಉದ್ಘಾಟಿಸಿದರು. ಇತ್ತೀಚೆಗೆ ನಿಧನರಾದ ಶಿಕ್ಷಕ ರಾಜೇಶ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಉದ್ಯಮಿಗಳಾದ ಅಶ್ರಫ್ ಬೆಂಗ್ರೆ, ಹಾಜಿ ಅಬ್ದುಲ್ಲಾ ಪರ್ಕಳ, ಆರ್.ಕೆ.ನಾಯಕ್, ತೋನ್ಸೆ ಹೆಲ್ತ್ ಸೆಂಟರ್‌ನ ಅಧ್ಯಕ್ಷ ಬಿ.ಎಂ.ಝಫರ್, ಯಶೋಧಾ, ಮಲ್ಪೆ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಎಫ್.ಎಂ.ಅಬ್ದುರ್ರಝಾಕ್, ಶಾಲಾ ಅಕಾಡಮಿಕ್ ನಿರ್ದೇಶಕ ಯಾಸೀನ್ ಮಲ್ಪೆ ಮತ್ತು ಇಮ್ರಾನುಲ್ಲಾ ಖಾನ್ ಉಪಸ್ಥಿತರಿದ್ದರು.

ವರ್ಷದ ಉತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ಅಲ್ಫಾ ಅಲ್ತಾಫ್, ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ದಿಕ್ಷೀತಾ, ಉತ್ತಮ ಪೊಷಕ ಪ್ರಶಸ್ತಿಯನ್ನು ಅಪೋಲೊ ದಂಪತಿಗೆ ಪ್ರದಾನ ಮಾಡಲಾಯಿತು.

ಶಾಲಾ ಪ್ರಾಂಶುಪಾಲೆ ಶ್ವೇತಾ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ನಾಯಕಿ ಅಫೀಫಾ ಸ್ವಾಗತಿಸಿದರು. ವಿದ್ಯಾರ್ಥಿ ನಾಯಕ ಲವೀಶ್ ಸುವರ್ಣ ವಂದಿಸಿದರು. ಬಳಿಕ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಾದ ನಂದಿನಿ, ಮಹೇಶ್, ಕೌಶಿಕ್ ಆಚಾರ್ಯ, ಸುಹೈಬ್ ಮನ್ಸೂರ್ ಹಸನ್ ಅವರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News