ಮಂಗಳೂರು ನಗರ ಪೊಲೀಸ್ ಆಯುಕ್ತಾಲಯದಲ್ಲಿ ಎಸ್ಸಿ-ಎಸ್ಟಿ ಸಭೆ

Update: 2021-02-28 12:05 GMT

ಮಂಗಳೂರು, ಫೆ.28: ಮಂಗಳೂರ ನಗರ ಪೊಲೀಸ್ ಆಯುಕ್ತಾಲಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಂ ಶಂಕರ್‌ರ ಅಧ್ಯಕ್ಷತೆಯಲ್ಲಿ ಮಾಸಿಕ ದಲಿತ ಕುಂದು ಕೊರತೆ ಸಭೆಯು ರವಿವಾರ ನಡೆಯಿತು.

ಈ ಸಂದರ್ಭ ಮಾತನಾಡಿದ ದಲಿತ ಸಂಘಟನೆಯ ಮುಖಂಡ ಅನಿಲ್ ನಗರದ ಕಂಕನಾಡಿಯಲ್ಲಿ ದಲಿತ ವ್ಯಕ್ತಿಯನ್ನು ಬಳಸಿಕೊಂಡು ಮೇಲ್ವರ್ಗದ ವ್ಯಕ್ತಿಯೊಬ್ಬರು ಸರಕಾರಿ ಜಾಗದಲ್ಲಿ ಯಾವುದೇ ಅನುಮತಿ ಪಡೆಯದೆ ಕೊರಗಜ್ಜನ ಗುಡಿ ನಿರ್ಮಾಣ ಮಾಡುತ್ತಿದ್ದಾರೆ. ಯಾವ ಕಾರಣಕ್ಕೂ ಇದಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ದಲಿತ ವರ್ಗದವರು ಆರಾಧನೆ ಮಾಡುವ ಕೊರಗಜ್ಜನ ಗುಡಿಯನ್ನು ಮೇಲ್ವರ್ಗದ ವ್ಯಕ್ತಿ ಆರ್ಥಿಕ ಲಾಭಕ್ಕಾಗಿ ನಿರ್ಮಾಣ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಬೇಕಾದ ಸಾಮಗ್ರಿಗಳನ್ನು ತಂದು ಹಾಕಿದ್ದಾರೆ. ಅಲ್ಲಿ ಕಾಮಗಾರಿ ನಡೆಸದಂತೆ ಪೊಲೀಸರು ಎಚ್ಚರಿಕೆ ನೀಡಬೇಕು ಎಂದು ಅನಿಲ್ ಆಗ್ರಹಿಸಿದರು.

ಇನ್‌ಸ್ಪೆಕ್ಟರ್ ಸವಿತ್ರತೇಜ ಪ್ರತಿಕ್ರಿಯಿಸಿ ಈ ವಿವಾದಿತ ಸ್ಥಳ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತಿದೆ. ಈಗಾಗಲೇ ಅನುಮತಿ ಪಡೆಯದೆ ಕಾಮಗಾರಿ ಆರಂಭಿಸದಂತೆ ಎಚ್ಚರಿಕೆ ನೀಡಿದ್ದೇನೆ. ಕಾಮಗಾರಿ ತೆರವು ಮಾಡುವುದಾದರೆ ಭದ್ರತೆ ಒದಗಿಸುವುದಾಗಿ ಪಾಲಿಕೆ ಅಧಿಕಾರಿಗಳಿಗೂ ತಿಳಿಸಲಾಗಿದೆ ಎಂದರು.

ನಗರದ ದಡ್ಡಲ್‌ಕಾಡ್ ಸಹಿತ ನಾಲ್ಕೈದು ಕಡೆ ದೈವಸ್ಥಾನಗಳ ಕಾಣಿಕೆ ಹುಂಡಿಯನ್ನು ಅಪವಿತ್ರಗೊಳಿಸಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು ಎಂದು ಸದಾಶಿವ ಉರ್ವಸ್ಟೋರ್ ಒತ್ತಾಯಿಸಿದರು.

ಇದೊಂದು ಕ್ಲಿಷ್ಟಕರ ಪ್ರಕರಣವಾಗಿದೆ. ಬಹುತೇಕ ದೈವಸ್ಥಾನಗಳಲ್ಲಿ ಸಿಸಿ ಕ್ಯಾಮರಾಗಳಿಲ್ಲ. ಇದ್ದರೂ ಕಾಣಿಕೆ ಹುಂಡಿಗಳನ್ನು ತಿಂಗಳಿಗೊಮ್ಮೆ ತೆರೆಯುವುದರಿಂದ ಘಟನೆ ಬೆಳಕಿಗೆ ಬರುತ್ತಿದೆ. ಆವಾಗ ಅದರಲ್ಲಿ ದಾಖಲಾಗಿರುವ ದೃಶ್ಯ ಹೋಗಿರುತ್ತದೆ. ಇಲಾಖೆ ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದೆ ಎಂದು ಹರಿರಾಂ ಶಂಕರ್ ಹೇಳಿದರು.

ಮೆಸ್ಕಾಂನಲ್ಲಿ ದಲಿತ ಸಮುದಾಯದ ನೌಕರರ ವಿರುದ್ಧ ಮೂಕರ್ಜಿಗಳು ಬರುತ್ತಿವೆ. ಮೇಲಾಧಿಕಾರಿಗಳು ಇದನ್ನು ಪರಿಗಣಿಸಬಾರದು. ಅಲ್ಲದೆ ಪೊಲೀಸ್ ಇಲಾಖೆ ಈ ವಿಚಾರದಲ್ಲಿ ಮೆಸ್ಕಾಂ ಮುಖ್ಯಸ್ಥರಿಗೆ ಪತ್ರ ವ್ಯವಹಾರ ನಡೆಸಬೇಕು ಎಂದು ಶ್ರೀನಿವಾಸ ಒತ್ತಾಯಿಸಿದರು.

ಅಂಬೇಡ್ಕರ್ ನಿಗಮದಿಂದ ದಲಿತ ವರ್ಗದ ಪದವೀಧರರಿಗೆ ಅನ್ಯಾಯವಾಗುತ್ತಿದೆ. ಸ್ವ ಉದ್ಯೋಗ ಕೈಗೊಳ್ಳಲು ಹಲವಾರು ಯೋಜನೆಗಳಿದ್ದು, ಅದರ ಆಯ್ಕೆಯು ಶಾಸಕರ ಮೂಲಕ ನಡೆಯುತ್ತಿದೆ. ಅವರಿಗೆ ಬೇಕಾದ ಜನರಿಗೆ ನೀಡುವುದರಿಂದ ಅರ್ಹ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಆದ್ದರಿಂದ ಈ ಹಿಂದಿನಂತೆ ಜಿಲ್ಲಾಧಿಕಾರಿ ಮೂಲಕ ಫಲಾನುಭವಿಗಳ ಆಯ್ಕೆ ನಡೆಯಬೇಕು ಎಂದು ದಲಿತ ಮುಖಂಡ ಎಸ್‌ಪಿ ಆನಂದ ಒತ್ತಾಯಿಸಿದರು.

'ಜ್ಯೋತಿ ವೃತ್ತ ಅಲ್ಲ'
ಕೆಲವು ಬಸ್‌ಗಳಲ್ಲಿ ನಗರದ ಅಂಬೇಡ್ಕರ್ ವೃತ್ತದ ಬದಲು ಜ್ಯೋತಿ ವೃತ್ತ ಎಂದು ಬರೆಯಲಾಗಿದೆ. ಈ ಬಗ್ಗೆ ಆರ್‌ಟಿಒಗೆ ದೂರು ನೀಡಿದರೂ ಸ್ಪಂದನೆ ಸಿಕ್ಕಿಲ್ಲ ಎಂದು ದಲಿತ ಮುಖಂಡ ವಿಶ್ವನಾಥ್ ಹೇಳಿದರು. ಇದು ನೇರವಾಗಿ ಪೊಲೀಸ್ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ಆದರೂ ನಾವು ಆರ್‌ಟಿಒ ಅಧಿಕಾರಿಗೆ ಸೂಚಿಸುತ್ತೇವೆ ಎಂದು ಡಿಸಿಪಿ ಹರಿರಾಂ ಶಂಕರ್ ಹೇಳಿದರು.

ಬಂಟ್ವಾಳ ತಾಲೂಕಿನ ಕುರ್ನಾಡು ಗ್ರಾಪಂನಲ್ಲಿ 6 ಮಂದಿ ಮಾಡಬೇಕಾದ ಶುಚಿತ್ವದ ಕೆಲಸವನ್ನು ಬಾಬು ಮತ್ತು ಕುಸುಮ ದಂಪತಿ ಅತಿ ಕಡಿಮೆ ವೇತನದಲ್ಲಿ 12 ವರ್ಷಗಳಿಂದ ಮಾಡುತ್ತಿದ್ದಾರೆ. ಅವರಿಗೆ ಪಿಎಫ್, ಇಎಸ್‌ಐ ಸಹಿತ ಯಾವುದೇ ಸೌಲಭ್ಯಗಳಿಲ್ಲ. ಅವರ ಕಷ್ಟಕ್ಕೆ ಸ್ಪಂದಿಸಿ ನ್ಯಾಯ ಒದಗಸಿಕೊಡಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದರು.

'ಸಿಆರ್‌ಸಿಎಲ್ ಸ್ಪಂದನೆ ನೀಡುತ್ತಿಲ್ಲ'
ದಲಿತರ ಕುಂದುಕೊರತೆಗಳಿಗೆ ಸ್ಪಂದಿಸಬೇಕಾಗಿದ್ದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯವು ದಲಿತರ ಸಮಸ್ಯೆಗಳಿಗೆ ಯಾವುದೇ ಸ್ಪಂದನೆ ನೀಡುತ್ತಿಲ್ಲ. ದೂರು ನೀಡಿದರೆ ಹಿಂಬರಹ ನೀಡುವುದಿಲ್ಲ. ಸಿಬ್ಬಂದಿ ಕೆಲಸವನ್ನೂ ಮಾಡುತ್ತಿಲ್ಲ. ದೂರು ನೀಡಿದರೆ ಪ್ರತಿವಾದಿಯನ್ನು ಮಾತ್ರ ಕರೆಸಿ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ದಲಿತ ಮುಖಂಡರು ಸಭೆಯಲ್ಲಿ ಗಂಭೀರ ಆರೋಪ ಮಾಡಿದರು.

ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ ಗಾಂವ್ಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News